ವಿಶಾಖಪಟ್ಟಣ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ತವರು ಪಂದ್ಯದಲ್ಲಿ ಸೋಲನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್ ಗೆ ಮತ್ತೆ ಹಿನ್ನಡೆಯಾಗಿದೆ. ಸತತ ಎರಡು ಪಂದ್ಯಗಳಲ್ಲಿ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡ ಕಾರಣ ನಾಯಕ ರಿಷಭ್ ಪಂತ್ ಅವರಿಗೆ ದಂಡ ವಿಧಿಸಲಾಗಿದೆ.
ವಿಶಾಖಪಟ್ಟಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು 106 ರನ್ ಅಂತರದ ಭಾರಿ ಸೋಲನುಭವಿಸಿದೆ. ನಾಲ್ಕು ಪಂದ್ಯಗಳನ್ನು ಆಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಸದ್ಯ ಪಂತ್ ನಾಯಕತ್ವದ ತಂಡವು 10 ತಂಡಗಳ ಕೂಟದಲ್ಲಿ 9ನೇ ಸ್ಥಾನದಲ್ಲಿದೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡ ಕಾರಣ ರಿಷಭ್ ಪಂತ್ ಅವರಿಗೆ ಲೀಗ್ ನ ನೀತಿ ಸಂಹಿತೆಯ ಅಡಿಯಲ್ಲಿ ಪಂತ್ ಅವರ ತಂಡವು ಈ ಋತುವಿನ ಎರಡನೇ ಅಪರಾಧವಾಗಿರುವುದರಿಂದ ಅವರಿಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಪ್ರಕಟಣೆ ತಿಳಿಸಿದೆ.
ಡೆಲ್ಲಿ ಫ್ರಾಂಚೈಸಿಯ ನಾಯಕನ ಹೊರತಾಗಿ ಇತರ ಆಟಗಾರರಿಗೆ 6 ಲಕ್ಷ ರೂಪಾಯಿ ಅಥವಾ ಆಯಾ ಪಂದ್ಯ ಶುಲ್ಕದ 25 ಪ್ರತಿಶತದಷ್ಟು ದಂಡ ವಿಧಿಸಲಾಗಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್ ತಂಡವು ಏಳು ವಿಕೆಟ್ ನಷ್ಟಕ್ಕೆ 273 ರನ್ ಗಳನ್ನು ಕಲೆಹಾಕಿತ್ತು. ಆದರೆ ಚೇಸಿಂಗ್ ಆರಂಭಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 17.2 ಓವರ್ ಗಳಲ್ಲಿ 166 ರನ್ ಗಳಿಗೆ ಆಲೌಟಾಗಿತ್ತು.