ಬಿಲಾಸ್ ಪುರ್(ಹಿಮಾಚಲ್): ಕಾಂಗ್ರೆಸ್ ಪಕ್ಷದ ನಾಯಕತ್ವವೇ ( ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ) ಜಾಮೀನಿನ ಮೇಲೆ ಹೊರಗಿದೆ. ಅಷ್ಟೇ ಅಲ್ಲ ಹಿಮಾಚಲ್ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಸರ್ಕಾರ ಕೂಡಾ ಜಾಮೀನಿನ ಮೇಲೆ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಸರಣಿ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಇಲ್ಲಿ (ಹಿಮಾಚಲ್ ಕಾಂಗ್ರೆಸ್) ಎಲ್ಲರೂ ಬೇಲ್ ತಗೊಂಡಿದ್ದಾರೆ, ಇಡೀ (ಕಾಂಗ್ರೆಸ್) ಪಕ್ಷವೇ ಬೇಲ್ ಮೇಲಿದೆ. ಸರ್ಕಾರ ಕೂಡಾ ಜಾಮೀನಿನ ರಕ್ಷಣೆ ಪಡೆದಿದೆ ಎಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಟೀಕಿಸಿದರು.
ವರ್ಷಾಂತ್ಯದಲ್ಲಿ ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಅಣಿಯಾಗಿರುವ ಮುನ್ಸೂಚನೆ ಇದಾಗಿದೆ ಎಂದು ವರದಿ ತಿಳಿಸಿದೆ.
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ಮುಖಂಡ ವೀರಭದ್ರ ಸಿಂಗ್ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದು, ಅವರು ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರೂ ಕೂಡಾ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ಯುವ ರಾಜ(ರಾಹುಲ್ ಗಾಂಧಿ) ಜಾಮೀನಿನ ಮೇಲೆ ಹೊರಗಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬರು ಜಾಮೀನಿನ ಮೇಲೆ ಹೊರಗಿರುವುದಾಗಿ ಪ್ರಧಾನಿ ಮೋದಿ ವ್ಯಂಗ್ಯವಾಡಿದರು.