ಧಾರವಾಡ: ಜಿಲ್ಲೆಯಲ್ಲಿ ಜೂ. 11 ರಿಂದ 25ರ ವರೆಗೆ ರೈತರಿಗೆ ಕೃಷಿ ಹಾಗೂ ಕೃಷಿ ಸಂಬಂಧಿತ ಸಮಗ್ರ ಮಾಹಿತಿ ತಲುಪಿಸಲು ಸಮಗ್ರ ಕೃಷಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಎಸ್.ಬಿ. ಬೊಮ್ಮನಹಳ್ಳಿ ಹೇಳಿದರು. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾಮಟ್ಟದ ಕೃಷಿ ಅಭಿಯಾನ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಭಿಯಾನದ ಮೂಲಕ ವಿವಿಧ ಸರಕಾರಿ ಇಲಾಖೆಗಳಲ್ಲಿ ರೈತರಿಗಾಗಿ ಇರುವ ಯೋಜನೆ, ಸೌಲಭ್ಯಗಳ ಕುರಿತು ಮಾಹಿತಿ ರಥದ ಮೂಲಕ ತಿಳಿಸಲಾಗುವುದು. ಹೋಬಳಿ ಮಟ್ಟದಲ್ಲಿ ಹಾಗೂ ತಾಲೂಕಾ ಮಟ್ಟದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.
2018-19ನೇ ಮುಂಗಾರು ಹಂಗಾಮಿನ ಸಮಗ್ರ ಕೃಷಿ ಅಭಿಯಾನವು ಜೂ. 11ರಂದು ಗರಗ ಹಾಗೂ ಛಬ್ಬಿ ಹೋಬಳಿಯಲ್ಲಿ, 13ರಂದು ಅಳ್ನಾವರ ಮತ್ತು ಶಿರಗುಪ್ಪಿ ಹೋಬಳಿಯಲ್ಲಿ, 15ರಂದು ಅಮ್ಮಿನಭಾವಿ ಮತ್ತು ಕಲಘಟಗಿ ಹೋಬಳಿಯಲ್ಲಿ, 18ರಂದು ದುಮ್ಮವಾಡ ಮತ್ತು ಕುಂದಗೋಳ ಹೋಬಳಿಯಲ್ಲಿ, 20ರಂದು ಸಂಶಿ ಮತ್ತು ಮೊರಬ ಹೋಬಳಿ, 23ರಂದು ಅಣ್ಣಿಗೇರಿ ಹೋಬಳಿ ಹಾಗೂ 25ರಂದು ಧಾರವಾಡ ಮತ್ತು ಹುಬ್ಬಳ್ಳಿ ಹೋಬಳಿಗಳಲ್ಲಿ ಜರುಗಲಿದೆ ಎಂದು ತಿಳಿಸಿದರು.
ಹೋಬಳಿ ಮಟ್ಟದ ವೇದಿಕೆ ಕಾರ್ಯಕ್ರಮಕ್ಕೂ ಮುಂಚೆ 3 ದಿನಗಳ ಕಾಲ ಆಯಾ ಹೋಬಳಿ ವ್ಯಾಪ್ತಿಯ ಪ್ರತಿ ಗ್ರಾಮಗಳಿಗೆ ಸಮಗ್ರ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಮಾಹಿತಿ ಹೊತ್ತ ‘ಮಾಹಿತಿ ರಥ’ ರೈತರ ಮನೆಗಳಿಗೆ ಭೇಟಿ ನೀಡಿ ಸೌಲಭ್ಯಗಳ ವಿವರ ನೀಡಲಿದೆ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಮಾತನಾಡಿ, ಕೃಷಿ ಅಭಿಯಾನದ ಮೊದಲ ಮತ್ತು ಎರಡನೇ ದಿನ ಪ್ರತಿ ಹೋಬಳಿಯಲ್ಲಿ ಗ್ರಾಪಂವಾರು ಕಾರ್ಯ ತಂಡ ರಚಿಸಿಕೊಂಡು ಪ್ರಚಾರ ಕಾರ್ಯದ ಜೊತೆಗೆ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಸಂವಾದ ನಡೆಸಲಿದ್ದಾರೆ. ಮೂರನೇ ದಿನದಂದು ಹೋಬಳಿ ಕೇಂದ್ರ ಸ್ಥಾನದಲ್ಲಿ ಕೃಷಿ ವಸ್ತು ಪ್ರದರ್ಶನ ಹಾಗೂ ರೈತ ಸಂವಾದ ಆಯೋಜಿಸಲಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ| ರಾಮಚಂದ್ರ ಕೆ., ಜಿಲ್ಲಾ ಸಂಖ್ಯಾ ಧಿಕಾರಿ ಡಿ.ವಿ. ಮಡಿವಾಳ, ಲೀಡ್ ಬ್ಯಾಂಕ್ ಮ್ಯಾನೇಜರ ಕೆ. ಈಶ್ವರ, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ಶೀಲಾ ಭಂಡಾರಕರ, ಜಂಟಿ ನಿರ್ದೇಶಕರ ಕಚೇರಿ ಸಹಾಯಕ ನಿರ್ದೇಶಕಿ ಎಂ.ಎಂ.ನಾಡಿಗೇರ, ಸಹಾಯಕ ಕೃಷಿ ನಿರ್ದೇಶಕ ಸೋಮಲಿಂಗಪ್ಪ ಮೊದಲಾದವರಿದ್ದರು.
ಮಾಹಿತಿ ರಥಕ್ಕೆ ಚಾಲನೆ: ಸಭೆಗೂ ಮುನ್ನ ಸಮಗ್ರ ಕೃಷಿ ಅಭಿಯಾನದ ಮಾಹಿತಿ ಹೊತ್ತು ಗ್ರಾಮಗಳಿಗೆ ತೆರಳಲಿರುವ ‘ಮಾಹಿತಿ ರಥ’ಗಳಿಗೆ ಜಿಲ್ಲಾಧಿಕಾರಿ ಡಾ| ಎಸ್.ಬಿ.ಬೊಮ್ಮನಹಳ್ಳಿ ಹಸಿರು ನಿಶಾನೆ ತೋರಿದರು.
ಅಧಿಕಾರಿಗಳಿಗೆ ಸೂಚನೆ
ಜಿಲ್ಲೆಯಲ್ಲಿ ಇಂದಿನವರೆಗೆ ಉತ್ತಮ ಮಳೆಯಾಗಿದ್ದು, ಪ್ರಸಕ್ತ ಸಾಲಿನಲ್ಲಿ ನೂರಕ್ಕೆ ನೂರರಷ್ಟು ಬಿತ್ತನೆಯಾಗಲಿದೆ. ರೈತರಿಗೆ ಬಿತ್ತನೆ ಬೀಜ, ಗೊಬ್ಬರ, ಬೆಳೆ ಪೋಷಣೆ, ಕೊಯ್ಲೋತ್ತರ ಕ್ರಮಗಳು ಹಾಗೂ ಸೌಲಭ್ಯಗಳ ಕುರಿತು ಪ್ರತಿ ಹಂತದ ಮಾಹಿತಿಯು ಪೂರ್ಣವಾಗಿ ಮತ್ತು ಸರಿಯಾದ ಸಮಯಕ್ಕೆ ತಲುಪುವಂತೆ ಅಧಿಕಾರಿಗಳು ಕ್ರಿಯಾಯೋಜನೆ ಮೂಲಕ ಕಾರ್ಯ ಮಗ್ನರಾಗಬೇಕು. ರೈತರ ಬೇಕು, ಬೇಡಿಕೆ ತಿಳಿದು ಯಾವುದೇ ರೀತಿಯ ಮಾಹಿತಿ ಕೊರತೆಯಾಗದಂತೆ ಕ್ರಮಕೈಗೊಳ್ಳುವಂತೆ ಕೃಷಿ ಅಧಿಕಾರಿಗಳಿಗೆ ಡಿಸಿ ಡಾ| ಎಸ್.ಬಿ. ಬೊಮ್ಮನಹಳ್ಳಿ ಸೂಚನೆ ನೀಡಿದರು.