Advertisement

ಕಿಷ್ಕಿಂಧೆಯ ಪ್ರವೇಶಿಸುತ್ತಾ…

08:03 PM Jan 03, 2020 | Lakshmi GovindaRaj |

ಹಂಪಿಯ ಭೌಗೋಳಿಕ ರಚನೆಯೇ ವಿಶಿಷ್ಟ. ಅಲ್ಲಿ ಭೂಭಾಗ ಕಡಿಮೆ, ಬಂಡೆ- ಬೆಟ್ಟಗಳೇ ಅಧಿಕ. ಇದು ಚಿರತೆ, ಕರಡಿ, ವಾನರರಿಗೆ ನೆಲೆಸಲು ಪ್ರಶಸ್ತವಾದ ಸ್ಥಳ. ಹೀಗಾಗಿ, ವಾನರರು ಕಿಷ್ಕಿಂಧೆಯನ್ನು ತಮ್ಮ ರಾಜ್ಯವನ್ನಾಗಿ ಮಾಡಿಕೊಂಡಿದ್ದರು…

Advertisement

ವಿಶ್ವ ಪರಂಪರೆಯ ತಾಣವಾದ ನಮ್ಮ ಹೆಮ್ಮೆಯ ಹಂಪಿ, ರಾಮಾಯಣದ ಪ್ರಮುಖ ಘಟ್ಟಕ್ಕೆ ಸಾಕ್ಷಿಯಾದ ಕ್ಷೇತ್ರ. ಸಾಕ್ಷಾತ್‌ ಭಗವಂತನ ಅವತಾರಿ ಶ್ರೀರಾಮನಿಗೆ ಬಂಟನಾಗಿ, ಸಖನಾಗಿ, ಕಾವ್ಯದ ಉಪನಾಯಕನಂತಿದ್ದ ಹನುಮ ಮುಂದಿನ ದಿನಗಳಲ್ಲಿ ಪ್ರಮುಖ ದೈವಗಳ ಸಾಲಿಗೆ ಸೇರಿ ತನ್ನ ಒಡೆಯನನ್ನೂ ಮೀರಿ ಆರಾಧಿಸಲ್ಪ­ಡುತ್ತಿರುವ ಹನುಮನ ಜನ್ಮಸ್ಥಾನವೇ ಹಂಪಿಯ ಕಿಷ್ಕಿಂಧ.

ಈತ ರುದ್ರಾಂಶ ಸಂಭೂತನ­ಲ್ಲವೇ? ಹೀಗಾಗಿ, ಸಾಕ್ಷಾತ್‌ ವಿರೂಪಾಕ್ಷನ ನೆಲೆಯನ್ನೇ ತಾನು ಜನಿಸಲು ಆರಿಸಿಕೊಂಡಿ­ರಬೇಕು. ಅಚ್ಚರಿಯೆಂದರೆ, ಹಂಪಿಯ ಚಂದ್ರಮೌಳೇಶ್ವರ ಗುಡಿಯಿಂದ ಹನುಮ ಹುಟ್ಟಿದ ಆಂಜನೇಯ ಪರ್ವತವನ್ನು ನೋಡಿದರೆ, ಅದು ಥೇಟ್‌ ಕಪಿ ಮುಖದಂತೆಯೇ ಕಾಣುತ್ತದೆ. ಹಂಪಿಯ ಭೌಗೋಳಿಕ ರಚನೆಯೇ ವಿಶಿಷ್ಟ. ಅಲ್ಲಿ ಭೂಭಾಗ ಕಡಿಮೆ, ಬಂಡೆ- ಬೆಟ್ಟಗಳೇ ಅಧಿಕ. ಪಕ್ಕದಲ್ಲೇ ತುಂಬಿ ಹರಿಯುವ ತುಂಗಾಭದ್ರಾ ಹೊಳೆ.

ಇದು ಚಿರತೆ, ಕರಡಿ, ವಾನರರಿಗೆ ನೆಲೆಸಲು ಪ್ರಶಸ್ತವಾದ ಸ್ಥಳ. ಹೀಗಾಗಿ, ವಾನರರು ಕಿಷ್ಕಿಂಧೆಯನ್ನು ತಮ್ಮ ರಾಜ್ಯವನ್ನಾಗಿ ಮಾಡಿಕೊಂಡಿದ್ದರು. ಇಲ್ಲಿನ ಕೆಲ ಗುಹೆಗಳಲ್ಲಿ ಬಾಲವಿರುವ ಮಾನವರ ಚಿತ್ರಗಳು ಪತ್ತೆಯಾಗಿವೆ. ಇಲ್ಲಿನ ಆದಿವಾಸಿ ಜನಾಂಗವೊಂದು ತಾವು ವಾನರರ ವಂಶಜರೆಂದು ಹೇಳಿಕೊಳ್ಳುತ್ತಿದ್ದರು; ಕಪಿಧ್ವಜ ಹಿಡಿದಿರುತ್ತಿದ್ದರು ಎಂದು ಬ್ರಿಟಿಷ್‌ ಅಧಿಕಾರಿ, ಬಳ್ಳಾರಿ ಗೆಝೆಟಿಯರ್‌ನಲ್ಲಿ ದಾಖಲಿಸಿದ್ದಾನೆ.

ಅಂದರೆ, ಮಾನವ- ಚಿಂಪಾಂಜಿಗಳ ಮಧ್ಯದಲ್ಲಿ ಮಾತನಾಡಬಲ್ಲ ಪ್ರಭೇದವೊಂದಿದ್ದು, ನಂತರ ನಶಿಸಿರಬಹುದೇ? ಗೊತ್ತಿಲ್ಲ. ನಮ್ಮ ಹನುಮ ಹುಟ್ಟಿದಂದಿನಿಂದಲೇ ಭಾರೀ ಬಲವಂತ. ಆತ ಮಗುವಿದ್ದಾಗ ಸೂರ್ಯನನ್ನು ಹಣ್ಣೆಂದು ಭ್ರಮಿಸಿ, ಹಿಡಿಯಹೋದದ್ದು; ಇಂದ್ರನ ವಜ್ರಾಯುಧ­ದಿಂದ ಹೊಡೆತ ತಿಂದು ಅವನ ಹನು (ದವಡೆ) ಊ­­ದಿ, ಆತ ಹನುವಾ(ಮಾ)ನ್‌ ಆದ ಕಥೆ ಜನಪ್ರಿಯ. ಹಂಪಿಯ ಜನರು ಹಾಡುವ ಒಂದು ಹಾಡು ಇನ್ನೂ ಸ್ವಾರಸ್ಯವಾಗಿದೆ.

Advertisement

ಅಡಿವ್ಯಾ ರಂಜನದೇವಿ ಹನುಮಾನ ಹಡೆದಾಳೆ
ತೊಡೆಯ ತೊಳಿಯೋಕೆ ನೀರಿಲ್ಲ | ಹನುಮಣ್ಣ
ಸುತ್ತಲ ಹೊಳೆಯ ತಿರುವ್ಯಾನು |
ತಿರುವಿ ತಾ ನೀರ ತಂದಾನು ||

ಇವರ ಪ್ರಕಾರ, ಚಕ್ರತೀರ್ಥದಲ್ಲಿ ಹನುಮನೇ ತುಂಗಭದ್ರೆಯ ಹರಿವ ದಿಕ್ಕು ಬದಲಿಸಿದ್ದು, ಅವರು ಅದನ್ನು “ಹನುಮನ ಮಡು’ ಎಂದೇ ಕರೆಯುತ್ತಾರೆ. ಈ ಮುಗ್ಧ ಜನರ ನಂಬಿಕೆ, ಕಲ್ಪನೆಗೆ ಒಂದು ಶರಣು. ಇಂಥ ಹನುಮ ಬಲು ಬುದ್ಧಿವಂತ ಕೂಡ. ಅಂತೆಯೇ, ಆತ ವಾನರ ರಾಜ್ಯದ ಪ್ರಧಾನಿ. ಸೀತೆಯನ್ನರಸುತ್ತ ರಾಮ- ಲಕ್ಷ್ಮಣರು ಕಿಷ್ಕಿಂಧೆಗೆ ಬಂದಾಗಲೇ ರಾಮ- ಹನುಮರ ಪ್ರಥಮ ಭೇಟಿ. ಇಬ್ಬರದೂ ಜನ್ಮ ಜನ್ಮಾಂತರಗಳ ಸಂಬಂಧವಲ್ಲವೇ? ಇಬ್ಬರಿಗೂ ಪ್ರಥಮ ನೋಟದಲ್ಲಿಯೇ ಪ್ರೀತಿ, ವಿಶ್ವಾಸ, ಗೌರವ ಮೊಳೆತದ್ದು ರಾಮಾಯಣ­ದುದ್ದಕ್ಕೂ, ಅಷ್ಟೇ ಅಲ್ಲ; ಇಂದಿನವರೆಗೂ ಸಾಗಿಬಂದಿದೆ.

* ವಸುಂಧರಾ ದೇಸಾಯಿ

Advertisement

Udayavani is now on Telegram. Click here to join our channel and stay updated with the latest news.

Next