ತಿ.ನರಸೀಪುರ: ಸಂವಿಧಾನ ಕುರಿತು ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ದಲಿತ ವಿರೋಧಿ ಹೇಳಿಕೆಯನ್ನು ನೀಡಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದ ಅವರನ್ನು ರಾಷ್ಟ್ರ ದ್ರೋಹಿ ಎಂದು ಘೋಷಿಸಿ ದೇಶದಿಂದಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ದಲಿತ ಜಾಗೃತಿ ಸಮಿತಿಯ ಕಾರ್ಯಕರ್ತರು ಹಾಗೂ ಮುಖಂಡರು ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಬಳಿ ಜಮಾವಣೆಗೊಂಡ ದಲಿತ ಜಾಗೃತ ಸಮಿತಿಯ ಕಾರ್ಯಕರ್ತರು ಹಾಗೂ ಮುಖಂಡರು ಪಂಜಿ ಹಿಡಿದು ಜಾತ್ಯಾತೀತ ನೆಲೆಯ ಹಿನ್ನೆಲೆಯಲ್ಲಿ ವಿಶ್ವವೇ ಮೆಚ್ಚುವಂತಹ ದೇಶದ ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿರುವ ಗೋ.ಮಧುಸೂದನ್ ಅವರ ವಿರುದ್ಧ ಧಿಕ್ಕಾರ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದರು.
ಮನವಿ ಸಲ್ಲಿಕೆ: ಪ್ರತಿಭಟನಾಕಾರರು ಡೋಲು ನಗಾರಿಗಳನ್ನು ಬಾರಿಸುತ್ತಾ ಕಾಲೇಜು ಹೊಸ ತಿರುಮಕೂಡಲು ಜೋಡಿ ರಸ್ತೆಯ ಮಾರ್ಗವಾಗಿ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಖಾಸಗಿ ಬಸ್ ನಿಲ್ದಾಣ ವೃತ್ತ ಹಾಗೂ ಕಾಲೇಜು ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರ ಗಮನ ಸೆಳೆದರು.
ಗಡಿಪಾರು ಮಾಡಿ: ಪ್ರತಿಭಟನೆ ನೇತೃತ್ವ ವಹಿಸಿದ್ದ ದಲಿತ ಜಾಗೃತಿ ಸಮಿತಿಯ ರಾಜಾಧ್ಯಕ್ಷ ಉದಯಕುಮಾರ ಸಾರಥಿ ಮಾತನಾಡಿ, ಪ್ರಜಾಪ್ರಭುತ್ವ ಕಾಯ್ದೆಯಡಿ ರಾಜಕೀಯ ಅಧಿಕಾರವನ್ನು ಅನುಭವಿಸಿರುವ ಮತಿಗೇಡಿ ಗೋ.ಮಧುಸೂದನ್ ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಾಯಕರ ಮನವೊಲಿಸಲು ಸಮಾನತೆಯ ಸಮಾಜ ನಿರ್ಮಾಣ ಪರಿಕಲ್ಪನೆಯಡಿ ರಚನೆಯಾದಂತಹ ಸಂವಿಧಾನದ ಬಗ್ಗೆ
ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಆನತ ವಿರುದ್ಧ ಹಿಂದೂ ಮೂಲಭೂತವಾದಿ ಉಗ್ರನೆಂದು ಘೋಷಿಸಿ ದೇಶದಿಂದಲೇ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ತುಂಬಲ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬಸವರಾಜು, ನಗರ ಸಂಚಾಲಕ ಶಿವಕುಮಾರ್, ಮುಖಂಡರಾದ ಕುಪ್ಪೇಗಾಲ ಮಂಜುನಾಥ್, ಕೊಳತ್ತೂರು ಮಹದೇವಸ್ವಾಮಿ, ಬಿಲಿಗೆರೆಹುಂಡಿ ಪುಟ್ಟಸ್ವಾಮಿ, ನೆರಗ್ಯಾತನಹಳ್ಳಿ ನಂಜಯ್ಯ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.