ವಿ| ಪ್ರೇಮನಾಥ ಮಾಸ್ಟ್ರೆ 58 ವರ್ಷದ ಹಿಂದೆ ಸ್ಥಾಪಿಸಿದ ಮಂಗಳೂರಿನ ಲಲಿತ ಕಲಾ ಸದನದ ಈಗಿನ ರೂವಾರಿ ವಿ| ಸುದರ್ಶನ್ ಅವರ ಮುಂದಾಳತ್ವದಲ್ಲಿ ಇತ್ತೀಚೆಗೆ ನೃತ್ಯ ದರ್ಪಣ 2018 ಕಾರ್ಯಕ್ರಮ ಪುರಭವನದಲ್ಲಿ ಜರಗಿತು. 38 ಹಿರಿಯ -ಕಿರಿಯ ವಿದ್ಯಾರ್ಥಿನಿಯರು ಭರತನಾಟ್ಯದ ನೃತ್ಯ ಬಂಧಗಳಿಗೆ, ಭಾವ ಗೀತೆ ಹಾಗೂ ಜನಪದ ಗೀತೆಗಳಿಗೆ ಲವಲವಿಕೆಯಿಂದ ಹೆಜ್ಜೆ ಹಾಕಿದರು.
ಪ್ರಾರಂಭದ ಪುಷ್ಪಾಂಜಲಿಯಲ್ಲಿ ಸಕಲ ದೈವೀ ಶಕ್ತಿಗಳನ್ನು ಸ್ಮರಿಸಲಾಯಿತು. ಸಾವೇರಿ ರಾಗದ ಜತಿಸ್ವರದಲ್ಲಿ ಹಳೆಯ ನೃತ್ಯ ಶೈಲಿಯೊಂದಿಗೆ ಹೊಸ ರೀತಿಯ ಹೆಜ್ಜೆಗಾರಿಕೆಗಳು ಹಳತು-ಹೊಸತುಗಳ ಹದ ಮಿಶ್ರಣವಾಗಿ ಕಂಡವು. ಮುಂದೆ ಪ್ರದರ್ಶನಗೊಂಡ ನಟನಂ ಆಡಿನಾರ್ ಪದಂ, ಜಗನ್ಮೋಹನ ನಟನಂ ಪದಂ, ಬಾಗಿಲನು ತೆರೆದು ಪದಂ, ಗೋವರ್ಧನ ಗಿರಿಧಾರಿ ಪದಂಗಳು ಪೂರ್ವಾಂಗವನ್ನು ಅಲಂಕರಿಸಿದವು.
ರಾಗಮಾಲಿಕೆಯಲ್ಲಿ ಸಂಯೋಜಿಸಲಾದ ಜಗನ್ಮೋಹನ ನಟನ ರಾಜಸಭಾ ಪತಿಯೇ ಎಂಬ ರಚನೆಯನ್ನು ಕಾರ್ಯಕ್ರಮದ ಪ್ರಧಾನ ನೃತ್ಯ ಬಂಧವಾಗಿ ಪ್ರದರ್ಶಿಸಲಾಗಿತ್ತು. ಶಿವನ ಮಹಿಮೆಗಳಲ್ಲಿ ನವರಸಗಳು ಹುಟ್ಟುವ ವಿವಿಧ ಸಂದರ್ಭಗಳ ಕಥಾವಿಸ್ತರಣ ಇಲ್ಲಿ ನಡೆದಿತ್ತು. ಪೂರಕ ಸಂದರ್ಭಗಳಲ್ಲಿ ಜತಿಗಳ ಅಳವಡಿಕೆ ಸೂಕ್ತವಾಗಿತ್ತು. ಉತ್ತರಾರ್ಧದಲ್ಲಿ ಊತ್ತುಕ್ಕಾಡು ವೆಂಕಟಸುಬ್ಬ ಅಯ್ಯì ಅವರ ಪ್ರಸಿದ್ಧ ಕೃತಿ -ಸ್ವಾಗತಂ ಕೃಷ್ಣ ರಚನೆಯನ್ನು ನರ್ತಿಸುವಾಗ ವಿದ್ಯಾರ್ಥಿನಿಯರು ಪಟ್ಟ ಸಂಭ್ರಮ ಸಭಿಕರನ್ನೂ ಸೆಳೆಯಿತು. ರಾಷ್ಟ್ರಕವಿ ಕುವೆಂಪು ಅವರ ಷೋಡಷಿ ಕವನ ಸಂಕಲನದ ಒಂದು ಹೃದ್ಯ ಕವನ – ನೋಡೆ ಸಖೀ, ಬಾರೆ ಸಖೀ ನೋಡೆ ಶಶಿಮುಖೀ| ಕುಣಿಯುವಂತೆ ಮತ್ತ ಶಿಖೀ ಕುಣಿಯುತಿಹನು ನೋಡೆ ಶಿಖೀ || ಎಂಬ ಕವನದ ಸಾಲುಗಳಿಗೆ ವಿದ್ಯಾರ್ಥಿನಿಯರು ಕೃಷ್ಣ-ಗೋಪಿಕೆಯರಾಗಿ ಕವಿಯ ಸಾಲುಗಳಿಗೆ ಜೀವ ತುಂಬಿದರು. ಪಂಚಮ ವೇದಗಳೆಂದು ಕರೆಸಿಕೊಳ್ಳುವ ಗಾಯನ ಕಲೆ ಹಾಗೂ ನೃತ್ಯಕಲೆಗಳೆರಡನ್ನೂ ತನ್ನೊಳಗೇ ಹುದುಗಿಸಿಕೊಂಡು ಸಕಲ ಚರಾಚರಗಳಿಗೆ ಬ್ರಹ್ಮಾನಂದವನ್ನು ನೀಡುವ ಕೃಷ್ಣನ ನರ್ತನದ ಹೃದ್ಯ ಅಭಿವ್ಯಕ್ತಿ ಇಲ್ಲಿತ್ತು. ವಿ|ಶೀಲಾ ದಿವಾಕರ್ ಅವರ ಸಿರಿಕಂಠದಲ್ಲಿ ಹಾಡು ಮನಸೂರೆಗೊಂಡಿತು.
ತಾಯಿ ಪರಾಶಕ್ತಿಯ ವಿವಿಧ ರೂಪಗಳನ್ನು ಶಾಸ್ತ್ರೀಯ ಮತ್ತು ಜನಪದೀಯ ಮಟ್ಟಿನಲ್ಲಿ ಸ್ತುತಿಸಿದ ಕೀರ್ತನೆ ದುರ್ಗೆ ದುರ್ಗೆ ಹಾಗೂ ಕೊನೆಯಲ್ಲಿ ಕದನ ಕುತೂಹಲ ರಾಗದ ತಿಲ್ಲಾನದೊಂದಿಗೆ ನೃತ್ಯ ದರ್ಪಣ 2018 ಮಂಗಳ ಕಂಡಿತು. ಹಿಮ್ಮೇಳದಲ್ಲಿ ವಿ| ಸುದರ್ಶನ್ ನಟ್ಟುವಾಂಗವನ್ನು ನೆರವೇರಿಸಿದರು. ವಿ| ಮನೋಹರ ರಾವ್ ಅವರ ಪೂರಕ ಮೃದಂಗ ಸಾಥಿ, ವಿ| ಮುರಳೀಧರ ಕೆ. ಅವರ ಕೀಬೋರ್ಡ್-ಕೊಳಲು ಸಾಥಿ ಹಾಗೂ ವಿ| ಶ್ರೀಧರ ಆಚಾರ್ಯ ಪಾಡಿಗಾರು ಅವರ ವಯೊಲಿನ್ ಸಾಥಿ ಒಟ್ಟಂದಕ್ಕೆ ಸಹಕರಿಸಿದವು.
ಭ್ರಮರಿ ಶಿವಪ್ರಕಾಶ್