ಹೊಸದಿಲ್ಲಿ: ವಿದ್ಯುನ್ಮಾನ ಮತಯಂತ್ರ (ಇವಿಎಂ) ಫಲಿತಾಂಶಕ್ಕಿಂತ ಮುಂಚಿತವಾಗಿ ಅಂಚೆ ಮತಪತ್ರಗಳ ಎಣಿಕೆ ಮತ್ತು ಘೋಷಣೆಗೆ ಆದ್ಯತೆ ನೀಡುವಂತೆ ಇಂಡಿಯಾ ಮೈತ್ರಿ ಕೂಟದ ನಾಯಕರು ಚುನಾವಣ ಆಯೋಗಕ್ಕೆ (ಇಸಿ) ಮನವಿ ಮಾಡಿದ್ದಾರೆ. ಸ್ಪಷ್ಟ ಮಾರ್ಗಸೂಚಿಗಳನ್ನು ಸ್ಥಾಪಿಸಿ ಮತ್ತು ಅವುಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಿ ಎಂದು ನಾಯಕರು ಆಯೋಗಕ್ಕೆ ಹೇಳಿದ್ದಾರೆ.
ಭಾನುವಾರ ನಡೆದ ಸಭೆಯಲ್ಲಿ, ಇಂಡಿಯಾ ಮೈತ್ರಿಕೂಟದ ಪ್ರತಿನಿಧಿಗಳು ಅಂಚೆ ಮತಪತ್ರಗಳನ್ನು ಮೊದಲು ತಿಳಿಸುವ ಶಾಸನಬದ್ಧ ನಿಯಮಗಳಿಗೆ ಬದ್ಧವಾಗಿರುವುದರ ಮಹತ್ವವನ್ನು ಒತ್ತಿ ಹೇಳಿದರು.
ಹಿರಿಯ ನಾಗರಿಕರು ಮತ್ತು ಅಂಗವಿಕಲ ವ್ಯಕ್ತಿಗಳ ಅಂಚೆ ಮತಪತ್ರಗಳ ಬಳಕೆ ಹೆಚ್ಚಿದ್ದರೂ ಪ್ರಾಯೋಗಿಕವಾಗಿ ಮಾರ್ಗಸೂಚಿಯನ್ನು ನಿರ್ಲಕ್ಷಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಕಳವಳ ವ್ಯಕ್ತ ಪಡಿಸಿದ್ದಾರೆ.
ಚುನಾವಣ ಫಲಿತಾಂಶಗಳ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಿಸಿಟಿವಿ ಮಾನಿಟರಿಂಗ್ ಮತ್ತು ದಿನಾಂಕ ಮತ್ತು ಸಮಯದ ತಪಾಸಣೆ ಸೇರಿದಂತೆ ಇವಿಎಂ ನಿಯಂತ್ರಣ ಘಟಕಗಳಿಗೆ ಪಾರದರ್ಶಕ ಪರಿಶೀಲನಾ ಪ್ರಕ್ರಿಯೆಗಳ ಮಹತ್ವವನ್ನು ನಿಯೋಗ ಒತ್ತಿಹೇಳಿದೆ.
ಮಲ್ಲಿಕಾರ್ಜುನ ಖರ್ಗೆ, ಶರದ್ ಪವಾರ್ ಮತ್ತು ಸೀತಾರಾಂ ಯೆಚೂರಿಯಂತಹ ಪ್ರಮುಖ ನಾಯಕರು ಈ ಕ್ರಮವನ್ನು ಪ್ರತಿಪಾದಿಸಿದ್ದಾರೆ, ನ್ಯಾಯಯುತ ಮತ್ತು ನಿಖರವಾದ ಮತ ಎಣಿಕೆ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನ ಎಂದು ಹೇಳಿದ್ದಾರೆ.