ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ ಕೋವಿಡ್ ಸೋಂಕಿನಿಂದಾಗಿ ಜನರ ಜತೆಗೆ ಕಾರ್ಖಾನೆಗಳು, ಕಂಪೆನಿಗಳು, ಸಣ್ಣ ಕೈಗಾರಿಕೆಗಳು, ಬೃಹತ್ ಕೈಗಾರಿಕೆಗಳು, ರಿಯಲ್ ಎಸ್ಟೇಟ್ ಸೇರಿದಂತೆ ಹೆಚ್ಚು ಕಡಿಮೆ ಎಲ್ಲ ಉದ್ಯಮಗಳು ನಷ್ಟಕ್ಕೀಡಾಗಿವೆ. ಇದು ನೇರವಾಗಿ ತಟ್ಟಿರುವುದು ಉದ್ಯೋಗಿಗಳ ಮೇಲೆ. ಒಂದು ವೇತನ ಕಡಿತ,ಮತ್ತೊಂದು ಉದ್ಯೋಗದಿಂದ ವಜಾದಂಥ ಪರಿಣಾಮಗಳು. ಇದಷ್ಟೇ ಅಲ್ಲ, ಹೊಸ ಹೊಸ ಉದ್ಯೋಗಗಳು ಸೃಷ್ಟಿಯಾಗುವಲ್ಲಿಯೂ ವಿಳಂಬವಾಗುತ್ತಿರುವುದು ಉಂಟು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವೂ ಸೇರಿದಂತೆ ಎಲ್ಲ ರಾಜ್ಯ ಸರಕಾರಗಳು ಉದ್ಯೋಗ ಸೃಷ್ಟಿಗಾಗಿ ಒಂದಿಲ್ಲೊಂದು ಪೂರಕ ಸನ್ನಿವೇಶಗಳನ್ನು ಸೃಷ್ಟಿಸುತ್ತಲೇ ಇವೆ.
ಇದರ ಬೆನ್ನಲ್ಲೇ ಕರ್ನಾಟಕ ಸರಕಾರ, ಉದ್ಯೋಗಗಳನ್ನು ಸೃಷ್ಟಿಸುವ ಸಲುವಾಗಿಯೇ ಉದ್ಯೋಗ ನೀತಿ ಜಾರಿ ಮಾಡಲು ಮುಂದಾಗಿದೆ. ಇಂಥ ನೀತಿ ಜಾರಿ ಮಾಡುವ ರಾಜ್ಯಗಳ ಪೈಕಿ ಅಗ್ರ ಸ್ಥಾನದಲ್ಲಿರುವ ಕರ್ನಾಟಕ, ಹೆಚ್ಚು ಉದ್ಯೋಗ ಸೃಷ್ಟಿಸುವವರಿಗೆ ಪ್ರೋತ್ಸಾಹಧನ ನೀಡಲೂ ನಿರ್ಧರಿಸಿದೆ. ಸೋಮವಾರವಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ ಉದ್ಯೋಗ ನೀತಿ ಜಾರಿ ಬಗ್ಗೆ ಘೋಷಿಸಿದ್ದಾರೆ.
ಕರ್ನಾಟಕ ಸರಕಾರ ಈಗಾಗಲೇ ಸ್ಟಾರ್ಟ್‌ಆ್ಯಪ್ ನೀತಿ, ಕೈಗಾರಿಕ ನೀತಿ ಸೇರಿದಂತೆ ವಿವಿಧ ಉದ್ಯಮಿಗಳ ಪ್ರೋತ್ಸಾಹಕ್ಕಾಗಿ ಹಲವಾರು ಕ್ರಮಗಳನ್ನು ಜಾರಿ ಮಾಡಿದೆ. ಈ ವಿಚಾರದಲ್ಲಿ ರಾಜ್ಯ ಸರಕಾರ ಯಶಸ್ವಿಯೂ ಆಗಿದೆ. ಸ್ಟಾರ್ಟ್‌ಆ್ಯಪ್ ನೀತಿಯಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಹೊಸ ಹೊಸ ಸ್ಟಾರ್ಟ್‌ಆ್ಯಪ್‌ಗಳು ರಚನೆಯಾಗಿ ಸಾವಿರಾರು ಮಂದಿಗೆ ಉದ್ಯೋಗವನ್ನೂ ನೀಡಿವೆ.
ಹಾಗೆಯೇ ಕೈಗಾರಿಕ ನೀತಿಯಿಂದಲೂ ಕೈಗಾರಿಕೆ ಆರಂಭವೂ ಸೇರಿದಂತೆ ವಿವಿಧ ವಿಚಾರಗಳಲ್ಲಿ ಸುಲಭವಾಗಿ ಸರಕಾರದ ಒಪ್ಪಿಗೆಗಳು ಸಿಗುತ್ತಿವೆ. ಬೇರೆ ಬೇರೆ ದೇಶಗಳಿಂದ ಬಂದು ಇಲ್ಲಿ ಹೂಡಿಕೆ ಮಾಡಿ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತಿದೆ. ಉದ್ಯೋಗ ಸೃಷ್ಟಿಯೂ ಆಗುತ್ತಿದೆ.
ಇದೇ ರೀತಿಯಲ್ಲಿ ಈಗ ಉದ್ಯೋಗ ನೀತಿಯನ್ನು ರೂಪಿಸಲು ನಿರ್ಧರಿಸಲಾಗಿದೆ. ಈ ಉದ್ಯೋಗ ನೀತಿಯ ಉದ್ದೇಶವೊಂದೇ. ಕೊರೊನಾ ಅನಂತರದಲ್ಲಿ ಕಡಿಮೆಯಾಗಿರುವ ಉದ್ಯೋಗ ಸೃಷ್ಟಿ ಮತ್ತು ಹೊಸ ಉದ್ಯೋಗ ಸೃಷ್ಟಿ ಮಾಡಬೇಕು ಎಂಬುದಾಗಿದೆ. ಇದರ ಜತೆಗೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುವ ಸಲುವಾಗಿಯೂ ಹೊಸ ನೀತಿಯೊಂದನ್ನು ಜಾರಿಗೊಳಿಸಲೂ ಉದ್ದೇಶಿಸಲಾಗಿದೆ.
ಇದನ್ನೂ ಓದಿ:ಐಟಿ ದಾಳಿಗೆ ಸಿದ್ದರಾಮಯ್ಯ ಕಾರಣ: ಎಚ್‌ಡಿಕೆ
ಜತೆಗೆ ಉದ್ಯೋಗ ನೀಡುವವರಿಗೆ ಪ್ರೋತ್ಸಾಹ ಧನ ನೀಡುವ ಅಂಶ ಇರುವುದೂ ಉತ್ತಮ ವಿಚಾರವೇ. ಇದು ಉದ್ಯೋಗದಾತರಿಗೆ
ಒಂದು ರೀತಿ ಪ್ರೇರಕ ಶಕ್ತಿಯಂತೆ ಆಗಲಿದ್ದು ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಇಲ್ಲಿನವರಿಗೇ ಹೆಚ್ಚು ಉದ್ಯೋಗ ನೀಡಲು ಉತ್ತಮ ವೇದಿಕೆಯಂತೆ ಆಗಲಿದೆ.
ಈಗಂತೂ ಉದ್ಯೋಗ ನೀತಿ ಜಾರಿ ಬಗ್ಗೆ ಸ್ವಯಂ ಮುಖ್ಯಮಂತ್ರಿಗಳೇ ಘೋಷಣೆ ಮಾಡಿದ್ದಾರೆ. ಆದರೆ ಇದು ಕೇವಲ ಪೇಪರ್‌ನಲ್ಲಿ ಅಥವಾ ಘೋಷಣೆ ರೂಪದಲ್ಲಿ ಉಳಿಯುವಂತೆ ಆಗಬಾರದು. ಸರಕಾರದ ಈ ಉದ್ದೇಶ ಜಾರಿಯಾಗುವಲ್ಲಿ ಅಧಿಕಾರಿಗಳ ಪಾತ್ರವೂ ಬಹುಮುಖ್ಯ. ಹೀಗಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ತ್ವರಿತಗತಿಯಲ್ಲಿ ಕೆಲಸ ಮಾಡಿ ಉದ್ಯೋಗ ನೀತಿಯನ್ನು ಜಾರಿ ಮಾಡಲು ಪ್ರಯತ್ನಿಸಬೇಕು.