ಕಡೂರು: ಸೋಮವಾರ ಪಟ್ಟಣದ 23 ವಾರ್ಡ್ ಗಳಲ್ಲಿ ಸಾರ್ವಜನಿಕವಾಗಿ ಸುಮಾರು 49 ಕಡೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ಇನ್ನೂ ಮನೆ ಮನೆಗಳಲ್ಲಿ ಗಣೇಶ ಮೂರ್ತಿಗಳನ್ನು ವಿವಿಧ ರೂಪ, ಭಂಗಿಗಳಲ್ಲಿ, ಶೂನ್ಯ ತ್ಯಾಜ್ಯ ಪರಿಕಲ್ಪನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆ ನಡೆಸಲಾಗುತ್ತಿದೆ.
ಪಟ್ಟಣದ ದಿ.ಮಾಜಿ ಶಾಸಕ ಕೆ.ಎಂ.ಕೃಷ್ಣಮೂರ್ತಿ ಅವರ ಪುತ್ರ ಶರತ್‌ಕೃಷ್ಣಮೂರ್ತಿ ಅವರ ಮನೆಯಲ್ಲಿ ಬೆಲ್ಲದ ಗಣಪತಿ ಪ್ರತಿಷ್ಠಾಪನೆ ಮಾಡಿರುವುದು ವಿಶೇಷ.
ಮಂಡ್ಯದ ಅಲೆಮನೆಯ ಅಚ್ಚಲ್ಲಿ ತಯಾರಾಗಿ, ವಿಕಸನ ಸಂಸ್ಥೆಯ ಮೂಲಕ ಈ ವಿಶಿಷ್ಟ ಗಣೇಶ, “ಶೂನ್ಯ ತ್ಯಾಜ್ಯ” ಎಂಬ ಪರಿಕಲ್ಪನೆಗೆ ಸಂಪೂರ್ಣವಾಗಿ ಹೊಂದುತ್ತದೆ. ಅಚ್ಚು ಬೆಲ್ಲದ್ದಾದರೆ ಹಳದಿ, ಕೇಸರಿ ಮತ್ತು ಹಾರ್ಲಿಕ್ಸ್ ನಿಂದ ಮಾಡಿದ ಪೇಸ್ಟ್ ಬಳಸಿ ಕಣ್ಣು, ವಿಭೂತಿ ಪಟ್ಟೆ, ದಂತ ಮತ್ತು ಆಭರಣಗಳ ಅಲಂಕಾರ ಮಾಡಲಾಗಿದೆ.
ಇದೇ ರೀತಿ ಗೌರಿಯನ್ನು ಸಹ ತಯಾರಿಸಲಾಗಿದ್ದು ಮನೆಯಲ್ಲಿಯ ದೊಡ್ಡ ಪಾತ್ರೆಯಲ್ಲಿ ಶುದ್ದ ನೀರನ್ನು ಹಾಕಿ ಗೌರಿ ಮತ್ತು ಗಣೇಶನನ್ನು ಅದರಲ್ಲಿ ವಿಸರ್ಜನೆ ಮಾಡಿ ಬೆಲ್ಲದ ಪಾನಕದ ರೀತಿಯಲ್ಲಿ ಪ್ರಸಾದವಾಗಿ ಸೇವಿಸುವ ಅವಕಾಶವನ್ನು ಬೆಲ್ಲದ ಗಣಪತಿ ಮಾಡಿಕೊಡುತ್ತದೆ.
ಕಳೆದ ಮೂವತ್ತು ವರ್ಷ ಪೇಂಟಿಂಗ್ ಮಾಡದ ಮಣ್ಣಿನ ಗಣಪತಿಯಿಟ್ಟು ಪೂಜಿಸಿದ ನಾವುಗಳು ಒಂದು ಹೆಜ್ಜೆ ಮುಂದೆ ಇಟ್ಟಿದ್ದೇವೆ. ಈ ವರ್ಷ ವಿಶಿಷ್ಟ ರೀತಿಯಲ್ಲಿ ಗೌರಿ-ಗಣೇಶನ ಹಬ್ಬದ ಆಚರಣೆ ಮಾಡಿದ ಅನುಭವ. ಒಟ್ಟಾರೆ ಪರಿಸರ ಸ್ನೇಹಿ,ಆರೋಗ್ಯ ಸ್ನೇಹಿ ತೀರ್ಥರೂಪಿ ಮತ್ತು ರೈತಮಿತ್ರ ಗಣೇಶಮೂರ್ತಿಯ ಹೊಸ ವ್ಯಾಖ್ಯಾನ ನಮ್ಮ ಬೆಲ್ಲದ ಗಣಪ ಎಂದು ಭಕ್ತಿಯಿಂದ ಪ್ರಾರ್ಥಿಸಿ ಪೂಜಿಸಿ ಮಾತನಾಡುತ್ತಾರೆ ಜಿ.ಪಂ. ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ.
ಪಟ್ಟಣದ ಶ್ರೀ ಪಾಂಡುರಂಗ ರುಕ್ಮಾಯಿ ದೇವಾಲಯದ ಆವರಣದಲ್ಲಿ ಭಾವಸಾರ ಸಮಾಜದ ಯುವಮಂಡಳಿ ವತಿಯಿಂದ ವಿಶಿಷ್ಠವಾಗಿ ಶ್ರೀ ತುಕರಾಮ್ ಮಹಾರಾಜ್ ವೇಷದಲ್ಲಿ ಗಣೇಶನ ಮೂರ್ತಿಯನ್ನು ಕೂರಿಸಿದ್ದು, ಈ ಸುಂದರವಾಗಿ ಮೂರ್ತಿಯನ್ನು ಅಜ್ಜಂಪುರದ ಶಿಲ್ಪಿ ದಿವಾಕರ್ ತಯಾರಿಸಿ ನೀಡಿರುತ್ತಾರೆ ಎಂದು ಭಾವಸಾರ ಸಮಾಜದ ಮುಖಂಡ ನಂದಿನಿ ಹಾಲಿನ ಅನಿಲ್ ಹೇಳುತ್ತಾರೆ.
ಪಟ್ಟಣದ ಶ್ರೀ ವೀರಭದ್ರೇಶ್ವರ ನಗರದ ನಿವಾಸಿ ಶಿಕ್ಷಕಿ ಪಿ.ಎಂ.ಉಷಾ ಅವರ ಮನೆಯಲ್ಲಿ ಗೌರಿ ಹಬ್ಬದ ಪ್ರಯುಕ್ತ ಮುತೈದೆಯರಿಗೆ ಬಾಗಿನ ಸಮರ್ಪಣೆ ಕಾರ್ಯವು ಅದ್ದೂರಿಯಾಗಿ ನಡೆಯಿತು.
ಗಣೇಶಮೂರ್ತಿ ಪ್ರತಿಷ್ಠಾಪನೆ, ಮುತೈದೆ ಮಹಿಳೆಯರಿಗೆ ಬಾಗಿನ ಅರ್ಪಣೆ ಹಾಗೂ ಚೌತಿಯ ದಿನವಾದ ಸೋಮವಾರ ನಾಗರಪೂಜೆಯನ್ನು ಪಟ್ಟಣದ ಸಾರ್ವಜನಿಕರು ಭಕ್ತಿಯಿಂದ ನೆರವೇರಿಸಿರುವುದಾಗಿ ವರದಿಗಳು ಬಂದಿವೆ. 5 ದಿನಗಳ ನಂತರ ಗಣೇಶಮೂರ್ತಿ ಬಹುತೇಕ ವಿಸರ್ಜನೆ ಕಾರ್ಯವು ಪೊಲೀಸ್ ಬಿಗಿ ಬಂದೊಬಸ್ತ್ ನಲ್ಲಿ ನಡೆಯಲಿದೆ.