ಕಲಬುರಗಿ: ಸರ್ಕಾರ ಬೆಳೆಸಾಲ ಮನ್ನಾ ಯೋಜನೆ ಘೋಷಿಸಿದ್ದು, ಜಿಲ್ಲೆಯಲ್ಲಿ 2.25 ಲಕ್ಷ ಜನ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬೆಳೆಸಾಲ ಪಡೆದಿದ್ದಾರೆ. ಈ ಎಲ್ಲ ರೈತರು ಬೆಳೆಸಾಲ ಯೋಜನೆಗೆ ತಮ್ಮ ಹೆಸರನ್ನು ಬ್ಯಾಂಕುಗಳಲ್ಲಿ ನೋಂದಾಯಿಸಿಕೊಳ್ಳುತ್ತಿಲ್ಲ. ಕಾರಣ ಜಿಲ್ಲಾಡಳಿತದಿಂದಲೇ ರೈತರ ಮನೆ ಮನೆಗೆ ತೆರಳಿ ರೈತರಿಂದ ಘೋಷಣಾ ಪತ್ರ ಹಾಗೂ ಅವಶ್ಯಕ ದಾಖಲಾತಿಗಳನ್ನು ಬುಧವಾರದಿಂದ ಸಂಗ್ರಹಿಸಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಬೆಳೆಸಾಲ ಮನ್ನಾ ಯೋಜನೆಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ಕಲಬುರಗಿ ಜಿಲ್ಲೆಯಲ್ಲಿ ಅತೀ ಹೆಚ್ಚಿನ ರೈತರು ರಾಷ್ಟ್ರೀಕೃತ ಬ್ಯಾಂಕುಗಳಿಂದ ಬೆಳೆಸಾಲ ಪಡೆದಿದ್ದಾರೆ. ಈ ಎಲ್ಲ ರೈತರ ವಿವರವನ್ನು ವೆಬ್‌ಸೈಟ್‌ನಲ್ಲಿ ಬೆಳೆಸಾಲ ಮನ್ನಾ ಯೋಜನೆಗಾಗಿ ದಾಖಲಿಸಬೇಕಾಗಿದೆ. ಗ್ರಾಮ ಲೆಕ್ಕಿಗರು ತಮ್ಮ ವ್ಯಾಪ್ತಿಯ ಪ್ರತಿ ಮನೆಗೆ ಭೇಟಿ ನೀಡಿ ಪ್ರತಿದಿನ 200 ರೈತರಿಂದ ಸ್ವಯಂ ಘೋಷಣಾ ಪತ್ರ, ಪಡಿತರ ಚೀಟಿ, ಆಧಾರ ಕಾರ್ಡ್ ಹಾಗೂ ಸರ್ವೇ ನಂಬರ್‌ಗಳ ಮಾಹಿತಿ ಸಂಗ್ರಹಿಸಿ ಸಲ್ಲಿಸಬೇಕೆಂದು ತಿಳಿಸಿದರು.
ರೈತರು ಮುಂಚಿತವಾಗಿಯೇ ಪಡಿತರ ಚೀಟಿ, ಆಧಾರ ಕಾರ್ಡ್ ದಾಖಲೆಗಳನ್ನು ಇಟ್ಟುಕೊಂಡು ಗ್ರಾಮ ಲೆಕ್ಕಿಗರು ಮನೆಗೆ ಬಂದಾಗ ಸ್ವಯಂ ಘೋಷಣಾ ಪತ್ರದ ಮೇಲೆ ಸಹಿ ಹಾಕಿ ಅವರಿಂದ ಸ್ವೀಕೃತಿ ಪತ್ರ ಪಡೆಯಬೇಕು. ಒಂದು ವೇಳೆ ಈಗಾಗಲೇ ಬ್ಯಾಂಕಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಲ್ಲಿ ಬ್ಯಾಂಕಿನಿಂದ ಪಡೆದ ಸ್ವೀಕೃತಿ ಪತ್ರವನ್ನು ಗ್ರಾಮ ಲೆಕ್ಕಿಗರಿಗೆ ತೋರಿಸಬೇಕು. ಗ್ರಾಮ ಲೆಕ್ಕಿಗರು ರೈತರಿಂದ ಪಡೆದ ದಾಖಲೆಗಳನ್ವಯ ಅವರ ಹೆಸರು ಮತ್ತು ಆಧಾರ ಕಾರ್ಡ್ ನಂಬರುಗಳನ್ನು ನಿಖರವಾಗಿ, ಸ್ಪಷ್ಟವಾಗಿ ಘೋಷಣಾ ಪತ್ರದಲ್ಲಿ ನಮೂದಿಸಬೇಕು.
ಘೋಷಣಾ ಪತ್ರದಲ್ಲಿ ನಮೂದಿಸಿರುವ ಹೆಸರು ಮತ್ತು ಅಂಕಿ-ಅಂಶಗಳನ್ನು ನಿಖರವಾಗಿ ವೆಬ್‌ಸೈಟ್ ನಲ್ಲಿ ಭರ್ತಿ ಮಾಡಬೇಕು ಎಂದು ಹೇಳಿದರು. ವೆಬ್‌ಸೈಟ್‌ನಲ್ಲಿ ತಪ್ಪು ಮಾಹಿತಿ ಭರ್ತಿ ಮಾಡಿದರೆ ಮತ್ತೆ ಪುನಃ ಘೋಷಣಾ ಪತ್ರಗಳನ್ನು ಪಡೆಯಬೇಕಾಗುತ್ತದೆ. ಕಾರಣ ಎಲ್ಲ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸಬೇಕು ಹಾಗೂ ರೈತರಿಂದ ಪಡೆಯುವ ಘೋಷಣಾ ಪತ್ರದ ಜೊತೆಗೆ ದಾಖಲಾತಿಗಳನ್ನು ಲಗತ್ತಿಸಿ ಬ್ಯಾಂಕಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಬ್ಯಾಂಕಿನವರು ದಾಖಲಾತಿ ಸಲ್ಲಿಸಿಲ್ಲ ಎನ್ನುವ ದೂರು ಬರಬಾರದು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಕಲಬುರಗಿ ಸಹಾಯಕ ಆಯುಕ್ತ ರಾಚಪ್ಪ, ಶಿಷ್ಟಾಚಾರ ತಹಶೀಲ್ದಾರ್ ಪ್ರಕಾಶ ಚಿಂಚೋಳಿಕರ, ಎಲ್ಲ ತಾಲೂಕಿನ ತಹಶೀಲ್ದಾರರು, ಗ್ರಾಮ ಲೆಕ್ಕಿಗರು ಪಾಲ್ಗೊಂಡಿದ್ದರು.
ಸೂಕ್ತ ಕ್ರಮಕ್ಕೆ ತಹಶೀಲ್ದಾರ್‌ಗಳಿಗೆ ಆದೇಶ
ಜಿಲ್ಲೆಯಲ್ಲಿ ಸಹಕಾರ ಬ್ಯಾಂಕುಗಳಲ್ಲಿ ಬೆಳೆ ಸಾಲ ಪಡೆದ ರೈತರ ಮಾಹಿತಿ ಸಂಗ್ರಹಿಸಲಾಗಿದೆ. ಆದರೆ ಮಾಹಿತಿಗಳು ಸ್ಪಷ್ಟವಾಗಿ ಹಾಗೂ ನಿಖರವಾಗಿ ಇಲ್ಲದ ಕಾರಣ ವೆಬ್‌ಸೈಟ್‌ನಲ್ಲಿ ದಾಖಲಾತಿಗಳು ತಾಳೆಯಾಗುತ್ತಿಲ್ಲ. ಸಹಕಾರ ಬ್ಯಾಂಕುಗಳಿಂದ ಸಾಲ ಪಡೆದ ರೈತರ ಸ್ವಯಂ ಘೋಷಣಾ ಪತ್ರ ಹಾಗೂ ದಾಖಲಾತಿಗಳನ್ನು ಸಂಗ್ರಹಿಸಬೇಕಾಗಿದ್ದು, ಈ ಕುರಿತು ತಹಶೀಲ್ದಾರರು ತಾಲೂಕಾ ಮಟ್ಟದ ಸಹಕಾರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ಕರೆದು ಕ್ರಮ ಜರುಗಿಸಬೇಕು.
ಸಹಕಾರಿ ಬ್ಯಾಂಕಿನಿಂದ ಪಡೆದ ಬೆಳೆಸಾಲವನ್ನು ಸಹಕಾರಿ ಬ್ಯಾಂಕಿನಿಂದಲೇ ಮನ್ನಾ ಮಾಡಲಾಗುವುದು. ಸಹಕಾರಿ ಬ್ಯಾಂಕಿನ ಬೆಳೆಸಾಲವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಾಗಲಿ, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪಡೆದ ಬೆಳೆಸಾಲವನ್ನು ಸಹಕಾರಿ ಬ್ಯಾಂಕಿನಲ್ಲಿ ಮನ್ನಾ ಮಾಡಲು ಅವಕಾಶಗಳಿಲ್ಲ.
ಆರ್. ವೆಂಕಟೇಶಕುಮಾರ, ಜಿಲ್ಲಾಧಿಕಾರಿ