Advertisement

ಕೆ.ಆರ್‌.ಮಾರುಕಟ್ಟೆಯಲ್ಲಿಂದು ಒತ್ತುವರಿ ತೆರವು

11:49 AM Mar 29, 2019 | Team Udayavani |

ಬೆಂಗಳೂರು: ನಗರದ ಕೆ.ಆರ್‌.ಮಾರುಕಟ್ಟೆಯಲ್ಲಿ ಅನಧಿಕೃತವಾಗಿ ನಿರ್ಮಿಸಿದ ಮಳಿಗೆಗಳು, ಪಾದಚಾರಿ ಹಾಗೂ ರಸ್ತೆ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಿಸುವಂತೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಶುಕ್ರವಾರ ಕಾರ್ಯಾಚರಣೆ ಪ್ರಾರಂಭವಾಗಲಿದೆ.

Advertisement

ನಗರದ ಮಾರುಕಟ್ಟೆಗಳಲ್ಲಿ ನಿಯಮಗಳನ್ನು ಉಲ್ಲಂ ಸಿ ನಿರ್ಮಿಸಿದ ಕಟ್ಟಡ, ಮಳಿಗೆ ಹಾಗೂ ಅಗ್ನಿ ಶಾಮಕ ದಳದ ವಾಹನ ಸಂಚಾರಕ್ಕೆ ಅಡ್ಡಿಯಾಗುವ ಕಟ್ಟಡ ತೆರವುಗೊಳಿಸುವಂತೆ ರಾಜ್ಯ ಹೈಕೋರ್ಟ್‌ ಬಿಬಿಎಂಪಿಗೆ ಖಡಕ್‌ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಗುರುವಾರ ಕೆ.ಆರ್‌.ಮಾರುಕಟ್ಟೆಗೆ ಅಗ್ನಿಶಾಮಕ ದಳದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಮಾರುಕಟ್ಟೆಯಲ್ಲಿ ಅನಧಿಕೃತವಾಗಿ ಮಳಿಗೆಗಳನ್ನು ನಿರ್ಮಿಸಿಕೊಂಡಿರುವವರು ಸ್ವಯಂಪ್ರೇರಿತವಾಗಿ ತೆರವುಗೊಸಬೇಕು. ಇಲ್ಲದಿದ್ದರೆ ಪಾಲಿಕೆಯಿಂದ ಶುಕ್ರವಾರ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ತೆರವು ಕಾರ್ಯಕ್ಕೆ ಸ್ಥಳೀಯ ಪೊಲೀಸರ ನೆರವು ಪಡೆಯುವಂತೆ ತಿಳಿಸಿದ್ದಾರೆ.

ಜತೆಗೆ ಅಗ್ನಿಶಾಮಕ ವಾಹನ ನಿಲುಗಡೆ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ವಸ್ತುಗಳ ಸಂಗ್ರಹಣೆಗೆ ಅವಕಾಶ ನೀಡಬಾರದು. ಮಾರುಕಟ್ಟೆಯ ಸುತ್ತಮುತ್ತದ ರಸ್ತೆಯಲ್ಲಿ ಅನಧಿಕೃತವಾಗಿ ವಾಹನ ನಿಲುಗಡೆ ಮಾಡದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಮಾರುಕಟ್ಟೆ ಪರಿಶೀಲನೆ ವೇಳೆ ಪಾದಚಾರಿ ಮಾರ್ಗ ಹಾಗೂ ರಸ್ತೆ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿದ ಆಯುಕ್ತರು, ನಿಮಗೆ ಮಳಿಗೆ ಒಳಗೆ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ. ಆದರೆ, ಪಾದಚಾರಿ ಹಾಗೂ ರಸ್ತೆ ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸಲು ಅನುಮತಿ ನೀಡದವರು ಯಾರು? ಎಂದು ಪ್ರಶ್ನಿಸಿದರು. ಜತೆಗೆ, ಎಲ್ಲವನ್ನೂ ನೀವೇ ತೆರವು ಮಾಡಬೇಕು. ಇಲ್ಲವೆ ನಾವು ತೆರವುಗೊಳಿಸಬೇಕಾಗುತ್ತದೆ ಎಂದು ಹೇಳಿದರು.

Advertisement

ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ: ಹೈಕೋರ್ಟ್‌ ಸೂಚನೆಯಂತೆ ಮಾರುಕಟ್ಟೆಯ ಸುತ್ತಮುತ್ತದ ರಸ್ತೆಯಲ್ಲಿ ಅಗ್ನಿ ಶಾಮಕ ವಾಹನ ಸಂಚಾರಕ್ಕೆ ರಸ್ತೆ ಮುಕ್ತವಾಗಿರಬೇಕು. ಆದರೆ, ಕೆ.ಆರ್‌.ಮಾರುಕಟ್ಟೆಯ ಒಳಾಂಗಣದ ರಸ್ತೆಗಳನ್ನು ಬೀದಿ ವ್ಯಾಪಾರಿಗಳು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಎರಡು ಪಥದ ರಸ್ತೆಯಲ್ಲಿ ಒಂದು ಬದಿಯಲ್ಲಿ ಬೀದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡಿ, ಮತ್ತೂಂದು ಬದಿಯಲ್ಲಿ ಯಾವುದೇ ಕಾರಣಕ್ಕೂ ರಸ್ತೆ ಅತಿಕ್ರಮಣವಾಗದಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಮಾರ್ಷಲ್‌ಗ‌ಳ ನೇಮಕ: ಮಾರುಕಟ್ಟೆಯಲ್ಲಿ ಒತ್ತುವರಿ ತೆರವು ಬಳಿಕ ಮತ್ತೆ ವ್ಯಾಪಾರಿಗಳು ಒತ್ತುವರಿ ಮಾಡಿಕೊಳ್ಳದಂತೆ ಹಾಗೂ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗಾಗಿ ನಾಲ್ವರು ಮಾರ್ಷಲ್‌ಗ‌ಳನ್ನು ನೇಮಿಸಲಾಗುವುದು ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 117 ಮಾರುಕಟ್ಟೆಗಳಿದ್ದು, ಅದರಲ್ಲಿ ಕೆ.ಆರ್‌. ಮಾರುಕಟ್ಟೆ, ರಸಲ್‌ ಮಾರುಕಟ್ಟೆ, ಮಡಿವಾಳ ಮಾರುಕಟ್ಟೆ, ಜಾನ್ಸನ್‌ ಮಾರುಕಟ್ಟೆಗಳು ಹಳೆಯ ಹಾಗೂ ಅತ್ಯಂತ ದೊಡ್ಡ ಕಟ್ಟಡಗಳನು ಹೊಂದಿವೆ.

ಒಂದೊಮ್ಮೆ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ ಸಂಭವಿಸುವ ಕೂಡಲೇ ಶಮನ ಹಾಗೂ ಅವಘಡಗಳಿಂದ ಪಾರಾಗುವ ವ್ಯವಸ್ಥೆ ಕಲ್ಪಿಸುವಂತೆ ಹೈಕೋರ್ಟ್‌ ಸೂಚನೆ ನೀಡಿದೆ ಎಂದರು.
ಅದರಂತೆ ಈಗಾಗಲೇ ಕೆ.ಆರ್‌.ಮಾರುಕಟ್ಟೆಯಲ್ಲಿ ಅಗ್ನಿ ಅವಘಡ ಶಮನ ಮತ್ತು ಉಪಕರಣಗಳ ಅಳವಡಿಕೆಗೆ 2.70 ಕೋಟಿ ರೂ. ಟೆಂಡರ್‌ ಆಹ್ವಾನಿಸಲಾಗಿದೆ.

ಅದನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ಜತೆಗೆ ಮಾರುಕಟ್ಟೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸುವಂತೆ ಹೈಕೋರ್ಟ್‌ ಸೂಚಿಸಿದ್ದು, ಕೂಡಲೇ ತೆರವುಗೊಳಿಸುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಿದ್ದು, ಶುಕ್ರವಾರ ಬಿಬಿಎಂಪಿ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಹೇಳಿದರು.

ಹೈಕೋರ್ಟ್‌ ನಿರ್ದೇಶನದಂತೆ ಕ್ರಮಕೈಗೊಳ್ಳಲಾಗುತ್ತಿದ್ದು, ಅಗ್ನಶಮನಕ್ಕೆ ಅಲ್ಪಾವಧಿ ಹಾಗೂ ದೀರ್ಘಾವಧಿಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಗ್ನಿ ಅವಘಡ ಸಂಭವಿಸಿದರೆ ಅಗ್ನಿಶಮನ ದಳದ ಸಿಬ್ಬಂದಿ ಒಳಗೆ ಪ್ರವೇಶಿಸಿಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯಿದೆ.
-ರವಿಕಾಂತೇಗೌಡ, ಡಿಐಜಿ, ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು

Advertisement

Udayavani is now on Telegram. Click here to join our channel and stay updated with the latest news.

Next