ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ನೀರಿಗಾಗಿ ಜಗಳ ಆಡಿದ್ದು ಸಾಕು.ಕೋರ್ಟ್ ಕಚೇರಿ ಅಲೆದು ಏನೂ ಪ್ರಯೋಜನ ಆಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುರುವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ”ಮೇಕೆದಾಟು ವಿಚಾರದಲ್ಲಿ ನಾವು ನೀರಿಗೋಸ್ಕರ ನಡೆದಿದ್ದೇವೆ. ತಮಿಳುನಾಡಿಗೆ ಯಾವುದೇ ತರಹದ ಸಮಸ್ಯೆ ಇಲ್ಲ. ನಮ್ಮ ಹೋರಾಟ ಆದ ಮೇಲೆ ಬಜೆಟ್ ನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು 1 ಸಾವಿರ ಕೋಟಿ ರೂ. ಮೀಸಲಿಟ್ಟು ಪ್ರಸ್ತಾವನೆ ಮಾಡಿದ್ದಾರೆ. ಅದನ್ನು ಖರ್ಚು ಮಾಡುತ್ತೇವೆ”ಎಂದರು.
”ನಮಗೇನು ತಮಿಳುನಾಡಿನ ಮೇಲೆ ದ್ವೇಷ ಇಲ್ಲ, ಅವರೊಂದಿಗೆ ಯುದ್ದ ಮಾಡಬೇಕೆಂದಿಲ್ಲ. ಅಲ್ಲಿರುವವರು ನಮ್ಮ ಅಣ್ಣ- ತಮ್ಮಂದಿರು. ಅಲ್ಲಿರುವವರ ಅಣ್ಣ-ತಮ್ಮಂದಿರು ಇಲ್ಲಿದ್ದಾರೆ. ಯಾರ ಮೇಲೂ ದ್ವೇಷ-ಅಸೂಯೆ ಮಾಡಬೇಕಾಗಿಲ್ಲ” ಎಂದರು.
”ಮೇಕೆದಾಟು ಯೋಜನೆ ನಮ್ಮ ಯೋಜನೆ. ತಮಿಳುನಾಡಿನವರಿಗೂ ಅನುಕೂಲ ಆಗುತ್ತದೆ. ಸಮುದ್ರಕ್ಕೆ ಹೋಗುವಂತಹ ನೀರಿನಿಂದ ಅವರಿಗೂ ಅನುಕೂಲ ಆಗುತ್ತದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಎಲ್ಲಾ ರೈತರಿಗೆ ನಾವು ಸಾಹಾಯ ಮಾಡಬಹುದು. ಬೀಗ ನಮ್ಮ ಹತ್ತಿರ ಇಲ್ಲ, ಕೇಂದ್ರ ಸರಕಾರದ ಹತ್ತಿರ ಇದೆ.ಎಷ್ಟು ನೀರನ್ನು ನಾವು ಅವರಿಗೆ ಬಿಡಬೇಕೋ ಆ ನೀರನ್ನು ನಾವು ಬಿಡಲು ಈಗಾಗಲೇ ಆದೇಶಗಳಾಗಿವೆ. ನಮ್ಮ ರಾಜ್ಯದ ರಕ್ಷಣೆ ಮಾಡುತ್ತೇವೆ. ನಮ್ಮಲ್ಲಿ ಜಲ ವಿದ್ಯುತ್ ಸ್ಥಾವರ ಮಾಡುವುದರಿಂದ ಅವರಿಗೇನಾದರೂ ನಷ್ಟವಿದೆಯಾ” ಎಂದು ಪ್ರಶ್ನಿಸಿದರು.
”ನಮ್ಮಲ್ಲಿ ನೀರು ಸಂಗ್ರಹಿಸಿ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡಲು ತೀರ್ಪಿನಲ್ಲಿ ಆದೇಶ ಆಗಿದೆ. ಆತಂಕ ಬೇಡ. ನಾನು ತಮಿಳುನಾಡಿಗೆ ವಿನಂತಿ ಮಾಡಿಕೊಳ್ಳುತ್ತೇನೆ, ನಿಮಗೆ ಯಾವುದೇ ತರಹ ತೊಂದರೆ ಮಾಡುವುದಿಲ್ಲ.ಹೃದಯ ಶ್ರೀಮಂತಿಕೆ ಇರಲಿ, ನಮ್ಮಲ್ಲೂ ಹೃದಯ ಶ್ರೀಮಂತಿಕೆ ಇದೆ.ನಾವು ಅಕ್ಕ ಪಕ್ಕದ ರಾಜ್ಯದವರು , ನೀರಿಗಾಗಿ ಜಗಳ ಆಡಿದ್ದು ಸಾಕು.ಕೋರ್ಟ್ ಕಚೇರಿ ಅಲೆದು ಏನೂ ಪ್ರಯೋಜನ ಆಗುವುದಿಲ್ಲ.ಸೌಹಾರ್ದತೆಯಿಂದ ಇರುವ. ಕೊನೆಗೆ ಯಾರಿಗೆ ಕುಡಿಯುವ ನೀರಿಗೆ. ನಿಮ್ಮ ರೈತರಿಗೆ ಇಬ್ಬರಿಗೂ ಸಹಾಯವಾಗಲಿ” ಎಂದರು.
ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ವಿನಲ್ಲಿ ಜಲಾಶಯ ನಿರ್ಮಾಣಕ್ಕೆ ಮುಂದಾಗಿರುವ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ತಮಿಳುನಾಡು ಸರ್ಕಾರ ಬುಧವಾರ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಕರ್ನಾಟಕದ ಉದ್ದೇಶಿತ ಯೋಜನೆಯು ಕಾವೇರಿ ವಿವಾದ ನ್ಯಾಯಾಧಿಕರಣದ ಆದೇಶ ಅಥವಾ ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪಿನಲ್ಲಿ ಯಾವುದೇ ಉಲ್ಲೇಖವನ್ನು ಹೊಂದಿಲ್ಲ ಎಂದು ಜಲಸಂಪನ್ಮೂಲ ರಾಜ್ಯ ಸಚಿವ ದುರೈಮುರುಗನ್ ಶಿವಕುಮಾರ್ ಹೇಳಿಕೆ ನೀಡಿದ್ದರು.