Advertisement

ಎನ್ನಾರೈಗಳಿಗೆ ರಾಜ್ಯದಿಂದ ಪ್ರತ್ಯೇಕ ನೀತಿ

03:45 AM Jan 07, 2017 | Team Udayavani |

ಬೆಂಗಳೂರು: ಬಂಡವಾಳ ಹೂಡಿಕೆಗೆ ಅನಿವಾಸಿ ಕನ್ನಡಿಗರನ್ನು ಆಕರ್ಷಿಸಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುವ ಸಂಬಂಧ ರಾಜ್ಯ ಸರ್ಕಾರವು ದೇಶದಲ್ಲಿಯೇ ಮೊದಲ ಬಾರಿಗೆ “ಕರ್ನಾಟಕ ಅನಿವಾಸಿ ಭಾರತೀಯ ನೀತಿ’ಯನ್ನು ಜಾರಿಗೊಳಿಸಿದೆ.

Advertisement

ವಿದೇಶದಲ್ಲಿ ಉದ್ಯಮಗಳನ್ನು ನಡೆಸುತ್ತಿರುವ ಕನ್ನಡಿಗರು ರಾಜ್ಯದಲ್ಲಿಯೂ ಬಂಡವಾಳ ಹೂಡಿಕೆ ಮಾಡಿ ಉದ್ಯಮ ನಡೆಸಲು ಪ್ರೋತ್ಸಾಹಿಸುವ ದೃಷ್ಟಿಯಿಂದ ನೂತನ ನೀತಿ ರೂಪಿಸಲಾಗಿದೆ. ಶುಕ್ರವಾರ ಗೃಹ ಕಚೇರಿ “ಕೃಷ್ಣಾ’ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ನೀತಿ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ಬಂಡವಾಳ ಹೂಡಿಕೆಗೆ ಪ್ರೋತ್ಸಾಹಿಸಲು ಸೇವಾ ಕೇಂದ್ರ ಆರಂಭಿಸುವುದು ಮತ್ತು ಅನಿವಾಸಿ ಕನ್ನಡಿಗರಿಗೆ ವಿದೇಶದಲ್ಲಿ ಗೌರವ ಸಿಗಲಿ ಎಂಬ ದೃಷ್ಟಿಯಿಂದ ವಿಶೇಷ ಕಾರ್ಡ್‌ವೊಂದನ್ನು ನೀಡಲಾಗುತ್ತದೆ. ಅಲ್ಲದೇ, ಅನಿವಾಸಿ ಕನ್ನಡಿಗರಿಗೆ ಅಪಘಾತ ಸಂಭವಿಸಿದ ವೇಳೆ ಎರಡು ಲಕ್ಷ ರೂ.ವರೆಗೆ ವಿಮಾ ಸೌಲಭ್ಯ ದೊರೆಯುವಂತೆ ಕ್ರಮ ಹಾಗೂ ಸ್ವದೇಶಕ್ಕೆ ಸುರಕ್ಷಿತವಾಗಿ ಕರೆತರುವ ವ್ಯವಸ್ಥೆ ಒದಗಿಸಲಾಗುವುದು. ಇದಲ್ಲದೇ, ಕನ್ನಡ ಭಾಷೆಯನ್ನು ಉತ್ತೇಜಿಸುವುದು ಮತ್ತು ಕರ್ನಾಟಕದ ಸಾಂಸ್ಕೃತಿಕ ಉತ್ಸವಗಳನ್ನು ಪ್ರೋತ್ಸಾಹಿಸಲಾಗುತ್ತದೆ. ವಿದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಹಾಗೂ ಉದ್ಯೋಗಕ್ಕೆ ತೆರಳುವವರಿಗೆ ಪೂರ್ವಭಾವಿ ಮಾರ್ಗದರ್ಶನ ನೀಡುವುದು, ಕೌಶಲ್ಯಾಭಿವೃದ್ಧಿಗೆ ಒತ್ತು ನೀಡುವುದು ಸೇರಿದಂತೆ ಹಲವು ಅಂಶಗಳನ್ನು ನೀತಿಯಲ್ಲಿ ಅಳವಡಿಸಲಾಗಿದೆ ಎಂದು ವಿವರಿಸಿದರು.

ಅನಿವಾಸಿ ಭಾರತೀಯರನ್ನು ಮತ್ತು ಕನ್ನಡಿಗರನ್ನು ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳುವುದು, ಸಂಘಟಿಸುವುದು, ಅಭಿವೃದ್ಧಿ ಯೋಜನೆಗಳಲ್ಲಿ ತೊಡಗುವಂತೆ ಪ್ರೋತ್ಸಾಹಿಸುವುದು ಹಾಗೂ ಜ್ಞಾನ ಕೌಶಲ್ಯಗಳನ್ನು ಬಳಸಿಕೊಳ್ಳುವುದು ನೀತಿಯ ಉದ್ದೇಶವಾಗಿದೆ. ವಿದೇಶದಲ್ಲಿನ ಕನ್ನಡ ಸಂಘಟನೆಗಳೊಂದಿಗೆ ಸಂಪರ್ಕ ಕಲ್ಪಿಸುವ ಜಾಲತಾಣ ಸೃಷ್ಟಿಸುವುದು, ಅನಿವಾಸಿ ಕನ್ನಡಿಗ ಕಾರ್ಮಿಕರು, ಶೋಷಣೆಗೊಳಗಾದವರು, ಮನೆ ಕೆಲಸದವರು ಅಪಘಾತಕ್ಕೊಳಗಾದವರಿಗೆ ತುರ್ತು ಸಂದರ್ಭದಲ್ಲಿ ಆರ್ಥಿಕ ನೆರವು ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ನುಡಿದರು.

ನಮ್ಮ ಊರು ನಮ್ಮ ನಾಡು:
ಅನಿವಾಸಿ ಕನ್ನಡಿಗರ ಮೂಲಕ ನಮ್ಮ ಊರು, ನಮ್ಮ ನಾಡು ಕಾರ್ಯಕ್ರಮ ಪ್ರಾರಂಭಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಶಾಲೆ ಮತ್ತು ಆಸ್ಪತ್ರೆಗಳನ್ನು ದತ್ತು ಪಡೆದು ಅಭಿವೃದ್ಧಿಗೊಳಿಸುವುದು, ಎದುರಿಸುತ್ತಿರುವ ಕಾನೂನು ವಿವಾದ, ವಾಣಿಜ್ಯ ವಿವಾದ ಸೇರಿದಂತೆ ಹಲವು ವಿಷಯಗಳ ಇತ್ಯರ್ಥಕ್ಕೆ ನೆರವು ಪಡೆಯಲು ನೀತಿ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

Advertisement

ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಮಾತನಾಡಿ, ನಾಡಿನಲ್ಲಿ 250 ಕೋಟಿ ರೂ.ಗಿಂತ ಹೆಚ್ಚು ಹೂಡಿಕೆ ಮಾಡುವ ಉದ್ಯಮಿಗಳಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತದೆ. ಅನಿವಾಸಿ ಕನ್ನಡ ಉದ್ಯಮಿಗಳು ಸುಮಾರು ನಾಲ್ಕು ಲಕ್ಷ ಮಂದಿ ಇರುವ ಬಗ್ಗೆ ಅಂದಾಜಿಸಲಾಗಿದ್ದು, ಅವರುಗಳು ದೇಶದ ಆಸ್ತಿಯೂ ಆಗಿದ್ದಾರೆ. ಉದ್ಯಮಿಗಳನ್ನು ಆಕರ್ಷಿಸಲು ಹಲವು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ, ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಆರತಿ ಕೃಷ್ಣ ಇತರರು ಉಪಸ್ಥಿತರಿದ್ದರು.

ಭಾರತೀಯರ ಮತ್ತು ಕನ್ನಡಿಗರ ಕೌಶಲ್ಯ, ನೈಪುಣ್ಯತೆ ವಿಶ್ವಮಟ್ಟದಲ್ಲಿ ಪ್ರಸಿದ್ಧಿಯಾಗಿದೆ. ವಿದೇಶದಲ್ಲಿ ಉದ್ಯಮ ನಡೆಸುವುದರ ಜತೆಗೆ ಅವರ ಆದಾಯವನ್ನು ರಾಜ್ಯದಲ್ಲಿ ಹೂಡುವಂತೆ ಮನವೊಲಿಸಿ ತಾಯ್ನಾಡಿನ ಅಭಿವೃದ್ಧಿಗೆ ಕೈ ಜೋಡಿಸುವ ಸಂಬಂಧ ನೀತಿ ರೂಪಿಸಲಾಗಿದೆ. ರಾಜ್ಯದಲ್ಲಿ ಬಂಡವಾಳ ಹೂಡುವ ಅನಿವಾಸಿಗರಿಗೆ ಹಲವು ಸವಲತ್ತು, ರಿಯಾಯಿತಿ, ಸೌಲಭ್ಯಗಳನ್ನು ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next