Advertisement

ಇರುವ ಬದುಕನ್ನು ಪೂರ್ಣವಾಗಿ ಅನುಭವಿಸುವುದು

10:52 PM Dec 02, 2020 | mahesh |

ಝೆನ್‌ ಗುರು ಇಶುವಾನ್‌ ಮತ್ತು ಅವನ ಶಿಷ್ಯ ಇಯೋಲಿ ಗತಿಸಿದ ಗೆಳೆಯನೊಬ್ಬನ ಕುಟುಂಬಸ್ಥರಿಗೆ ಸಾಂತ್ವನ ಹೇಳಲೆಂದು ಅವರ ಮನೆಗೆ ಹೋಗಿದ್ದರು. ಅಲ್ಲಿ ಪಾರ್ಥಿವ ಶರೀರವನ್ನು ಕಂಡ ಬಳಿಕ ಶಿಷ್ಯ ಇಯೋಲಿ ಗುರುವನ್ನು ಕೇಳಿದ, “ಅವರು ಜೀವಂತವಾಗಿದ್ದಾರೆಯೇ ಮೃತ ಪಟ್ಟಿದ್ದಾರೆಯೇ?’ ಗುರು ಹೇಳಿದ, “ಅವರು ಸತ್ತಿದ್ದಾರೆ ಎಂದೂ ನೀನು ಹೇಳುವ ಹಾಗಿಲ್ಲ, ಜೀವಂತ ವಿದ್ದಾರೆ ಎಂದೂ ನೀನು ಹೇಳುವಂತಿಲ್ಲ’.

Advertisement

ಇಯೋಲಿ ಕೇಳಿದ, “ಯಾಕೆ ಹಾಗೆ ಹೇಳುವಂತಿಲ್ಲ?’ “ನೀನು ಹೇಳುವಂತಿಲ್ಲ ಎಂದರೆ ನೀನು ಹೇಳುವಂತಿಲ್ಲ’ – ಗುರುವಿನ ಉತ್ತರ.

ಇಯೋಲಿಗೆ ಕೋಪ ಬಂತು, “ನೀನು ನನ್ನ ಪ್ರಶ್ನೆಗೆ ಉತ್ತರ ಹೇಳಿಬಿಡುವುದೇ ಒಳ್ಳೆಯದು. ಇಲ್ಲವಾದರೆ ನಾನು ನಿನಗೆರಡು ಬಾರಿಸಲಿದ್ದೇನೆ.’

“ನೀನು ಪೆಟ್ಟು ಕೊಡುವುದಿದ್ದರೆ ಕೊಡು. ಆದರೆ ನೀನು ಹಾಗೆ ಹೇಳುವ ಹಾಗಿಲ್ಲ.’

“ಮತ್ತೆ ನೀನೆಂಥ ಗುರು? ನಿನಗೆ ಗೊತ್ತಿದ್ದರೂ ನೀನು ಶಿಷ್ಯರಿಗೆ ಹೇಳಿಕೊಡುತ್ತಿ ಲ್ಲವಲ್ಲ’ ಎಂದು ಹೇಳಿದ ಇಯೋಲಿ ಗುರುವಿಗೆ ಒಂದೇಟು ಬಾರಿಸಿ ಅಲ್ಲಿಂದ ಹೊರಟು ಹೋದ. ಕೆಲವು ವರ್ಷಗಳು ಕಳೆದವು. ಒಂದು ದಿನ ಗುರು ಇಶುವಾನ್‌ ಮೃತಪಟ್ಟ. ಇಯೋಲಿ ಆಗ ಶೊಶು ಎಂಬ ಇನ್ನೊಬ್ಬ ಗುರುವಿನ ಶಿಷ್ಯ ನಾಗಿದ್ದ. ಇಶುವಾನ್‌ನ ಮರಣದ ಸುದ್ದಿ ಕೇಳಿ ಇಯೋಲಿ ತನ್ನ ಗುರು ಶೊಶುವಿನೆದುರು ಅದೇ ಹಳೆಯ ಪ್ರಶ್ನೆಯನ್ನು ಎತ್ತಿದ, “ಅವರು ಸತ್ತಿದ್ದಾರೆಯೇ ಬದುಕಿದ್ದಾರೆಯೇ?’

Advertisement

ಗುರು ಶೊಶು, “ಅವರು ಸತ್ತಿದ್ದಾರೆ ಎಂದೂ ನೀನು ಹೇಳುವ ಹಾಗಿಲ್ಲ, ಜೀವಂತ ವಿದ್ದಾರೆ ಎಂದೂ ನೀನು ಹೇಳುವಂತಿಲ್ಲ’ ಎಂದು ಉತ್ತರಿಸಿದ. ಅದನ್ನು ಕೇಳಿ ಇಯೋಲಿಗೆ ಜ್ಞಾನೋದಯವಾಯಿತು.

ಇದೊಂದು ಝೆನ್‌ ಕಥೆ. ಓದುವಾಗ ಒಗಟಿನ ಹಾಗೆ ಭಾಸವಾಗುತ್ತದೆ. ಆದರೆ ನಮಗೆ ಗೊತ್ತಿರುವುದು ಮತ್ತು ಗೊತ್ತಿಲ್ಲದೆ ಇರುವುದರ ವ್ಯತ್ಯಾಸವನ್ನು ಸೂಚ್ಯವಾಗಿ ಹೇಳುತ್ತದೆ. ಬದುಕನ್ನು ಗ್ರಹಿಸಲು ತಿಳಿಯ ದವನು ಸಾವನ್ನು ಗ್ರಹಿಸಲಾರ. ನಾವು ಈಗ ಏನು ಎಂಬುದನ್ನು ತಿಳಿಯದೆ ಹೋದರೆ ಮುಂದೆ ಆಗಲಿರುವುದನ್ನು ಅರ್ಥ ಮಾಡಿ ಕೊಳ್ಳುವುದು ಸಾಧ್ಯವೇ? ಸಾವು, ಜೀವನದ ಅಂತ್ಯ, ಮೃತ್ಯು, ಇಹಲೋಕವನ್ನು ತೊರೆಯು ವುದು ಎನ್ನುವ ಪರಿಕಲ್ಪನೆಯು ಸಾಮಾನ್ಯ ವಾಗಿ ರೂಢಿಯಲ್ಲಿ ಬಂದಿರುವಂಥದ್ದು. ಒಂದರ್ಥದಲ್ಲಿ ಅದೊಂದು ಭ್ರಮೆ ಮಾತ್ರ. ಇರುವುದು ಬದುಕು ಮಾತ್ರ. ಈ ಬದುಕು ಎಂಬುದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಮರಣ ಎಂಬುದು ಬದುಕಿನ ಇನ್ನೊಂದು ಆಯಾಮ ಎಂಬುದರ ಅರಿವಾಗುತ್ತದೆ.

ನಮಗೆ ಸಾವು ಎಂಬುದು ಯಾಕೆ ಅರ್ಥ ವಾಗುವುದಿಲ್ಲ, ಅದರಾಚೆಗೆ ಏನಿದೆ ಎಂಬುದು ಯಾಕೆ ತಿಳಿಯು ವುದಿಲ್ಲ ಎಂದರೆ ಅದು ಇನ್ನಷ್ಟೇ ನಮಗೆ ಸಂಭವಿಸ ಬೇಕಿದೆ. ಬದುಕು ಹೇಗೆಯೋ ಹಾಗೆಯೇ ಸಾವನ್ನು ಕೂಡ ಸ್ವ- ಅನುಭವದ ಮೇಲಷ್ಟೇ ಅರ್ಥ ಮಾಡಿಕೊಳ್ಳಲು ಸಾಧ್ಯ. ಅದನ್ನು ಇನ್ನೊಬ್ಬರ ಅನುಭವವನ್ನು ಆಧರಿಸಿ ತಿಳಿಯಲಾಗದು. ಬದುಕನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಾವು ಅದನ್ನು ಅನುಭವಿಸಬೇಕು.

ಯಾರೋ ಒಬ್ಬ ಜೀವಂತ ಇದ್ದಾನೆ ಅಥವಾ ಇಲ್ಲ ಎಂದು ಘೋಷಿಸುವುದು ಸಾಮಾಜಿಕವಾಗಿ ಮಾತ್ರ ಪ್ರಸ್ತುತ. ಸೃಷ್ಟಿಯ ಸ್ತರದಲ್ಲಿ ಅದಕ್ಕೆ ಯಾವ ಪ್ರಸ್ತುತತೆಯೂ ಇಲ್ಲ. ಮೇಲಿನ ಝೆನ್‌ ಕಥೆ ಇದನ್ನೇ ಹೇಳುತ್ತಿದೆ.

ನಿಜವನ್ನು ತಿಳಿಯುವುದಕ್ಕೆ ಇರುವ ಒಂದೇ ಒಂದು ಮಾರ್ಗ ಎಂದರೆ ಈಗ ಇರುವುದನ್ನು ಅನುಭವಿಸುವುದು. ಅದು ಬದುಕು. ಅರ್ಥಾತ್‌ ಈಗ ನಾವು ಮಾಡಬೇಕಾಗಿರುವುದು ಎಂದರೆ ನಮ್ಮ ಕೈಯಲ್ಲಿರುವ ಜೀವನವನ್ನು ಪೂರ್ಣವಾಗಿ ಅನುಭವಿಸುವುದು, ಅರ್ಥ ಮಾಡಿಕೊಳ್ಳುವುದು.

Advertisement

Udayavani is now on Telegram. Click here to join our channel and stay updated with the latest news.

Next