ಆಲಂಕಾರು: ಕೊಬಲ ಗ್ರಾಮದ ಏಣಿತ್ತಡ್ಕದಲ್ಲಿ ಕುಮಾರಧಾರ ನದಿಯಲ್ಲಿ ತೆಪ್ಪ ಮಗುಚಿ ಮಹಿಳೆಯೋರ್ವರು ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ.
ಏಣಿತ್ತಡ್ಕ ನಿವಾಸಿ ಬಾಳಪ್ಪ ನಾಯ್ಕ ಅವರ ಪತ್ನಿ ಗೀತಾ (46) ಮೃತಪಟ್ಟ ಮಹಿಳೆ. ದನದ ಮೇವು ಸಂಗ್ರಹಿಸಿಕೊಂಡು ಕುಮಾರಧಾರ ಹೊಳೆಯನ್ನು ತೆಪ್ಪದ ಮೂಲಕ ದಾಟುತ್ತಿದ್ದಾಗ ಘಟನೆ ನಡೆದಿದೆ. ಜತೆಗಿದ್ದ ಇನ್ನಿಬ್ಬರು ಮಹಿಳೆಯರು ಈಜಿ ದಡ ಸೇರಿದ್ದಾರೆ.
ಏಣಿತ್ತಡ್ಕ ನಿವಾಸಿಗಳಾದ ಗೀತಾ, ಸುನಂದ, ವಿದ್ಯಾ ಅವರು ಜತೆಯಾಗಿ ಕುಮಾರಧಾರ ನದಿಯ ಏಣಿತ್ತಡ್ಕದ ಇನ್ನೊಂದು ಮಗ್ಗುಲ್ಲಲಿರುವ ಅರೆಲ್ತಡ್ಕ ಎಂಬಲ್ಲಿಗೆ ತೆಪ್ಪದ ಮೂಲಕ ತೆರಳಿ ದನದ ಮೇವು ಸಂಗ್ರಹಿಸಿ ಗೋಣಿ ಚೀಲದಲ್ಲಿ ತುಂಬಿಸಿಕೊಂಡು ವಾಪಸ್ಸಾಗುತ್ತಿದ್ದರು. ತೆಪ್ಪ ನದಿ ಮದ್ಯಕ್ಕೆ ಬರುತ್ತಿದ್ದಂತೆ ಜೋರಾದ ಗಾಳಿಬೀಸಿ ತೆಪ್ಪ ಮಗುಚಿ ಬಿದ್ದಿದೆ. ಈ ಸಂದರ್ಭ ನೀರಿಗೆ ಬಿದ್ದ ಹುಲ್ಲಿನ ಮೂಟೆಗಳನ್ನು ಹಿಡಿದುಕೊಂಡು ಈಜಿದ ಸುನಂದ ಮತ್ತು ವಿದ್ಯಾ ದಡ ಸೇರಿದ್ದಾರೆ. ಆದರೆ ಗೀತಾ ಅವರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ವಿಷಯ ತಿಳಿದ ಸ್ಥಳೀಯರಾದ ನವೀನ, ರಾಮಕೃಷ್ಣ, ಸುಂದರ ಚೆಕ್ಕಿತ್ತಡ್ಕ, ನೇತ್ರಾಕ್ಷ ಕೂಡಲೇ ನದಿಗಿಳಿದು ಹುಡಿಕಿದರೂ ಅವರು ಅದಾಗಲೇ ಕೊನೆಯುಸಿರೆಳೆದಿದ್ದರು. ಮೃತರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಸ್ಥಳಕ್ಕೆ ಕಡಬ ಠಾಣಾ ಎಸ್ ಐ ಶಿವರಾಮ, ಕಾನ್ಸ್ ಸ್ಟೇಬಲ್ ಚಂದನ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತರ ಪತಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಡಿಕೇರಿ ಕಾಫಿ ತೋಟದೊಳಗೆ ಗೋವುಗಳ ಕಳೇಬರ ಪತ್ತೆ: ಠಾಣೆಯಲ್ಲಿ ಪ್ರಕರಣ ದಾಖಲು