Advertisement

ಕೃಷಿ-ಮೌಲ್ಯವರ್ಧನೆಗೆ ನಬಾರ್ಡ್‌ ನೆರವು ವೃದ್ಧಿ: ನಬಾರ್ಡ್‌ ಚೇರ್ಮೆನ್‌ ಜಿ.ಆರ್‌. ಚಿಂತಾಲ

11:11 AM Jun 21, 2022 | Team Udayavani |

ಹುಬ್ಬಳ್ಳಿ: ಸಮಗ್ರ ಕೃಷಿ, ಗ್ರಾಮೀಣ ಹಾಗೂ ಸ್ತ್ರೀಶಕ್ತಿ ಗುಂಪುಗಳು ತಯಾರಿಸುವ ವಿವಿಧ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ದೇಶಪಾಂಡೆ ಫೌಂಡೇಶನ್‌ ಸೇರಿದಂತೆ ವಿವಿಧ ಸ್ವಯಂಸೇವಾ ಸಂಸ್ಥೆಗಳ ಮೂಲಕ ಅಗತ್ಯ ನೆರವು ನೀಡುವ ಕಾರ್ಯವನ್ನು ನಬಾರ್ಡ್‌ ಮಾಡುತ್ತಿದೆ. ಇದನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ನಬಾರ್ಡ್‌ ಚೇರ್ಮೆನ್‌ ಜಿ.ಆರ್‌. ಚಿಂತಾಲ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ಸ್ಥಿತಿಯಲ್ಲಿ ರೈತರು ಸಮಗ್ರ ಕೃಷಿಗೆ ಮುಂದಾಗಬೇಕು. ಬೆಳೆ ಪದ್ಧತಿ ಬದಲಾಯಿಸಿಕೊಳ್ಳಬೇಕು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೂ ಮುಂದಾಗಬೇಕು. ಗ್ರಾಮೀಣದಲ್ಲಿ ಅಭಿವೃದ್ಧಿಗೆ ಸ್ನೇಹಮಯ ವಾತಾವರಣ ಹಾಗೂ ಕರಕುಶಲಕರ್ಮಿಗಳು ಅದರಲ್ಲೂ ಸ್ತ್ರೀ ಗುಂಪುಗಳಿಗೆ ಅಗತ್ಯ ನೆರವು, ಮಾರುಕಟ್ಟೆ ಸೌಲಭ್ಯಕ್ಕೆ ಎಲ್ಲ ರೀತಿಯ ಸಹಾಯ ಮಾಡಲಾಗುವುದು ಎಂದರು.

ನಬಾರ್ಡ್‌ ನೆರವಿನೊಂದಿಗೆ ದೇಶಪಾಂಡೆ ಫೌಂಡೇಶನ್‌ ನವಲಗುಂದ ಇನ್ನಿತರ ಕಡೆ ಕೈಗೊಂಡಿರುವ ಕೃಷಿಹೊಂಡಗಳ ನಿರ್ಮಾಣದಿಂದ ರೈತರ ಕೃಷಿ ಉತ್ಪನ್ನ ಹಾಗೂ ವರಮಾನದಲ್ಲಿ ಹೆಚ್ಚಳವಾಗಿದೆ. ಕೃಷಿ ಹೊಂಡಗಳ ಪ್ರಯೋಜನ ಹಾಗೂ ಸಾಧನೆ ಕೇವಲ ಉತ್ತರ ಕರ್ನಾಟಕಕ್ಕಷ್ಟೇ ಅಲ್ಲ ದೇಶದಲ್ಲೇ ಮಹತ್ವದ ಸಾಧನೆ. ನವಲಗುಂದದಲ್ಲಿ ದೇಶಪಾಂಡೆ ಫೌಂಡೇಶನ್‌ ಪ್ರಾಯೋಜಿತ ಕಲ್ಮೇಶ್ವರ ರೈತ ಉತ್ಪಾದಕ ಕಂಪೆನಿ(ಎಫ್‌ಪಿಒ) ಸುಮಾರು 15.7 ಕೋಟಿ ರೂ. ವಹಿವಾಟು ನಡೆಸಿದ್ದು ನೋಡಿದರೆ ಖುಷಿಯಾಗುತ್ತಿದೆ. ಈ ಭಾಗದಲ್ಲಿ ಆಹಾರ ಪದಾರ್ಥಗಳು ಸೇರಿದಂತೆ ವಿಶ್ವದರ್ಜೆ ವಿವಿಧ ಉತ್ಪನ್ನಗಳು ತಯಾರಾಗುತ್ತಿದ್ದು ಅವುಗಳಿಗೆ ಮಾರುಕಟ್ಟೆ ದೊರೆಯಬೇಕಾಗಿದೆ. ಫೌಂಡೇಶನ್‌ ಜತೆ ಸೇರಿ ರೈತರು, ಗ್ರಾಮೀಣ ಜನರಿಗೆ ಅಗತ್ಯ ಮಾರುಕಟ್ಟೆ ಸೌಲಭ್ಯ ಹಾಗೂ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಕೊಲ್ಲಾಪುರ ಚಪ್ಪಲಿ ತಯಾರಿಕೆಯಲ್ಲಿ ತೊಡಗಿದವರು ಅಂದಾಜು 70 ಲಕ್ಷ ರೂ. ವಹಿವಾಟು ನಡೆಸಿದ್ದು ನೋಡಿದರೆ ಈ ಭಾಗದಲ್ಲಿ ಇನ್ನಷ್ಟು ಉತ್ಪನ್ನಗಳ ಸಾಧನೆಗೆ ಅವಕಾಶ ಇದೆ ಎಂದೆನಿಸುತ್ತಿದೆ. ನಬಾರ್ಡ್‌ ಚೇರ¾ನ್‌ ಆದ ನಂತರ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವೆ ಎಂದರು.

ದೇಶದಲ್ಲಿ ಸುಮಾರು 14 ಕೋಟಿ ರೈತರಿದ್ದು, ಇದರಲ್ಲಿ 12 ಕೋಟಿ ರೈತರು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ. 2000ನೇ ಇಸ್ವಿಯಲ್ಲಿ ಶೇ.35 ರೈತರು ಬ್ಯಾಂಕ್‌, ಸಹಕಾರಿ ಆರ್ಥಿಕ ಸಂಸ್ಥೆಗಳಿಂದ ಸಾಲ ಪಡೆದರೆ, ಇದೀಗ ಅದರ ಪ್ರಮಾಣ ಶೇ.80ಕ್ಕೆ ಹೆಚ್ಚಳವಾಗಿದೆ. ಇನ್ನಷ್ಟು ಸಣ್ಣ-ಅತಿಸಣ್ಣ ರೈತರಿಗೆ ಸಾಲ ದೊರೆಯದಿರಬಹುದು. ಎಲ್ಲರಿಗೂ ಸಾಲ ದೊರಕಿಸುವ ನಿಟ್ಟಿನಲ್ಲಿ ಯತ್ನಗಳು ನಡೆದಿವೆ. ನವೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ನಬಾರ್ಡ್‌ ಮೂಲಸೌಕರ್ಯ ಸೇರಿದಂತೆ ವಿವಿಧ ರೀತಿಯ ನೆರವು ನೀಡುತ್ತಿದ್ದು, ದೇಶದಲ್ಲಿ ಸುಮಾರು 10 ವೆಂಚರ್‌ಗಳ ಮೂಲಕ ಹಣ ನೀಡುತ್ತಿದೆ ಎಂದರು.

Advertisement

ನಬಾರ್ಡ್‌ ರಾಜ್ಯ ಮುಖ್ಯ ಪ್ರಧಾನ ವ್ಯವಸ್ಥಾಪಕ ರಮೇಶ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ದೇಶಪಾಂಡೆ ಫೌಂಡೇಶನ್‌ ಜತೆ ನಬಾರ್ಡ್‌ ಹಲವು ಸೌಲಭ್ಯಗಳ ನೀಡಿಕೆ ಕಾರ್ಯದಲ್ಲಿ ಪಾಲು ಪಡೆದುಕೊಂಡಿದೆ. ನವಲಗುಂದದ ಕಲ್ಮೇಶ್ವರ ರೈತ ಉತ್ಪಾದಕ ಕಂಪೆನಿ 15.7 ಕೋಟಿ ರೂ.ನಷ್ಟು ವಹಿವಾಟು ನಡೆಸಿದ್ದು, ಮುಂದಿನ ವರ್ಷ 30 ಕೋಟಿ ರೂ. , ಮುಂದಿನ ಐದು ವರ್ಷಗಳಲ್ಲಿ ಅಂದಾಜು 500 ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಿರುವುದು ಇತರೆ ಎಫ್‌ಪಿಒಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

ದೇಶಪಾಂಡೆ ಫೌಂಡೇಶನ್‌ ಸಹ ಸಂಸ್ಥಾಪಕಿ ಜಯಶ್ರೀ ದೇಶಪಾಂಡೆ, ಸಿಇಒ ವಿವೇಕ ಪವಾರ ಇನ್ನಿತರರಿದ್ದರು.

ಇದಕ್ಕೂ ಮೊದಲು ನಬಾರ್ಡ್‌ ಚೇರ¾ನ್‌ ನವಲಗುಂದ ಇನ್ನಿತರ ಕಡೆ ಭೇಟಿ ನೀಡಿ ಕೃಷಿಹೊಂಡ ಸೇರಿದಂತೆ ದೇಶಪಾಂಡೆ ಫೌಂಡೇಶನ್‌ ಕೈಗೊಂಡ ಕಾರ್ಯಗಳನ್ನು ವೀಕ್ಷಿಸಿದರು. ಹುಬ್ಬಳ್ಳಿಯಲ್ಲಿ ಫೌಂಡೇಶನ್‌ ನೆರವಿನ ಅಥೆಂಟಿಕ್‌ ಕರ್ನಾಟಕ ಮಳಿಗೆ (ಗ್ರಾಮೀಣ ಮಾರ್ಟ್‌)ಗೆ ಭೇಟಿ ನೀಡಿದರು. ದೇಶಪಾಂಡೆ ಫೌಂಡೇಶನ್‌ನ ಕೌಶಲಾಭಿವೃದ್ದಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ದೇಶಪಾಂಡೆ ಫೌಂಡೇಶನ್‌ ನಾಯಕತ್ವ ತಂಡದೊಂದಿಗೆ ಸಭೆ ನಡೆಸಿದರು.

ಕ್ಷುಲ್ಲಕ ವಿಚಾರಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ

ದೇಶಪಾಂಡೆ ಫೌಂಡೇಶನ್‌ ಸಂಸ್ಥಾಪಕ ಡಾ| ಗುರುರಾಜ ದೇಶಪಾಂಡೆ ಮಾತನಾಡಿ, ಗ್ರಾಮೀಣಾಭಿವೃದ್ಧಿ, ಕೃಷಿ, ಸಣ್ಣ ಉದ್ಯಮ, ನವೋದ್ಯಮ, ಕೌಶಲಾಭಿವೃದ್ದಿ ಇನ್ನಿತರ ಕ್ಷೇತ್ರಗಳ ಸುಧಾರಣೆ, ಸೌಲಭ್ಯಕ್ಕೆ ನಬಾರ್ಡ್‌ ನೆರವು ನೀಡುತ್ತಿದೆ. ನಬಾರ್ಡ್‌ ನೆರವಿನೊಂದಿಗೆ ದೇಶಪಾಂಡೆ ಫೌಂಡೇಶನ್‌ ನವಲಗುಂದ ಇನ್ನಿತರ ಕಡೆ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿದೆ. ಆದರೆ, ಬೇರೆಯವರು ಇದನ್ನು ನಾವೇ ನಿರ್ಮಾಣ ಮಾಡಿದ್ದೇವೆ ಎಂದರೆ ಅದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಒಟ್ಟಿನಲ್ಲಿ ರೈತರು, ಗ್ರಾಮೀಣ ಜನರಿಗೆ ಪ್ರಯೋಜನವಾಗಲಿ ಎಂಬುದಷ್ಟೇ ನಮ್ಮ ಬಯಕೆ. ಇಂತಹ ಸಣ್ಣ ವಿಚಾರಗಳಿಗೆ ಗಮನ ನೀಡುವ ಬದಲು ಮಾಡಬೇಕಾದ ಕಾರ್ಯಗಳು ಸಾಕಷ್ಟು ಇವೆ. ಆ ನಿಟ್ಟಿನಲ್ಲಿ ನಾವು ಸಾಗಿದ್ದೇವೆ ಎಂದರು.

ನಬಾರ್ಡ್‌ ರಾಜ್ಯಕ್ಕೆ 2021-22ನೇ ಸಾಲಿನಲ್ಲಿ ಅಂದಾಜು 24 ಸಾವಿರ ಕೋಟಿ ರೂ. ಸಾಲ ಸೌಲಭ್ಯ ನೀಡಿದೆ. ಇದರಲ್ಲಿ ಅಂದಾಜು 15 ಸಾವಿರ ಕೋಟಿ ರೂ. ಬೆಳೆ ಸಾಲ ಉದ್ದೇಶದ್ದಾಗಿದ್ದು, 8,067 ಕೋಟಿ ರೂ. ದೀರ್ಘಾವಧಿ ಯೋಜನೆಯ ಬಳಕೆಯದ್ದಾಗಿದೆ. 21,700 ಕೋಟಿ ರೂ. ಸಾಲದ ನೆರವಿನ ಗುರಿ ಹೊಂದಲಾಗಿತ್ತಾದರೂ, 23099 ಕೋಟಿ ರೂ. ನೀಡಲಾಗಿದೆ. ಗ್ರಾಮೀಣದಲ್ಲಿ ಮೂಲಸೌಕರ್ಯಕ್ಕಾಗಿ 2,000 ಕೋಟಿ ರೂ. ಗುರಿ ಇತ್ತಾದರೂ, 2,084 ಕೋಟಿ ರೂ. ನೀಡಲಾಗಿದೆ. ಇದರಲ್ಲಿ 1,354 ಕೋಟಿ ರೂ. ಕಳೆದ ವರ್ಷ ಬಿಡುಗಡೆ ಮಾಡಲಾಗಿದೆ. –ರಮೇಶ, ನಬಾರ್ಡ್‌ ರಾಜ್ಯ ಮುಖ್ಯ ಪ್ರಧಾನ ವ್ಯವಸ್ಥಾಪಕ

 

Advertisement

Udayavani is now on Telegram. Click here to join our channel and stay updated with the latest news.

Next