Advertisement

ಕಲ್ಲಂಗಡಿ ಹಣ್ಣಿನಿಂದ ಸೌಂದರ್ಯ ವರ್ಧನೆ

03:45 AM Mar 31, 2017 | |

ಇನ್ನೇನು ಬಿಸಿಲಿನ ಬೇಗೆ ಹೆಚ್ಚುತ್ತಿದೆ. ಬೇಸಿಗೆ ಬರುತ್ತಿದ್ದಂತೆ ದೇಹಕ್ಕೆ ಆಯಾಸ ಮಾತ್ರವಲ್ಲದೆ ಕೂದಲಿಗೆ ಹಾಗೂ ಚರ್ಮಕ್ಕೂ ತನ್ನದೇ ಆದ ವ್ಯತ್ಯಯ ಉಂಟಾಗುತ್ತವೆ. ಬೇಸಿಗೆಯಲ್ಲಿ ಎಲ್ಲೆಡೆಯಲ್ಲಿ ಸಮೃದ್ಧವಾಗಿ ಸಿಗುವ ಕಲ್ಲಂಗಡಿ ಹಣ್ಣು ಈ ಸಮಯದಲ್ಲಿ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯವರ್ಧನೆಗೂ ಹಿತಕರ.

Advertisement

ಕಲ್ಲಂಗಡಿ ಹಣ್ಣಿನ ವಿವಿಧ ಸೌಂದರ್ಯಪ್ರಸಾಧಕಗಳ ಸೌಂದರ್ಯ ರಕ್ಷಕಗಳ ತಯಾರಿಯೂ ಸುಲಭ. ಅಂತಹವುಗಳ ಕುರಿತಾಗಿ ಇಲ್ಲಿ ಉಲ್ಲೇಖೀಸಲಾಗಿದೆ.

ಕಲ್ಲಂಗಡಿ ಹಣ್ಣಿನ ಟೋನರ್‌
ಬೆವರಿನಿಂದ ಬಸವಳಿದ ಚರ್ಮಕ್ಕೆ ತಾಜಾತನ ಹಾಗೂ ಕಾಂತಿವರ್ಧಿಸಲು ಇದು ಉಪಯುಕ್ತ.
ವಿಧಾನ: 10 ಚಮಚ ಕಲ್ಲಂಗಡಿ ಹಣ್ಣಿನ ರಸ, 2 ಚಮಚ ಕಿತ್ತಳೆ ರಸ, 2 ಚಮಚ ಜೇನು ಇವೆಲ್ಲವನ್ನೂ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಹತ್ತಿಯ ಉಂಡೆಯಲ್ಲಿ ಅದ್ದಿ ಮುಖಕ್ಕೆ ವರ್ತುಲಾಕಾರವಾಗಿ ಮಾಲೀಶು ಮಾಡಬೇಕು. 20 ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯಬೇಕು. ಹೀಗೆ ಎರಡು ದಿನಕ್ಕೊಮ್ಮೆ ಅಥವಾ ನಿತ್ಯ ಲೇಪಿಸಿದರೆ ಪರಿಣಾಮಕಾರಿ.

ಕಲ್ಲಂಗಡಿ ಹಣ್ಣು ಹಾಗೂ ಗುಲಾಬಿಜಲದ ಐಸ್‌ಟೋನರ್‌
ಇದು ಎಲ್ಲಾ ಬಗೆಯ ಚರ್ಮದವರಿಗೂ ಸೂಕ್ತ. ಐಸ್‌ಟ್ರೇಯಲ್ಲಿ ಕಲ್ಲಂಗಡಿರಸ ಮತ್ತು ಗುಲಾಬಿ ಜಲ ಬೆರೆಸಿ ಫ್ರಿಜ್‌ನಲ್ಲಿಡಬೇಕು. ಐಸ್‌ನಂತೆ ಗಟ್ಟಿಯಾದ ನಂತರ ಮುಖವನ್ನು ತೊಳೆದ ಬಳಿಕ ಈ ಕಲ್ಲಂಗಡಿ ಐಸ್‌ ಟೋನರ್‌ನಿಂದ ಮುಖವನ್ನು ಮೃದುವಾಗಿ ಮಾಲೀಶು ಮಾಡಿದರೆ ಮುಖ ಶುಭ್ರ ಹಾಗೂ ತಾಜಾ ಆಗಿ ಕಾಂತಿಯುತವಾಗುತ್ತದೆ.

ನೆರಿಗೆ ನಿವಾರಕ ಕಲ್ಲಂಗಡಿ ಹಣ್ಣಿನ ಫೇಸ್‌ಪ್ಯಾಕ್‌
15 ಚಮಚ ಕಲ್ಲಂಗಡಿ ಹಣ್ಣಿನ ರಸಕ್ಕೆ 5 ಚಮಚ ಬೆಣ್ಣೆಹಣ್ಣು (ಅವಾಕಾಡೊ) ಹಣ್ಣಿನ ತಿರುಳನ್ನು ಬೆರೆಸಿ ಚೆನ್ನಾಗಿ ಕಲಕಿ ಪೇಸ್ಟ್‌ ತಯಾರಿಸಬೇಕು. ಇದನ್ನು ಮುಖಕ್ಕೆ ಹಾಗೂ ಕತ್ತಿಗೆ ಲೇಪಿಸಿ ಮಾಲೀಶು ಮಾಡಿ 20 ನಿಮಿಷಗಳ ಬಳಿಕ ತೊಳೆದರೆ ಒಣ ಚರ್ಮ, ನೆರಿಯುಕ್ತ ಚರ್ಮ ಸ್ನಿಗ್ಧವಾಗಿ ಮೃದುವಾಗುತ್ತದೆ. ಇದರ ನಿತ್ಯ ಲೇಪನವು ಒಂದು ಉತ್ತಮ ವಯೋನಿರೋಧಕ (ಆ್ಯಂಟಿ ಏಜಿಂಗ್‌) ಪರಿಣಾಮ ಬೀರುತ್ತದೆ.

Advertisement

ಕಲ್ಲಂಗಡಿ ಹಣ್ಣಿನ ಮೊಡವೆ ನಿವಾರಕ ಲೇಪ
ಬೇಸಿಗೆಯಲ್ಲೂ ಮೊಡವೆ, ಗುಳ್ಳೆಗಳು ಬೆವರಿನೊಂದಿಗೆ ಅಧಿಕವಾಗಿ ಕಂಡುಬರುತ್ತವೆ.20 ಚಮಚ ಕಲ್ಲಂಗಡಿ ಹಣ್ಣಿನ ರಸಕ್ಕೆ 5 ಚಮಚ ಬಾಳೆಹಣ್ಣಿನ ಪೇಸ್ಟ್‌ ಬೆರೆಸಿ ಮೊಡವೆ, ಕಲೆ, ಗುಳ್ಳೆಗಳು ಇರುವ ಭಾಗಕ್ಕೆ ನಿತ್ಯ ಲೇಪಿಸಿ 15 ನಿಮಿಷಗಳ ಬಳಿಕ ತೊಳೆದರೆ ಶೀಘ್ರ ಶಮನಕಾರಿ.

ಒರಟು ಒಣ ಚರ್ಮಕ್ಕೆ ಕಲ್ಲಂಗಡಿ ಹಣ್ಣಿನ ಲೇಪ
ಮುಖದ ಅಥವಾ ಕೈಕಾಲಿನ ಚರ್ಮ ಒರಟಾಗಿದ್ದು ಒಣಗಿರುವಾಗ 20 ಚಮಚ ಕಲ್ಲಂಗಡಿ ಹಣ್ಣಿನ ರಸ, 2 ಚಮಚ ಜೇನು, 3 ಚಮಚ ದಪ್ಪ ಮೊಸರು ಬೆರೆಸಿ ಲೇಪಿಸಿದರೆ ಚರ್ಮ ಮೃದುವಾಗುತ್ತದೆ. ಬಿರುಕುಗಳೂ ನಿವಾರಣೆಯಾಗುತ್ತವೆ.

ಬಿಸಿಲುಗಂದಿಗೆ ಕಲ್ಲಂಗಡಿ ಹಣ್ಣಿನ ಲೇಪ
ಬೇಸಿಗೆಯ ಬಿಸಿಲಲ್ಲಿ ಬಿಸಿಲುಗಂದು ಸಾಮಾನ್ಯವಾಗಿ ಉಂಟಾಗುತ್ತದೆ. ಮಾತ್ರವಲ್ಲ ಬಿಸಿಲಿನಿಂದ ಚರ್ಮವೂ ಕಪ್ಪಾಗುತ್ತದೆ.ಇವುಗಳನ್ನು ನಿವಾರಣೆ ಮಾಡಲು ಈ ಕೆಳಗಿನ ಲೇಪ ಬಹೂಪಯುಕ್ತ.

20 ಚಮಚ ಕಲ್ಲಂಗಡಿ ಹಣ್ಣಿನ ತಿರುಳಿನ ಪೇಸ್ಟ್‌ ಹಾಗೂ 10 ಚಮಚ ಎಳೆ ಸೌತೆಕಾಯಿಯ ತಿರುಳಿನ ಪೇಸ್ಟ್‌ ಇವೆರಡನ್ನೂ ಬೆರೆಸಿ ಮುಖಕ್ಕೆ ಲೇಪಿಸಿ 1/2 ಗಂಟೆಯ ಬಳಿಕ ಮುಖ ತೊಳೆದರೆ ಮುಖದ ಕಪ್ಪು ಬಣ್ಣ , ಬಿಸಿಲುಗಂದು, ಕಣ್ಣಿನ ಸುತ್ತಲಿನ ಕಪ್ಪು ವರ್ತುಲಗಳ ನಿವಾರಣೆಗೆ ಸಹಕಾರಿ.
ಮಾತ್ರವಲ್ಲ ಕಲ್ಲಂಗಡಿ ಹಣ್ಣಿನಲ್ಲಿ 93 ಪ್ರತಿಶತದಷ್ಟು ನೀರಿನಂಶವಿದ್ದು ವಿಟಮಿನ್‌ “ಸಿ’, ವಿಟಮಿನ್‌ “ಎ’, ವಿಟಮಿನ್‌ “ಬಿ’ಗಳು ಅಧಿಕವಾಗಿದ್ದು ಇವು ದೇಹದ ಆರೋಗ್ಯಕ್ಕೆ ಮಾತ್ರವಲ್ಲ ಚರ್ಮ ಹಾಗೂ ಕೂದಲ ಸೌಂದರ್ಯವರ್ಧನೆಗೂ ಹಿತಕರ. ಬೇಸಿಗೆಯಲ್ಲಿ ನಿತ್ಯ ಕಲ್ಲಂಗಡಿ ಹಣ್ಣಿನ ರಸದ ಸೇವನೆ 1-2 ಕಪ್‌ ಚರ್ಮವನ್ನು ಸುಂದರ ತಾಜಾ ಹಾಗೂ ಕಾಂತಿಯುತವಾಗಿರಿಸುತ್ತದೆ.

– ಡಾ| ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next