Advertisement
ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು (ಎಲ್‌ಕೆಜಿ/ಯುಕೆಜಿ) ಆರಂಭಿಸಿದರೆ ಅಂಗನವಾಡಿ ಕೇಂದ್ರಗಳ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಎನ್ನುವ ಆತಂಕ ಶುರುವಾಗಿದೆ. ಹೀಗಾಗಿ ಸರಕಾರ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್ ಕೆಜಿ/ಯುಕೆಜಿ ಆರಂಭಿಸಬೇಕೆನ್ನುವುದು ಕಾರ್ಯಕರ್ತೆಯರ ಒತ್ತಡವಾಗಿದೆ. ಬಹುತೇಕ ಕಾರ್ಯಕರ್ತೆಯರ ಶಿಕ್ಷಣ ಹಾಗೂ ಪೂರಕ ತರಬೇತಿ ಕೊರತೆಯಿಂದ ಇವರ ಮೂಲಕ ಸಾಧ್ಯವೇ ಎನ್ನುವ ಅಭಿಪ್ರಾಯ, ಸರಕಾರದ ಚಿಂತನೆ. ಆದರೆ ಅಂಗನವಾಡಿ ಕೇಂದ್ರಗಳನ್ನು ಉಳಿಸಿಕೊಳ್ಳಬೇಕು ಮತ್ತಷ್ಟು ಗಟ್ಟಿಗೊಳಿಸಬೇಕೆನ್ನುವ ನಿಟ್ಟಿನಲ್ಲಿ ಕುಂದಗೋಳ ತಾಲೂಕಿನ ಯರಗುಪ್ಪಿ ವಲಯದ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ರಾಜೇಶ್ವರಿ ಬಡಿಗೇರ ಅವರು ಅಂಗನವಾಡಿ ಕೇಂದ್ರಗಳಲ್ಲಿಯೇ ಮಕ್ಕಳಿಗೆ ಇಂಗ್ಲಿಷ್ ಬೋಧನೆ ದೊರೆಯಬೇಕೆನ್ನುವ ನಿಟ್ಟಿನಲ್ಲಿ ಸ್ವ ಇಚ್ಚೆಯಿಂದ ಕಾರ್ಯಾರಂಭ ಮಾಡಿದ್ದಾರೆ. ವಲಯ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಸಾಕಾರಗೊಳಿಸಲು ಮುಂದಾಗಿದ್ದಾರೆ.
Related Articles
Advertisement
ಡಾಲ್ಫಿನ್ ಕಿಟ್ ಮೂಲಕ ಬೋಧನೆ: ಅಂಗನವಾಡಿ ಮಕ್ಕಳಿಗೂ ತಾಂತ್ರಿಕವಾಗಿ ಪಾಠ ಮಾಡಬಹುದು ಎಂಬುದನ್ನು ತೋರಿಸಿದ್ದಾರೆ. ಖಾಸಗಿ ಶಾಲೆಗಳ ನರ್ಸರಿ, ಪೂರ್ವ ಪ್ರಾಥಮಿಕ ಶಾಲೆಯಲ್ಲಿರುವ ಡಾಲ್ಫಿನ್ ಕಿಟ್‌ನ್ನು ತಮ್ಮ ವಲಯ ವ್ಯಾಪ್ತಿಯ ಕೇಂದ್ರಗಳಿಗೆ ತರಿಸಬೇಕೆನ್ನುವ ಪ್ರಯತ್ನ ಈಡೇರಿದೆ. ಅಲ್ಲಾಪುರ ಗ್ರಾಮದ ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ರಡ್ಡೇರ ಅವರಿಗೆ ಡಾಲ್ಫಿನ್ ಕಿಟ್ ಪ್ರಾಮುಖ್ಯತೆ ತಿಳಿಸಿದಾಗ ದಾನಿಗಳ ನೆರವಿನಿಂದ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಖರೀದಿಸಲಾಗಿದೆ. ಈ ಕಿಟ್ ಮೂಲಕ ಅಲ್ಲಿನ ಕೇಂದ್ರದ ಕಾರ್ಯಕರ್ತೆ ಮಕ್ಕಳಿಗೆ ಪಾಠ ಆರಂಭಿಸಿದ್ದಾರೆ. ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಚಿಕ್ಕಮಕ್ಕಳಿಗೆ ಕಲಿಕೆ ನಡೆಯುತ್ತಿದ್ದು, ಈ ಕಿಟ್ ಹೊಂದಿದ ಅಂಗನವಾಡಿ ಕೇಂದ್ರಗಳ ಪೈಕಿ ಇದು ಮೊದಲ ಪ್ರಯತ್ನವಾಗಿದೆ.
10 ವರ್ಷ ಸಿಬಿಎಸ್ ಶಿಕ್ಷಣ ಬೋಧಿಸಿದ ಅನುಭವ ಇತ್ತು. ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕೆನ್ನುವ ತುಡಿತವಿತ್ತು. ಇದನ್ನು ಬಳಸಿಕೊಂಡು ಅಂಗನವಾಡಿ ಕೇಂದ್ರಗಳು ಕಾನ್ವೆಂಟ್ ಗಳಿಗಿಂತ ಕಡಿಮೆಯಿಲ್ಲ ಎನ್ನುವ ಮಟ್ಟಕ್ಕೆ ಕೊಂಡೊಯ್ಯಬೇಕು ಎನ್ನುವ ಪ್ರಯತ್ನವಿದು. ಮಕ್ಕಳಿಗೆ ಬೇಕಾದ ಶಾಲಾ ಪೂರ್ವ ಶಿಕ್ಷಣಕ್ಕೆ ಪೂರಕವಾಗಿ ನಿರಂತರವಾಗಿ ಕಲಿಕೆ ನಡೆಯುತ್ತಿದೆ. ಕಾರ್ಯಕರ್ತೆಯರು ಕಲಿಕೆಗೆ ಸಂಪೂರ್ಣ ಆಸಕ್ತಿ ತೋರುತ್ತಿರುವುದು ವಿಶೇಷ. ಈ ಕಾರ್ಯಕ್ಕೆ ಅಧಿಕಾರಿಗಳ ಪ್ರೋತ್ಸಾಹವಿದೆ.
–ರಾಜೇಶ್ವರಿ ಬಡಿಗೇರ, ಮೇಲ್ವಿಚಾರಕಿ, ಶಿಶು ಅಭಿವೃದ್ಧಿ ಯೋಜನೆ
ಆರಂಭದಲ್ಲಿ ಒಂದಿಷ್ಟು ಹಿಂಜರಿಕೆಯಿತ್ತು. ನಿರಂತರ ಕಲಿಕೆಯಿಂದ ಸುಲಭವಾಗುತ್ತಿದೆ. ಇಂಗ್ಲಿಷ್‌ನಲ್ಲಿ ಸಣ್ಣ ಪುಟ್ಟ ವಾಕ್ಯ, ಶಬ್ದಗಳನ್ನು ಬಳಸಿ ಮಕ್ಕಳೊಂದಿಗೆ ಸಂವಹನ ಆರಂಭಿಸಿದ್ದೇವೆ. ಇದಕ್ಕೆ ಮಕ್ಕಳು ಕೂಡ ಪ್ರತಿಕ್ರಿಯೆ ನೀಡುವಷ್ಟರ ಮಟ್ಟಿಗೆ ಸಹಕಾರಿಯಾಗಿದೆ. ಈ ಮೇಡಂ ಬಂದ ಮೇಲೆ ಕೇಂದ್ರಗಳಲ್ಲಿ ಬದಲಾವಣೆ ಕಾಣುತ್ತಿದ್ದೇವೆ. ನಮ್ಮಲ್ಲಿಯೂ ಕೂಡ ದಾನಿಗಳ ನೆರವಿನಿಂದ ಡಾಲ್ಫಿನ್ ಕಿಟ್ ಖರೀದಿಸುತ್ತಿದ್ದೇವೆ.
–ಮಕ್ತಂಬಿ ಲತೀಬಖಾನವರ, ಅಂಗನವಾಡಿ ಕಾರ್ಯಕರ್ತೆ, ಹಿರೇನರ್ತಿ