Advertisement

28 ಸರ್ಕಾರಿ ಶಾಲೆಯಲ್ಲೂ ಆಂಗ್ಲ ಮಾಧ್ಯಮ

09:57 AM May 29, 2019 | Suhan S |
ಬಾಗಲಕೋಟೆ: ಪ್ರಾಥಮಿಕ ಶಾಲಾ ಹಂತದಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣ ನೀಡುವ ಸರ್ಕಾರದ ಮಹತ್ವಾಕಾಂಕ್ಷಿ ತೀರ್ಮಾನಕ್ಕೆ ಜಿಲ್ಲೆಯ 28 ಸರ್ಕಾರಿ ಶಾಲೆಗಳು ಸಜ್ಜಾಗಿವೆ.

ಜಿಲ್ಲೆಯ ಏಳು ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯಲ್ಲೂ ತಲಾ ನಾಲ್ಕು ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಈ ವರ್ಷ ಪ್ರಾಯೋಗಿಕವಾಗಿ ಆಂಗ್ಲ ಮಾಧ್ಯಮ ಶಿಕ್ಷಣ ಕೊಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement

ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಮತ್ತು 1ನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಕಲಿಕೆಗೆ ಪರ-ವಿರೋಧ ಚರ್ಚೆ ನಡೆದು, ಅಂತಿಮವಾಗಿ ಸರ್ಕಾರ, ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಮತ್ತು 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಕಲಿಸಲು ಮುಂದಾಗಿದೆ. ಇದಕ್ಕೆ ಗ್ರಾಮೀಣ ಭಾಗದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕನ್ನಡ ಮಾಧ್ಯಮಕ್ಕಿಂತ ಆಂಗ್ಲ ಮಾಧ್ಯಮಕ್ಕೆ ಪ್ರವೇಶ ಬಯಸಿ, ಪಾಲಕರು ಶಾಲೆಗಳಿಗೆ ಭೇಟಿ ನೀಡುತ್ತಿದ್ದಾರೆ.

ಎಲ್ಲ ಕಡೆಯೂ ಎಲ್ಕೆಜಿ ಇಲ್ಲ:

ಜಿಲ್ಲೆಯ 28 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಕಲಿಕೆಗೆ ಗುರುತಿಸಲಾಗಿದ್ದು, ಇದು ಪ್ರಾಯೋಗಿಕವಾಗಿದೆ. ಮುಂದಿನ ವರ್ಷದಿಂದ ಇನ್ನೂ ಹೆಚ್ಚಿನ ಶಾಲೆಗಳನ್ನು ಈ ನಿರ್ಧಾರದಡಿ ಸೇರಿಸುವ ಸಾಧ್ಯತೆ ಇದೆ. ಈ ಬಾರಿ ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಮಾತ್ರ ಎಲ್ಕೆಜಿ ಮತ್ತು 1ನೇ ತರಗತಿಯ ಆಂಗ್ಲ ಮಾಧ್ಯಮ ಆರಂಭಗೊಳ್ಳಲಿವೆ. ಕೆಪಿಎಸ್‌ ಶಾಲೆಗಳು ಹೊರತುಪಡಿಸಿ, ಉಳಿದ ಶಾಲೆಗಳಲ್ಲಿ ಕೇವಲ 1ನೇ ತರಗತಿಯ ಆಂಗ್ಲ ಮಾಧ್ಯಮ ಆರಂಭಿಸಲಾಗುತ್ತಿದೆ. ಇದು ಸರ್ಕಾರದ ನಿರ್ಧಾರ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬಾದಾಮಿ ತಾಲೂಕು ಮುಷ್ಟಿಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಗಲಕೋಟೆ ತಾಲೂಕು ಮುಗಳೊಳ್ಳಿಯ ಸರ್ಕಾರಿ ಕೆಬಿಎಸ್‌ಎಚ್ಪಿಎಸ್‌, ಬೀಳಗಿಯ ಸರ್ಕಾರಿ ಉರ್ದು ಬಾಲಕರ ಹಿರಿಯ ಪ್ರಾಥಮಿಕ ಶಾಲೆ, ಹುನಗುಂದ ತಾಲೂಕು ಧನ್ನೂರಿನ ಕನ್ನಡ ಬಾಲಕರ ಮಾದರಿ ಪ್ರಾಥಮಿಕ ಶಾಲೆ, ಜಮಖಂಡಿ ತಾಲೂಕಿನ ಮೈಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಧೋಳ ತಾಲೂಕಿನ ಯಡಹಳ್ಳಿಯ ಎಸ್‌.ಬಿ. ಹೊರಟ್ಟಿ ಮಾದರಿ ಪ್ರಾಥಮಿಕ ಶಾಲೆ, ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಕರ್ನಾಟಕ ಪಬ್ಲಿಕ್‌ ಸ್ಕೂಲ್ ಆಗಿ ಪರಿವರ್ತನೆಗೊಳಿಸಿದ್ದು, ಇಲ್ಲಿ ಪ್ರಾಥಮಿಕ, ಪ್ರೌಢ, ಪಿಯುಸಿ ಶಿಕ್ಷಣ ಒಂದೇ ಕ್ಯಾಂಪಸ್‌ನಲ್ಲಿ ನಡೆಯುತ್ತಿವೆ. ಇದೀಗ ಎಲ್ಕೆಜಿ, 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭಿಸಲು ಶಿಕ್ಷಣ ಇಲಾಖೆ ತಯಾರಿ ನಡೆಸಿದೆ.

Advertisement

20 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ:

ಜಿಲ್ಲೆಯ 8 ಕೆಪಿಎಸ್‌ ಶಾಲೆಗಳು ಹೊರತುಪಡಿಸಿ, ಉಳಿದ 20 ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ 1ನೇ ತರಗತಿ ಆರಂಭಗೊಳ್ಳಲಿವೆ. ಮೇ 29ರಿಂದ ಶಾಲಾ ಪ್ರಾರಂಭೋತ್ಸವದ ಜತೆಗೆ ಆಂಗ್ಲ ಮಾಧ್ಯಮದ 1ನೇ ತರಗತಿಗೆ ಪ್ರವೇಶ ಪಡೆಯಲಾಗುತ್ತಿದೆ. ಈ 20 ಶಾಲೆಗಳಲ್ಲಿ ಎಲ್ಕೆಜಿ ನಡೆಸಲು ಅವಕಾಶ ಕಲ್ಪಿಸಿಲ್ಲ.

ಪೂರ್ವ ತಯಾರಿ ಏನು?:

ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ ನಡೆಸುವ ಕೆಪಿಎಸ್‌ ಶಾಲೆಗಳಲ್ಲಿ ಓರ್ವ ಆಯಾ ಮತ್ತು ಓರ್ವ ಅತಿಥಿ ಶಿಕ್ಷಕರ ನೇಮಕಕ್ಕೆ ಇಲಾಖೆ ತಯಾರಿ ಮಾಡಿಕೊಂಡಿದೆ. ಆಯಾಗೆ 5 ಸಾವಿರ ಹಾಗೂ ಅತಿಥಿ ಶಿಕ್ಷಕರಿಗೆ 7,500 ರೂ. ವೇತನವನ್ನು ಸರ್ಕಾರ ನಿಗದಿಪಡಿಸಿದೆ. ಇದಕ್ಕಾಗಿ ನಿಯಮಾವಳಿ ಸಿದ್ಧಪಡಿಸಿ, ಆಯಾ ಶಾಲೆ ವ್ಯಾಪ್ತಿಯ ಸ್ಥಳೀಯರಿಗೆ ಅವಕಾಶ ಕಲ್ಪಿಸಲು ಚಿಂತನೆ ನಡೆದಿದೆ. ಈ ಪ್ರಕ್ರಿಯೆ ಜೂನ್‌ 10ರ ಒಳಗೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಎಲ್ಲೆಲ್ಲೆ ಆಂಗ್ಲ ಮಾಧ್ಯಮ ಆರಂಭ:

ಬಾದಾಮಿ ಮತಕ್ಷೇತ್ರ ಮುಷ್ಟಿಗೇರಿಯ ಕೆಪಿಎಸ್‌ ಮಾನ್ಯತೆಯ (ಕರ್ನಾಟಕ ಪಬ್ಲಿಕ್‌ ಸ್ಕೂಲ್) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಕೆಪಿಎಸ್‌), ಮುತ್ತಲಗೇರಿಯ ಹಿರಿಯ ಪ್ರಾಥಮಿಕ ಶಾಲೆ (ಆರ್‌ಎಂಎಸ್‌ಎ), ನಂದಿಕೇಶ್ವರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಬಾದಾಮಿ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ.

ಬಾಗಲಕೋಟೆ ಮತಕ್ಷೇತ್ರ:

ಕೆಪಿಎಸ್‌ ಶಾಲೆ ಮಾನ್ಯತೆ ಪಡೆದ ಮುಗಳೊಳ್ಳಿಯ ಕೆಬಿಎಚ್ಪಿಎಸ್‌ ಶಾಲೆ, ಬಾಗಲಕೋಟೆ ನವನಗರ ಸೆಕ್ಟರ್‌ ನಂ.16ರ ಹಿರಿಯ ಪ್ರಾಥಮಿಕ ಶಾಲೆ (ಆರ್‌ಎಂಎಸ್‌ಎ), ನೀಲಾನಗರ ತಾಂಡಾದ ಸರ್ಕಾರಿ ಹಿರಿಯ ಬಾಲಕ-ಬಾಲಕಿಯರ ಪ್ರಾಥಮಿಕ ಶಾಲೆ, ಬೇವಿನಮಟ್ಟಿಯ ಕೆಬಿಎಚ್ಪಿಎಸ್‌ ಶಾಲೆ.

ಬೀಳಗಿ ಮತಕ್ಷೇತ್ರ:

ಕೆಪಿಎಸ್‌ ಮಾನ್ಯತೆಯ ನೀರಬೂದಿಹಾಳದ ಮಾದರಿ ಪ್ರಾಥಮಿಕ ಶಾಲೆ, ರೊಳ್ಳಿ ಗ್ರಾಮದ ಕೆಪಿಎಸ್‌, ಹಿರಿಯ ಪ್ರಾಥಮಿಕ ಶಾಲೆ, ಬೀಳಗಿ ಪಟ್ಟಣದ ಉರ್ದು ಬಾಲಕರ ಹಿರಿಯ ಪ್ರಾಥಮಿಕ ಶಾಲೆ.

ಹುನಗುಂದ ಮತಕ್ಷೇತ್ರ:

ಧನ್ನೂರಿನ ಕೆಪಿಎಸ್‌-ಸರ್ಕಾರಿ ಕನ್ನಡ ಬಾಲಕರ ಮಾದರಿ ಪ್ರಾಥಮಿಕ ಶಾಲೆ, ಗಂಜಿಹಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೂಳೆಬಾವಿಯ ಸರ್ಕಾರಿ ಕನ್ನಡ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ, ಹುನಗುಂದ ಪಟ್ಟಣದ ವಿದ್ಯಾನಗರದ ಸರ್ಕಾರಿ ಕನ್ನಡ ಬಾಲಕರ ಹಿರಿಯ ಪ್ರಾಥಮಿಕ ಶಾಲೆ.

ಜಮಖಂಡಿ ಮತಕ್ಷೇತ್ರ:

ಮೈಗೂರಿನ ಕೆಪಿಎಸ್‌-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಂಬಗಿ ಬಿಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಂಬಾರಹಳ್ಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಆರ್‌ಎಂಎಸ್‌ಎ), ಚಿಕ್ಕಲಕಿಯ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ.

ಮುಧೋಳ ಮತಕ್ಷೇತ್ರ:

ಯಡಹಳ್ಳಿಯ ಕೆಪಿಎಸ್‌-ಸರ್ಕಾರಿ ಎಸ್‌.ಬಿ. ಹೊರಟ್ಟಿ ಮಾದರಿ ಪ್ರಾಥಮಿಕ ಶಾಲೆ, ಅಕ್ಕಿಮರಡಿಯ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಸೋರಗಾವಿಯ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಮುಧೋಳ ಸರ್ಕಾರಿ ಮಾದರಿ ಕನ್ನಡ ಬಾಲಕರ ಪ್ರಾಥಮಿಕ ಶಾಲೆ.

ತೇರದಾಳ ಮತಕ್ಷೇತ್ರ:

ನಾವಲಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, (ಕೆಪಿಎಸ್‌), ಹೊಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಬಾಲಕಿಯರ ಪ್ರೌಢ ಶಾಲೆ, ಬನಹಟ್ಟಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ.2 ಮತ್ತು ಬಾಲಕಿಯರ ಪ್ರೌಢ ಶಾಲೆ, ತೇರದಾಳ ಪಟ್ಟಣ ದೇವರಾಜ ನಗರದ ಸರ್ಕಾರಿ ಪ್ರಾಥಮಿಕ ಶಾಲೆ.

.ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next