Advertisement

ಸರಕಾರಿ ಶಾಲೆಗಳ ಆಂಗ್ಲ ಶಿಕ್ಷಣಕ್ಕೆ ಹೆಚ್ಚಿನ ದಾಖಲಾತಿ

12:20 PM Jun 11, 2019 | sudhir |

ಉಡುಪಿ: ಪ್ರಸಕ್ತ ಸಾಲಿನಲ್ಲಿ ಸರಕಾರಿ ಶಾಲೆಗಳಲ್ಲಿ ಆಂಗ್ಲ ಶಿಕ್ಷಣ ಪ್ರಾರಂಭಗೊಂಡಿದ್ದು, ಜಿಲ್ಲೆಯ ಸ.ಹಿ.ಪ್ರಾ. ಶಾಲೆಯಲ್ಲಿ ಒಂದನೇ ತರಗತಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ. ಆದರೆ ದಾಖಲಾತಿ ಕೋರಿ ಅರ್ಜಿ ಸಲ್ಲಿಸಿದ ಎಲ್ಲ ಮಕ್ಕಳಿಗೆ ಅವಕಾಶ ನೀಡಲು ಸರಕಾರದ ಆದೇಶ ತಡೆಯಾಗಿದೆ.

Advertisement

30 ಸೀಟು ಮಾತ್ರ ಅವಕಾಶ!
ರಾಜ್ಯ ಸರಕಾರ ಸ. ಆಂಗ್ಲ ತರಗತಿಯಲ್ಲಿ ಕೇವಲ 30 ವಿದ್ಯಾರ್ಥಿಗಳ ಕಲಿಕೆಗೆ ಅವಕಾಶ ನೀಡಿದೆ. 30 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕರ ಅನುಪಾತಕ್ಕೆ ಅನುಗುಣವಾಗಿ ಗರಿಷ್ಠ 30 ಮಕ್ಕಳನ್ನು ಮಾತ್ರ ದಾಖಲಿಸಬಹುದು. ಎಲ್ಲ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಶಾಲೆಗಳು ಹಿಂದೇಟು ಹಾಕುತ್ತಿವೆ.

ಶೇ. 50ರಷ್ಟು ಹೆಚ್ಚಳ
ಜಿಲ್ಲೆಯ ಸರಕಾರಿ ಆಂಗ್ಲ ತರಗತಿಗೆ ಮಕ್ಕಳ ದಾಖಲಾತಿ ಸಂಖ್ಯೆ ಶೇ. 50ರಷ್ಟು ಹೆಚ್ಚಾಗಿದೆ. 25 ವಿದ್ಯಾರ್ಥಿಗಳು ಸೇರ್ಪಡೆಯಾಗುತ್ತಿರುವ ಶಾಲೆಯಲ್ಲಿ ಇದೀಗ 60 ವಿದ್ಯಾರ್ಥಿಗಳು ಒಂದನೇ ತರಗತಿಗೆ ದಾಖಲು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಮಕ್ಕಳ ಕೊರತೆಯಿಂದ ಶಾಲೆಯನ್ನು ಮುಚ್ಚಬೇಕಾಗುತ್ತದೆ ಎನ್ನುವ ಆತಂಕದಲ್ಲಿ ಇದ್ದ ಶಿಕ್ಷಕರಿಗೆ ಮಕ್ಕಳ ಸಂಖ್ಯೆ ಏರಿಕೆಯಾಗಿರುವುದು ಸಂತೋಷ ತಂದಿದೆ.

ಶಿಕ್ಷಕರ ನೇಮಕಕ್ಕೆ ಚಿಂತನೆ
ಒಂದನೇ ತರಗತಿಗೆ 30ಕ್ಕಿಂತ ಅಧಿಕ ಅರ್ಜಿಗಳು ಬಂದಿರುವ ಸ.ಹಿ.ಪ್ರಾ. ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ವಿಭಾಗ ಪ್ರಾರಂಭಿಸುವ ಕುರಿತು ಚಿಂತನೆ ನಡೆಯುತ್ತಿದೆ. ಶಾಲೆಗಳು ಹೊಸದಾಗಿ ಶಿಕ್ಷಕರನ್ನು ನೇಮಿಸುವ ಕುರಿತು ಎಸ್‌ಡಿಎಂಸಿ ಗೆ ಪ್ರಸ್ತಾವನೆ ಸಲ್ಲಿಸಿದೆ. ಇನ್ನೂ ಕೆಲ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಕುರಿತು ಚಿಂತನೆ ಮಾಡುತ್ತಿವೆ.

ಬ್ರಹ್ಮಾವರ ವಲಯ 112 ಅರ್ಜಿ
ಬ್ರಹ್ಮಾವರ ಸ.ಹಿ.ಪ್ರಾ.ಶಾಲೆ 59, ಕೊಕ್ಕರ್ಣೆ ಸ.ಹಿ.ಪ್ರಾ.ಶಾಲೆ 20, ಕುಕ್ಕೆಹಳ್ಳಿ ಸ.ಹಿ.ಪ್ರಾ.ಶಾಲೆ 20, ಸಂತೆಕಟ್ಟೆ ಸ.ಹಿ.ಪ್ರಾ.ಶಾಲೆ 13 ಸೇರಿದಂತೆ ಬ್ರಹ್ಮಾವರ ವಲಯದಿಂದ ಆಂಗ್ಲ ಮಾಧ್ಯಮಕ್ಕೆ 112 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಕಳೆದ ವರ್ಷ ಮೇಲಿನ 4 ಶಾಲೆಗಳಲ್ಲಿ 89 ವಿದ್ಯಾರ್ಥಿಗಳು ಕನ್ನಡ ಮಾಧ್ಯಮಕ್ಕೆ ದಾಖಲಾಗಿದ್ದರು.

Advertisement

ಉಡುಪಿ, ಕಾಪು ವಲಯ 141
ರಾಜೀವ ನಗರ ಹಿ.ಪ್ರಾ. ಶಾಲೆ 20, ಪಡುಬಿದ್ರಿ ಹಿ.ಪ್ರಾ. ಶಾಲೆ-21, ವಳಕಾಡು ಹಿ.ಪ್ರಾ. ಶಾಲೆ 54, ಹಿರಿಯಡ್ಕ ಬೊಮ್ಮರಬೆಟ್ಟು ಹಿ.ಪ್ರಾ. ಶಾಲೆ 47 ವಿದ್ಯಾರ್ಥಿಗಳು ಸೇರಿದಂತೆ ಉಡುಪಿ ಹಾಗೂ ಕಾಪು ವಲಯದಿಂದ ಆಂಗ್ಲ ಮಾಧ್ಯಮಕ್ಕೆ 141 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ.

ಕುಂದಾಪುರ ವಲಯ 190
ಬೀಜಾಡಿಪದು ಹಿ.ಪ್ರಾ. ಶಾಲೆ 50, ಅಮಾಸೆಬೈಲು ಹಿ.ಪ್ರಾ. ಶಾಲೆ 30, ಕೋಟೇಶ್ವರ ಹಿ.ಪ್ರಾ. ಶಾಲೆ 30, ತೆಕ್ಕಟ್ಟೆ ಹಿ.ಪ್ರಾ.ಶಾಲೆ 30, ಬಿದ್ಕಲ್‌ಕಟ್ಟೆ ಹಿ.ಪ್ರಾ.ಶಾಲೆ 50 ಸೇರಿದಂತೆ ಸುಮಾರು 190 ವಿದ್ಯಾರ್ಥಿಗಳು ಹೊಸದಾಗಿ ಒಂದನೇ ತರಗತಿಗೆ ಪ್ರವೇಶ ಪಡೆದಿದ್ದಾರೆ.

ಶಾಲೆಯಲ್ಲಿ ಆಂಗ್ಲ ತರಗತಿ ಪ್ರಾರಂಭಿಸಿರುವುದರಿಂದ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಳವಾಗಿದೆ. ಎಲ್ಲ ಮಕ್ಕಳಿಗೂ ಆಂಗ್ಲ ಮಾಧ್ಯಮದಲ್ಲಿ ಕಲಿಕೆಗೆ ಅವಕಾಶ ನೀಡುವಂತೆ ಹೆತ್ತವರು ಒತ್ತಡ ಹಾಕುತ್ತಿದ್ದಾರೆ.
-ಮಲ್ಲಿಕಾರ್ಜುನ, ಮುಖ್ಯ ಶಿಕ್ಷಕರು, ಸ.ಹಿ.ಪ್ರಾ. ಶಾಲೆ ಬ್ರಹ್ಮಾವರ

ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಿ ಸಾವಿರಾರು ರೂ. ವ್ಯಯಿಸುವ ಶಕ್ತಿ ಎಲ್ಲ ಹೆತ್ತವರಿಗೆ ಇಲ್ಲ. ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭಿಸುತ್ತಿರುವುದು ಸಂತೋಷದ ವಿಷಯ. ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು.
-ಅನಿತಾ ಪೂಜಾರಿ, ಬ್ರಹ್ಮಾವರ

ಉಡುಪಿ -ಕಾಪು ವಲಯದಲ್ಲಿ ಆಂಗ್ಲ ತರಗತಿ ಪ್ರಾರಂಭಿಸಿದ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಏರಿಕೆಯಾಗಿದೆ. ಕೆಲವೊಂದು ಶಾಲೆಗಳು ವಿಭಾಗ ಮಾಡಿ ಶಿಕ್ಷಣ ನೀಡುವ ಕುರಿತು ಯೋಚನೆ ಮಾಡುತ್ತಿವೆ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.
-ಮಂಜುಳಾ, ಬಿಇಒ ಉಡುಪಿ, ಕಾಪು

Advertisement

Udayavani is now on Telegram. Click here to join our channel and stay updated with the latest news.

Next