ಮೈಸೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ನೀಡಬೇಕೆಂಬ ರಾಜ್ಯಸರ್ಕಾರದ ಚಿಂತನೆ ಮೂರ್ಖತನದ್ದು, ಇಂಗ್ಲಿಷ್ ಮೀಡಿಯಂ ಶಾಲೆಗಳನ್ನು ತೆರೆದು ವ್ಯಾಪಾರ ಮಾಡುತ್ತಿರುವವರ ತಾಳಕ್ಕೆ ಇವರು ಕುಣಿಯುತ್ತಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಟೀಕಿಸಿದರು.
ನಗರದ ಕುವೆಂಪುನಗರದಲ್ಲಿರುವ ತಮ್ಮ ಮನೆ ಆವರಣದಲ್ಲಿ ತನು ಮನು ಪ್ರಕಾಶನ ಹೊರತಂದಿರುವ ಹಿರಿಯ ಸಾಹಿತಿ ಡಾ.ಸಿ.ಪಿ.ಕೆ.ಸಂಯೋಜನೆ ಮಾಡಿರುವ ಕುಮಾರವ್ಯಾಸ ವಿರಚಿತ ಗದುಗಿನ ಭಾರತ ನೂತನ ಆವೃತ್ತಿ ಬಿಡುಗಡೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಜ್ಯ ಆಳುತ್ತಿರುವವರಿಗೆ, ಮೂಲತಃ ವಿದ್ಯಾಭ್ಯಾಸ ಅಂದರೇನು ಅಂಥ ಗೊತ್ತಿಲ್ಲ. ಮಕ್ಕಳಿಗೆ ಮನೆಯಲ್ಲಿರುವ ಭಾಷೆಯಲ್ಲಿ ಮೊದಲು ವಿದ್ಯೆ ಕೊಡಬೇಕು. ಆ ಮೇಲೆ ಬೇರೆ ಭಾಷೆ ಕಲಿಸಬೇಕು. ಎಲ್ಲರೂ ಮೇಷ್ಟ್ರಾಗೋಕೆ ಆಗಲ್ಲ. ಪ್ರಾಥಮಿಕ ಶಾಲೆ, ವಿಶ್ವವಿದ್ಯಾನಿಲಯಗಳಲ್ಲಿರುವ ಎಲ್ಲರಿಗೂ ಮೇಷ್ಟ್ರಾಗುವ ಯೋಗ್ಯತೆ ಇರುವುದಿಲ್ಲ. ವಿದ್ಯೆ ಸಂಪಾದನೆ ಮಾಡುವವನಿಗೆ ನಿವೃತ್ತಿ ಆದ ಮೇಲೂ ಆತ ಓದಬೇಕು. ಬರೀ ಸಂಬಳಕ್ಕಾಗಿ ಮೇಷ್ಟ್ರಾಗುವುದಲ್ಲ. ಸರ್ಕಾರ ವಿದ್ಯೆಯ ಬಗ್ಗೆ ಪ್ರೀತಿ ಇರುವಂಥವರನ್ನು ಹುಡುಕಿ ಮೇಷ್ಟ್ರು ಮಾಡಬೇಕು ಎಂದರು.
ನಂಬಿಕೆ ವಿಷಯ: ಧಾರ್ಮಿಕ ವಿಚಾರಗಳಿಗೆಲ್ಲ ನ್ಯಾಯಾಲಯದ ಮೊರೆ ಹೋಗುವುದು ಸರಿಯಲ್ಲ ಎಂದು ಭೈರಪ್ಪ ಅಭಿಪ್ರಾಯಪಟ್ಟರು. ಶಬರಿಮಲೆಯ ವಿಚಾರದಲ್ಲಿ ಮಹಿಳಾ ನ್ಯಾಯಾಧೀಶರೇ ನಂಬಿಕೆಗೆ ವಿರುದ್ಧವಾಗಿ ಮಹಿಳೆ ಶಬರಿಮಲೆ ದೇವಾಲಯ ಪ್ರವೇಶ ಮಾಡುವುದು ಸರಿಯಲ್ಲ ಎಂದು ಹೇಳಿರುವಾಗ ಇವರಿಗೆ ಏನು ಹೇಳಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ಎಲ್ಲರಿಗೂ ತೊಂದರೆ ಕೊಡುತ್ತಿದ್ದ ಮಹಿಷಾಸುರನೆಂಬ ರಾಕ್ಷಸನನ್ನು ಸೋಲಿಸಲು ಗಂಡು ದೇವತೆಗಳ ಕೈಲಾಗದಿದ್ದಾಗ ಅವರೆಲ್ಲಾ ತಮ್ಮ ಶಕ್ತಿ ಮತ್ತು ಆಯುಧವನ್ನು ಶಕ್ತಿ ದೇವತೆ ಚಾಮುಂಡೇಶ್ವರಿಗೆ ನೀಡಿ ಕಮಾಂಡರ್ ಇನ್ ಚೀಫ್ ಮಾಡಿಕೊಂಡು ಮಹಿಷಾಸುರನನ್ನು ಸಂಹರಿಸಲು ನೆರವಾದರು ಎಂಬುದು ಕಥೆ. ಹಾಗೆಂದು ಗಂಡಸರಿಗೆ ಅವಮಾನ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ಹೋಗಲಾಗುತ್ತದೆಯೇ?, ಎಷ್ಟು ದೇವಸ್ಥಾನಗಳಲ್ಲಿ ಪುರುಷ ಅರ್ಚಕರುಗಳಿದ್ದಾರೆ. ಮಹಿಳಾ ಅರ್ಚಕರೇ ಇರುವ ದೇವಸ್ಥಾನಗಳೂ ಇವೆ. ಇದು ನಂಬಿಕೆಯ ವಿಷಯ, ಎಲ್ಲದಕ್ಕೂ ನ್ಯಾಯಾಲಯದ ಮೊರೆ ಹೋಗಲಾಗುವುದಿಲ್ಲ ಎಂದರು. ಕೇರಳದಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲಿ ನೆಹರು ಕಾಲದಿಂದಲೂ ಕಮ್ಯುನಿಷ್ಟರು ತಮ್ಮ ತತ್ವ ತುರುಕುತ್ತಾ ಬಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.