Advertisement

ಆಂಗ್ಲ  ಮಾಧ್ಯಮ ಶಿಕ್ಷಣ ಕ್ರಮ, ವಿವಿಧ ಸೌಲಭ್ಯಗಳ ಒದಗಿಸುವಿಕೆ

01:00 AM Mar 22, 2019 | Harsha Rao |

ಮಲ್ಪೆ: ಒಂದೂವರೆ ಶತಮಾನಗಳ ಇತಿಹಾಸವನ್ನು ಕಂಡಿರುವ ಸರಕಾರಿ ಕೊಡವೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಕನ್ನಡದ ಜತಗೆ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸಿ, ಶಾಲೆಯನ್ನು ಉಳಿಸಿ ಬೆಳೆಸುವ ಮಹತ್ವಾಕಾಂಕ್ಷೆಯ ಯೋಜನೆ ಶಾಲಾ ಮುಖ್ಯೋಪಾಧ್ಯಾಯರ ಮಾರ್ಗದರ್ಶನ, ಶ್ರೀ ಶಂಕರನಾರಾಯಣ ಶಿಕ್ಷಣ ಪ್ರತಿಷ್ಠಾನ ಸಂಸ್ಥೆಯ ನೇತೃತ್ವದಲ್ಲಿ ಕಾರ್ಯಗತವಾಗುತ್ತಿದೆ.

Advertisement

ಆಂಗ್ಲ ಮಾಧ್ಯಮ ಶಾಲೆಗಳ ಪೈಪೋಟಿ, ಸರಕಾರಿ ಕನ್ನಡ ಶಾಲೆಗಳ ಮೇಲೆ ಜನರ ನಿರುತ್ಸಾಹದಿಂದ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 50ಕ್ಕೆ ಇಳಿಮುಖವಾದಾಗ 2 ವರ್ಷಗಳ ಹಿಂದೆ ಇಲ್ಲಿನ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ, ಶಾಲಾಭಿವೃದ್ಧಿ  ಸಮಿತಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಆಂಗ್ಲಮಾಧ್ಯಮ ತೆರೆದು ಭದ್ರ ಬುನಾದಿಯನ್ನು ಹಾಕಲಾಯಿತು. ಪ್ರಥಮ ಅವಧಿಯಲ್ಲಿ 45 ವಿದ್ಯಾರ್ಥಿಗಳು ಎಲ್‌.ಕೆ.ಜಿ. ಗೆ ಹಾಗೂ ಇತರ ತರಗತಿಗೆ 50 ವಿದ್ಯಾರ್ಥಿಗಳು ದಾಖಲಾಗಿದ್ದು, ಒಟ್ಟು 200 ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಶಾಲೆಯ ಮುಂದಿನ ಶೈಕ್ಷಣಿಕ ವರ್ಷಕ್ಕೆ 30 ವಿದ್ಯಾರ್ಥಿಗಳು ಒಂದನೇ ತರಗತಿಗೆ ದಾಖಲಾಗಿದ್ದು, ಇತರ ತರಗತಿಗಳಿಗೂ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗುವ ಸಾಧ್ಯತೆ ಇದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಸುಂದರ ಎ. ತಿಳಿಸಿದ್ದಾರೆ.  2012-13ರಿಂದಲೇ 6ಮತ್ತು 7ನೇ ತರಗತಿಗಳಿಗೆ ಆಂಗ್ಲ ಮಾಧ್ಯಮ ವಿಭಾಗ ಮಂಜೂರಾಗಿದೆ. ಇದೀಗ ಶಾಲೆಯಲ್ಲಿ 5 ಮಂದಿ ಇಲಾಖಾ ಶಿಕ್ಷಕರು, 5 ಮಂದಿ ಗೌರವ ಶಿಕ್ಷಕರು, 3 ಮಂದಿ ಅಡುಗೆ ಸಹಾಯಕರು, ವಾಹನ ಚಾಲಕ ಹಾಗೂ ಸಹಾಯಕರು ಕರ್ತವ್ಯದಲ್ಲಿದ್ದಾರೆ.

ಶಾಲಾ ವಾಹನದ ಸೌಲಭ್ಯ
ಪ್ರತಿಷ್ಠಾನದ ವತಿಯಿಂದ ರೂ. 11ಲಕ್ಷ ವೆಚ್ಚದ ಶಾಲಾ ವಾಹನವನ್ನು ಒದಗಿಸಿದ್ದು, ಮಾ. 23ರಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರು ದಿವ್ಯ ಹಸ್ತದಿಂದ ಉದ್ಘಾಟನೆಗೊಳ್ಳಲಿದೆ. ಕರ್ನಾಟಕ ಬ್ಯಾಂಕಿನ ಪ್ರಾದೇಶಿಕ ವಿಭಾಗ ಕಚೇರಿಯ ಎ.ಜಿ. ಎಂ. ಗೋಪಾಲ ಕೃಷ್ಣ ಸಾಮಗ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಶೇಷಶಯನ ಕಾರಿಂಜ, ಉಡುಪಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಉಪಸ್ಥಿತರಿರುವರು.

ಇವೆಲ್ಲ ಸೌಲಭ್ಯಗಳಿವೆ
ಶಾಲೆಯಲ್ಲಿ ಸುಸಜ್ಜಿತ ಮಿನಿ ಸಭಾಂಗಣ ಹೊರಾಂಗಣದಲ್ಲಿ ರಂಗಮಂಟಪ, ಎಲ್ಲಾ ತರಗತಿಗೂ ಧ್ವನಿವರ್ಧಕ ಜಾಲ ಮೂಲಕ ಆಯಾ ತರಗತಿಗಳಿಗೆ ಸಂಬಂಧಪಟ್ಟ ಪ್ರಕಟನೆ, ಕೇಳಿ ಕಲಿ ಬಾನುಲಿ ಪ್ರಸಾರದ ನೇರ ವ್ಯವಸ್ಥೆ, ಕಂಪ್ಯೂಟರ್‌ ತರಗತಿ, ದೂರದರ್ಶನ, ಹೂತೋಟ, ಗ್ರಂಥಾಲಯ, ಅಕ್ಷರ ದಾಸೋಹ ಕೊಠಡಿ, ಊಟದ ಹಾಲ್‌, ಶುದ್ಧª ನೀರಿನ ವ್ಯವಸ್ಥೆ, ಶೌಚಾಲಯ, ಭಾರತ ಸೇವಾದಲ, ನೈತಿಕ ಶಿಕ್ಷಣ ತರಗತಿ, ವಿವಿಧ ಸಾಂಸ್ಕೃತಿಕ ಸಾಹಿತ್ಯ ಸಂಘಗಳು, ವೈಜ್ಞಾನಿಕ ತಂತ್ರಜ್ಞಾನದ ಬಳಕೆಗಾಗಿ ಪ್ರೊಜೆಕ್ಟರ್‌ ವ್ಯವಸ್ಥೆ, ಅಂಗನವಾಡಿ ಕೇಂದ್ರಗಳಿವೆ.

Advertisement

ಆಗಲಿರುವ ಯೋಜನೆಗಳು
ಒಂದೂವರೆ  ಶತಮಾನವನ್ನು ಕಂಡ ಈ ಶಾಲೆಯಲ್ಲಿ ತೀರ ಹಳೆಯ ತರಗತಿಗಳ ಕೋಣೆಗಳ ಪುನರ್‌ ನಿರ್ಮಾಣ, ಸರಕಾರದಿಂದ ಆಂಗ್ಲ ಮಾಧ್ಯಮ ವಿಭಾಗಕ್ಕೆ ಅನುಮತಿ, ಸುಮಾರು ರೂ. 10ಲಕ್ಷ ವೆಚ್ಚದ ಹೊರಾಂಗಣ ಸಭಾಭವನ ನಿರ್ಮಾಣ, ಪ್ರತಿ ತರಗತಿಗೂ ಆಧುನಿಕ ಶೈಕ್ಷಣಿಕ ಪದ್ಧತಿಗೆ ಅನುಗುಣವಾಗಿ ಕಾರ್ಯ ಯೋಜನೆ, ಹೆಚ್ಚುವರಿ ಶಾಲಾ ವಾಹನ ಈ ಎಲ್ಲ ವ್ಯವಸ್ಥೆಗಳು ಶಂಕರ ನಾರಾಯಣ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಟಿ. ರಾಘವೇಂದ್ರ ರಾವ್‌ ಮತ್ತು 20 ಮಂದಿ ಪದಾಧಿಕಾರಿಗಳ ನೇತೃತ್ವದ ಸಮಿತಿಯಲ್ಲಿ ಹಾಗೂ ಶಾಲಾಭಿವೃದ್ಧಿ ಸಮಿತಿಯಲ್ಲಿ ಶಾಲಾ ಹಳೆವಿದ್ಯಾರ್ಥಿ ಸಂಘ, ಯುವಕ ಮಂಡಲ, ಶಾಲಾಭಿವೃದ್ಧಿ ಸಮಿತಿ, ಶಿಕ್ಷಕ ವೃಂದದ ಸಹಕಾರದಿಂದ ಯೋಜನೆಗಳು ಪೂರ್ಣಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next