Advertisement

ಇಂಗ್ಲಿಷ್‌ ಮೋಹಕ್ಕೆ ಕನ್ನಡ ತಂತ್ರಾಂಶ ಮದ್ದು

11:42 AM Jul 24, 2017 | Team Udayavani |

ಬೆಂಗಳೂರು: ಕನ್ನಡ ತಂತ್ರಾಂಶವನ್ನು ಮೊಬೈಲ್‌ನಲ್ಲಿ ಅಳವಡಿಸಿಕೊಂಡು ಹೆಚ್ಚಾಗಿ ಬಳಸಿದರೆ ಯುವಜನರಲ್ಲಿ ತನ್ನಿಂದ ತಾನೇ ಇಂಗ್ಲೀಷ್‌ ವ್ಯಾಮೋಹ ಕಡಿಮೆಯಾಗಲಿದೆ ಎಂದು ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ್‌ ಅಭಿಪ್ರಾಯಪಟ್ಟರು.

Advertisement

ಯುವಸಾಧನೆ ಸಂಸ್ಥೆ ಭಾನುವಾರ ದಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ವರ್ಲ್ಡ್ಕಲ್ಚರ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರೊ.ಜಿ.ಕೆ.ದೇವರಾಜಸ್ವಾಮಿ ಅವರ “ಕಳಚೂರಿ ಶಾಸನಗಳು’ ಮಹಾಸಂಪುಟ ಮತ್ತು ಪ್ರೊ.ಹೊ.ನ.ನೀಲಕಂಠೇಗೌಡ ಅವರ “ಅಪ್ಪ ಎಂದರೆ’ ಕವನ ಸಂಕಲನ, “ಛಂದೋಬಂಧ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

“ಕನ್ನಡದಲ್ಲಿ ಹೆಚ್ಚು ತಂತ್ರಾಂಶಗಳನ್ನು ಬಳಸಿಕೊಳ್ಳಬೇಕು. ಕಂಪ್ಯೂಟರ್‌, ಮೊಬೈಲ್‌ಗ‌ಳಲ್ಲಿ ಅತ್ಯಂತ ಸರಳವಾಗಿ ಕನ್ನಡ ಬಳಕೆಗೆ ಬರುವಂತೆ ತಂತ್ರಾಂಶ ಬಳಕೆ ಮಾಡಿಕೊಳ್ಳಬೇಕು. ಇದರಿಂದ ಯುವಜನರು ಕನ್ನಡಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವುದರಿಂದ ಇಂಗ್ಲೀಷ್‌ ಬಳಕೆ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಕನ್ನಡಿಗ ಸಾಫ್ಟ್ವೇರ್‌ ಇಂಜಿನಿಯರ್‌ಗಳು ತಂತ್ರಾಂಶ ಅಭಿವೃದ್ಧಿಗೆ ಶ್ರಮಿಸಬೇಕು,’ ಎಂದು ಸಲಹೆ ನೀಡಿದರು.

“ಜನರಲ್ಲಿ ಓದುವ ಆಸಕ್ತಿ ಕಡಿಮೆಯಾಗುತ್ತಿದ್ದು, ಭವಿಷ್ಯದಲ್ಲಿ ಇದು ಆರೋಗ್ಯಕರ ಬೆಳವಣಿಗೆಯಾಗದು. ವಿದ್ಯಾರ್ಥಿಗಳೂ ಓದುವ ಆಸಕ್ತಿಯೊಂದಿಗೆ ಅವಕಾಶ ಸಿಕ್ಕಾಗಲೆಲ್ಲಾ ಬರವಣಿಗೆಯನ್ನು ಕೂಡ ರೂಢಿಸಿಕೊಳ್ಳಬೇಕು. ಹೊ.ನ.ನೀಲಕಂಠೇಗೌಡರು ಕೇವಲ ಸಂಘಟನಾ ಸಾಮರ್ಥ್ಯ ಹೊಂದಿದ್ದಾರೆ ಎಂದು ತಿಳಿದಿದ್ದೇ.

ಆದರೆ, ಅವರು “ಛಂದೋಬಂಧ’ ಮತ್ತು “ಅಪ್ಪ’ ಕೃತಿಗಳ ಮೂಲಕ ತಮ್ಮಲ್ಲಿ ಬರಹಗಾರ ಕೂಡ ಇದ್ದಾನೆ ಎಂಬುದನ್ನು ಸಾಧಿಸಿ ತೋರಿಸಿದ್ದು, ಸಂತಸ ತಂದಿದೆ. ಪ್ರೊ.ಬಿ.ಕೆ.ದೇವರಾಜಸ್ವಾಮಿ ಅವರು ಯಾವ ವಿಶ್ವವಿದ್ಯಾಲಯಗಳು ಕೂಡ ಮಾಡದಂತಹ ಸಾಧನೆ ಮಾಡಿದ್ದು, ಸಾವಿರ ಪುಟಗಳನ್ನು ಒಳಗೊಂಡ “ಎ4′ ಅಳತೆಯ “ಕಳಚೂರಿನ ಶಾಸನಗಳು’ ಮಹಾಸಂಪುಟ ಹೊರತಂದಿರುವುದು ಶ್ಲಾಘನೀಯ ಕಾರ್ಯ,’ ಎಂದು ಪ್ರಶಂಸಿಸಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಇತಿಹಾಸ ಅಕಾದೆಮಿ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ, “ಶಾಸನ, ಸ್ಮಾರಕಗಳು, ಪರಂಪರೆ, ಸಂಸ್ಕೃತಿ ಉಳಿವಿಗೆ ಯುವ ಸಮೂಹ ಕೈಜೋಡಿಸಬೇಕು. ಇತಿಹಾಸದ ಉಪನ್ಯಾಸಕರು, ಶಾಶನ ಅಧ್ಯಯನ ಮಾಡುವುದರಿಂದ ವಿಮುಖರಾಗುತ್ತಿದ್ದಾರೆ. ಶಾಸನ ಮತ್ತು ಇತಿಹಾಸದ ಸಂಶೋಧನೆಗಳು ಸಾಮಾಜಿಕ, ರಾಜಕೀಯದ ಜತೆಗೆ ಜ್ಞಾನದ ಅಭಿವೃದ್ಧಿಗೂ ಅಗತ್ಯ ಎಂಬುದನ್ನು ಅರಿತುಕೊಳ್ಳಬೇಕು,’ ಎಂದರು.

ಸಮಾರಂಭದಲ್ಲಿ ಮೈಸೂರು ವಿವಿ ಪ್ರಸಾರಂಗ ನಿರ್ದೇಶಕ ಡಾ.ಎಂ.ಜಿ.ಮಂಜುನಾಥ್‌ “ಶಾಸನಗಳ ಮಹತ್ವ ಮತ್ತು ಇತಿಹಾಸ’ ಹಾಗೂ ಪ್ರೀಮಿಯರ್‌ ನ್ಯೂರೋ ಸೆಂಟರ್‌ನ ನರಶಸ್ತ್ರತಜ್ಞ ಡಾ.ಎಚ್‌.ಎಸ್‌.ಸುರೇಶ್‌ “ಮೆದುಳು ಮತ್ತು ನೆನಪಿನ ಶಕ್ತಿ’ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಲೇಖಕರಾದ ಪ್ರೊ.ಜಿ.ಕೆ.ದೇವರಾಜಸ್ವಾಮಿ, ಪ್ರೊ.ಹೊ.ನ.ನೀಲಕಂಠೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next