ಅಕ್ಮೇ ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ತಯಾರಾಗಿರುವ ಬಹುನಿರೀಕ್ಷಿತ “ಇಂಗ್ಲಿಷ್’ ತುಳು ಸಿನೆಮಾ ಟ್ರೈಲರ್ ಮೂಲಕ ಕೋಸ್ಟಲ್‌ವುಡ್‌ನಲ್ಲಿ ಸದ್ದುಮಾಡುತ್ತಿದೆ. ಬಿಡುಗಡೆಯ ಹೊಸ್ತಿಲಲ್ಲಿರುವ ಸಿನೆಮಾಕ್ಕೆ ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್ ಇನ್ನಷ್ಟು ನಿರೀಕ್ಷೆ ಮೂಡಿಸಿದೆ.
ತುಳು ಸಿನೆಮಾದಲ್ಲಿಯೇ ಮೊದಲ ಬಾರಿಗೆ ಅನಂತ್‌ನಾಗ್ ಅಭಿನಯಿಸಿದ ಹಿನ್ನೆಲೆಯಲ್ಲಿ ಸಿನೆಮಾ ಬಗ್ಗೆ ಕುತೂಹಲವಿದೆ. ಟ್ರೈಲರ್‌ನಲ್ಲಿಯೂ ಅವರು ಕಾಣಿಸಿಕೊಂಡಿದ್ದು, ರಿಲೀಸ್ ಕೂಡ ಅವರೇ ಮಾಡಿದ್ದಾರೆ. ನನಗೆ ತುಳು ಚಿತ್ರದಲ್ಲಿ ಮಾಡುವ ಅವಕಾಶ ಐದಾರು ಬಾರಿ ಬಂದಿತ್ತು. ಆದರೆ ಅದು ಅಷ್ಟೊಂದು ಸಮಾಧಾನಕರವಾಗಿರಲಿಲ್ಲ, ಹಾಗಾಗಿ ನಿರಾಕರಿಸಿದ್ದೆ. ಆದರೆ ಇದೀಗ ಹರೀಶ್ ಶೇರಿಗಾರ್ ನಿರ್ಮಾಣದಲ್ಲಿ ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಒಂದು ಉತ್ತಮ ಚಿತ್ರದಲ್ಲಿ ನಟಿಸುವ ಅವಕಾಶವೊಂದು ಲಭಿಸಿದ್ದು ನನ್ನ ತುಳು ಚಿತ್ರದ ಪ್ರಯಾಣ ಇಲ್ಲಿಂದಲ್ಲೇ ಆರಂಭವಾಗಲಿ ಎಂದು ಒಪ್ಪಿಕೊಂಡು ಪ್ರಾರಂಭ ಮಾಡಿದ್ದೇನೆ. ಈ ಮೂಲಕ ತುಳುಚಿತ್ರದಲ್ಲಿ ನಟಿಸುವ ನನ್ನ ಬಹುದಿನದ ಕನಸು ನನಸಾಗಿದೆ ಎಂದರು.
ನಾನು ಕರಾವಳಿಯಲ್ಲಿ ಬೆಳೆದವನು. ಹಾಗಾಗಿ ತುಳು ಮತ್ತು ಕೊಂಕಣಿ ಭಾಷೆ ಬಗ್ಗೆ ಗೊತ್ತಿರುವುದರಿಂದ ಅಷ್ಟೊಂದು ಕಷ್ಟವಾಗಲಿಲ್ಲ. ಕೊಂಕಣಿ ಭಾಷೆಯಲ್ಲಿ ಕೂಡ ಅವಕಾಶ ಸಿಕ್ಕಿದರೆ ನಟಿಸುವ ಮನಸ್ಸಿದೆ. ಇಂಗ್ಲೀಷ್ ಚಿತ್ರ ತುಂಬಾ ಉತ್ತಮವಾಗಿ ಮೂಡಿ ಬಂದಿದ್ದು, ಪ್ರತಿಯೊಬ್ಬರು ಚಿತ್ರಕ್ಕೆ ಪ್ರೋತ್ಸಾಹ ಮಾಡಬೇಕು ಎಂದು ಹೇಳಿದರು.
ಆಕ್ಮೇ ಮೂವೀಸ್ ಇಂಟರ್ ನ್ಯಾಷನಲ್ ಲಾಂಛನದಲ್ಲಿ ತಯಾರಾಗಿರುವ ದುಬೈಯ ಖ್ಯಾತ ಉದ್ಯಮಿ, ಮಾರ್ಚ್ 22, ಕನ್ನಡ ಚಲನಚಿತ್ರದ ನಿರ್ಮಾಪಕರಾದ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ “ಇಂಗ್ಲಿಷ್’ ತುಳು ಸಿನೆಮಾ 20ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಜತೆಗೆ ಬೆಂಗಳೂರು, ಪುಣೆ ಮತ್ತು ಮುಂಬೈಯಲ್ಲಿಯೂ ಸಿನೆಮಾ ತೆರೆಕಾಣಲಿದೆ.
ಇಂಗ್ಲಿಷ್ ಗೊತ್ತಿಲ್ಲದ ಒಬ್ಬ ಯುವಕ ಇಂಗ್ಲಿಷ್ ಕಲಿತಿರುವ ಯುವತಿಯನ್ನು ಪ್ರೀತಿಸುವ ಕಥೆಯನ್ನು ಹೊಂದಿದ ಸಿನೆಮಾ ಇದು. ಆಕೆಗಾಗಿ ಭಾರಿ ಪ್ರಯತ್ನಪಟ್ಟು ಇಂಗ್ಲಿಷ್ ಕಲಿಯುವುದೇ ಈ ಸಿನೆಮಾದ ಪ್ರಮುಖ ವಿಷಯ. ಪರಿಶ್ರಮದಿಂದ ಏನನ್ನೂ ಮಾಡಬಹುದು ಎಂಬ ಸಂದೇಶವನ್ನೂ ಹೊಂದಿರುವ ಈ ಸಿನೆಮಾದಲ್ಲಿ ಆ ಯುವಕನು ಇಂಗ್ಲಿಷ್ ಕಲಿಯಲು ಪಡುವ ಪಾಡು, ಆಕೆಯ ಮನ ಗೆಲ್ಲುವುದು ಮತ್ತು ಆಕೆಯ ಮನೆಯವರನ್ನೂ ಮದುವೆಗೆ ಒಪ್ಪಿಸಲು ಸಫಲವಾಗುವವರೆಗೆ ಸಾಗುವ ಕಥೆಯೇ ಸಿನೆಮಾ ಹೈಲೈಟ್ಸ್.
ದಿನೇಶ್ ಇರಾ