ಮೆಲ್ಬರ್ನ್: ದೊಡ್ಡ ಪಂದ್ಯಗಳ ಹೀರೋ, ಇಂಗ್ಲೆಂಡ್ ನ ನಂಬಿಕಸ್ಥ ಆಟಗಾರ ಬೆನ್ ಸ್ಟೋಕ್ಸ್ ಸಾಹಸದಿಂದ ಮತ್ತೊಮ್ಮೆ ಇಂಗ್ಲೆಂಡ್ ಕಪ್ ಗೆದ್ದಿದೆ. ಮೆಲ್ಬರ್ನ್ ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ ಗೆದ್ದ ಇಂಗ್ಲೆಂಡ್ ಮತ್ತೊಮ್ಮೆ ಟಿ20 ಚಾಂಪಿಯನ್ ಆಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ಥಾನ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು. ಗುರಿ ಬೆನ್ನತ್ತಿದ ಇಂಗ್ಲೆಂಡ್ 19 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು.
ಬ್ಯಾಟಿಂಗ್ ಆರಂಭಿಸಿದ ಪಾಕಿಸ್ಥಾನ ಉತ್ತಮ ಪವರ್ ಪ್ಲೇ ಪಡೆಯಲಿಲ್ಲ. ತಂಡದ ಮೊತ್ತ 29 ರನ್ ಆಗಿದ್ದಾಗ ರಿಜ್ವಾನ್ ಔಟಾದರು. ನಾಯಕ ಬಾಬರ್ ಅಜಂ 28 ಎಸೆತಗಳಲ್ಲಿ 32 ರನ್ ಗಳಿಸಿದರು. ಉಳಿದಂತೆ ಶಾನ್ ಮಸೂದ್ 38 ರನ್ ಮತ್ತು ಶಾದಾಬ್ ಖಾನ್ 20 ರನ್ ಮಾಡಿದರು.
ಸತತ ವಿಕೆಟ್ ಕಿತ್ತ ಇಂಗ್ಲೆಂಡ್ ಬೌಲರ್ ಗಳು ಪಾಕಿಸ್ಥಾನದ ರನ್ ವೇಗಕ್ಕೆ ಕಡಿವಾಣ ಹಾಕಿದರು. ಪಾಕಿಸ್ಥಾನ ಬ್ಯಾಟರ್ ಗಳು ಸಂಪೂರ್ಣ ಇನ್ನಿಂಗ್ಸ್ ನಲ್ಲಿ ಬಾರಿಸಿದ್ದು ಎರಡೇ ಸಿಕ್ಸರ್. ಬಿಗು ಬೌಲಿಂಗ್ ಮಾಡಿದ ಸ್ಯಾಮ್ ಕರ್ರನ್ ಕೇವಲ 12 ರನ್ ನೀಡಿ ಮೂರು ವಿಕೆಟ್ ಪಡೆದರೆ, ಆದಿಲ್ ರಶೀದ್, ಕ್ರಿಸ್ ಜೋರ್ಡಾನ್ ತಲಾ ಎರಡು ವಿಕೆಟ್ ಕಿತ್ತರು.
ಸುಲಭ ಗುರಿ ಚೇಸ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಅಫ್ರಿದಿ ಆರಂಭದಲ್ಲೇ ಆಘಾತ ನೀಡಿದರು. ಸೆಮಿ ಹೀರೋ ಅಲೆಕ್ಸ್ ಹೇಲ್ಸ್ ಕೇವಲ ಒಂದು ರನ್ ಗೆ ಔಟಾದರು. ಫಿಲ್ ಸಾಲ್ಟ್ ಕೂಡಾ 10 ರನ್ ಗೆ ವಿಕೆಟ್ ಒಪ್ಪಿಸಿದರು. ನಾಯಕ ಜಾಸ್ ಬಟ್ಲರ್ 17 ಎಸೆತಗಳಲ್ಲಿ 26 ರನ್ ಮಾಡಿದರು. ಹ್ಯಾರಿ ಬ್ರೂಕ್ 20 ರನ್ ಮಾಡಿದರು.
ಉತ್ತಮ ಬೌಲಿಂಗ್ ದಾಳಿ ನಡೆಸಿದ ಪಾಕಿಸ್ಥಾನವು ಒಂದು ಹಂತದಲ್ಲಿ ಗೆಲುವಿನ ಆಸೆ ಚಿಗುರಿಸಿಕೊಂಡಿತ್ತು. ಆದರೆ ಐದನೇ ವಿಕೆಟ್ ಗೆ ಜೊತೆಯಾದ ಮೊಯಿನ್ ಅಲಿ ಮತ್ತು ಬೆನ್ ಸ್ಟೋಕ್ಸ್ ತಂಡವನ್ನು ಜಯದತ್ತ ಸಾಗಿಸಿದರು. ಅದ್ಭುತ ಆಟವಾಡಿದ ಬೆನ್ ಸ್ಟೋಕ್ಸ್ 49 ಎಸೆತಗಳಿಂದ 52 ರನ್ ಗಳಿಸಿದರು. ಕೊನೆಯಲ್ಲಿ ಇಂಗ್ಲೆಂಡ್ 19 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು.
2010ರಲ್ಲಿ ಪಾಲ್ ಕಾಲಿಂಗ್ ವುಡ್ ನಾಯಕತ್ವದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿದ್ದ ಇಂಗ್ಲೆಂಡ್ ಇದೀಗ ಜೊಸ್ ಬಟ್ಲರ್ ನೇತತ್ವದಲ್ಲಿ ವಿಶ್ವಕಪ್ ಎತ್ತಿ ಹಿಡಿಯಿತು.