ಲಾರ್ಡ್ಸ್: ಬಲಿಷ್ಠ ಆಸ್ಟ್ರೇಲಿಯಾ (Australia) ವಿರುದ್ದದ ಏಕದಿನ ಸರಣಿಯ ಮೊದಲೆರಡು ಪಂದ್ಯಗಳನ್ನು ಸೋತರೂ ಆತಿಥೇಯ ಇಂಗ್ಲೆಂಡ್ (England) ಭರ್ಜರಿ ಕಮ್ ಬ್ಯಾಕ್ ಮಾಡಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್ (Lords) ನಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಹ್ಯಾರಿ ಬ್ರೂಕ್ ಪಡೆಯು 186 ರನ್ ಅಂತರದ ಭರ್ಜರಿ ಗೆಲುವು ಪಡೆದಿದೆ.
ಮಳೆಯಿಂದ 39 ಓವರ್ ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 312 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು. ಆದರೆ ಬ್ಯಾಟಿಂಗ್ ಗೆ ಪರದಾಡಿದ ಆಸ್ಟ್ರೇಲಿಯಾ ಕೇವಲ 124 ರನ್ ಗಳಿಗೆ ಆಲೌಟಾಗಿ ಸೋಲು ಕಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಗೆ ಆರಂಭಿಕ ಆಟಗಾರ ಬೆನ್ ಡಕೆಟ್ ಆಧಾರವಾದರು. ಡಕೆಟ್ 63 ರನ್ ಗಳಿಸಿದರೆ, ನಾಯಕ ಬ್ರೂಕ್ ತನ್ನ ಅತ್ಯುತ್ತಮ ಫಾರ್ಮ್ ಮುಂದುವರಿಸಿದರು. ಮೂರನೇ ಪಂದ್ಯದಲ್ಲಿ ಶತಕ ಬಾರಿಸಿದ್ದ ಬ್ರೂಕ್ ಇಲ್ಲಿ 87 ರನ್ ಗಳಿಸಿದರು. ಕೊನೆಯಲ್ಲಿ ಲಿಯಾಮ್ ಲಿವಿಂಗ್ ಸ್ಟೋನ್ ಕೇವಲ 27 ಎಸೆತಗಳಲ್ಲಿ ಭರ್ಜರಿ ಏಳು ಸಿಕ್ಸರ್ ಗಳ ನೆರವಿನಿಂದ 62 ರನ್ ಗಳಿಸಿದರು.
ಗುರಿ ಬೆನ್ನತ್ತಿದ ಆಸೀಸ್ ಗೆ ನಾಯಕ ಮಾರ್ಶ್ ಮತ್ತು ಟ್ರಾವಿಸ್ ಹೆಡ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ ಗೆ ಅವರಿಬ್ಬರು 68 ರನ್ ಗಳಿಸಿದರು. ಮಾರ್ಶ್ 28 ರನ್ ಮತ್ತು ಹೆಡ್ 34 ರನ್ ಮಾಡಿದರು. ಇವರಿಬ್ಬರು ಔಟಾಗುತ್ತಿದ್ದಂತೆ ಆಸೀಸ್ ಸತತ ವಿಕೆಟ್ ಕಳೆದುಕೊಂಡಿತು. ಕೊನೆಗೆ 24.4 ಓವರ್ ಗಳಲ್ಲಿ ಕೇವಲ 126 ರನ್ ಗಳಿಗೆ ಆಸೀಸ್ ಆಲೌಟಾಯಿತು.
ಇಂಗ್ಲೆಂಡ್ ಪರ ಮ್ಯಾಥ್ಯೂ ಪಾಟ್ಸ್ ನಾಲ್ಕು ವಿಕೆಟ್ ಕಿತ್ತರೆ, ಬ್ರ್ಯಾಡನ್ ಕಾರ್ಸ್ ಮೂರು ಮತ್ತು ಆರ್ಚರ್ ಎರಡು ವಿಕೆಟ್ ಪಡೆದರು.