ಸೌಥಂಪ್ಟನ್: ಪ್ರವಾಸಿ ಐರ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನೂ ಇಂಗ್ಲೆಂಡ್ ಗೆದ್ದುಕೊಂಡಿದೆ. ಡೇವಿಡ್ ವಿಲ್ಲೆ ಆಲ್ ರೌಂಡ್ ಆಟ, ಬೆರಿಸ್ಟೋ ಭರ್ಜರಿ ಬ್ಯಾಟಿಂಗ್ ನಿಂದ ಇಂಗ್ಲೆಂಡ್ ನಾಲ್ಕು ವಿಕೆಟ್ ಗಳಿಂದ ಗೆದ್ದು, ಸರಣಿ ವಶಪಡಿಸಿಕೊಂಡಿದೆ.
ರೋಸ್ ಬೌಲ್ ಅಂಗಳದಲ್ಲಿ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಐರ್ಲೆಂಡ್ ಗೆ ಉತ್ತರ ಆರಂಭ ಸಿಗಲಿಲ್ಲ. ಸತತ ವಿಕೆಟ್ ಕಳೆದುಕೊಂಡು ಹೋಯಿತು. 91 ರನ್ ಗೆ ಆರು ಮಂದಿ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಸೇರಿದ್ದರು. ಆದರೆ ಐರ್ಲೆಂಡ್ ಗೆ ನೆರವಾಗಿದ್ದು ಎರಡನೇ ಪಂದ್ಯವಾಡುತ್ತಿರುವ ಕ್ಯಾಂಫರ್. ಕಳೆದ ಪಂದ್ಯದಲ್ಲಿ ಅಜೇಯ ಅರ್ಧಶತಕ ಬಾರಿಸಿದ್ದ ಕ್ಯಾಂಫರ್ ಇಲ್ಲೂ 68 ರನ್ ಗಳಿಸಿದರು, ಬೌಲರ್ ಗಳಾದ ಸಿಮಿ ಸಿಂಗ್ 25 ರನ್ ಗಳಿಸಿದರೆ, ಆಂಡಿ ಮೆಕ್ ಬ್ರಿನ್ 24 ರನ್ ಗಳಿಸಿದರು.
ಅಂತಿಮವಾಗಿ ಐರ್ಲೆಂಡ್ ನಿಗಧಿತ 50 ಓವರ್ ಗಳಲ್ಲಿ 212 ರನ್ ಗಳಿಸಿತು. ಆದಿಲ್ ರಶೀದ್ ಮೂರು ವಿಕೆಟ್ ಪಡೆದರೆ, ವಿಲ್ಲೆ ಮತ್ತು ಮಹಮೂದ್ ಎರಡು ವಿಕೆಟ್ ಕಬಳಿಸಿದರು.
ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ಜೇಸನ್ ರಾಯ್ ವಿಕೆಟ್ ಮೊದಲ ಓವರ್ ನಲ್ಲಿ ಕಳೆದುಕೊಂಡಿತು. ವಿನ್ಸ್, ಬ್ಯಾಂಟನ್, ಮಾರ್ಗನ್ ಕೂಡಾ ಬೇಗನೇ ಔಟಾದರು. ಆದರೆ ಒಂದೆಡೆ ಗಟ್ಟಿಯಾಗಿ ನಿಂತ ಬೆರಿಸ್ಟೋ ಭರ್ಜರಿ 82 ರನ್ ಗಳಿಸಿದರು. ಈ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ಮೂರು ಸಾವಿರ ರನ್ ಪೂರೈಸಿದರು.
ಒಂದು ಹಂತದಲ್ಲಿ 137 ರನ್ ಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ಗೆ ನೆರವಾಗಿದ್ದು ಸ್ಯಾಮ್ ಬಿಲ್ಲಿಂಗ್ ಮತ್ತು ಡೇವಿಡ್ ವಿಲ್ಲೆ. ಕ್ರಮವಾಗಿ ಅಜೇಯ 46 ಮತ್ತು 47 ರನ್ ಗಳಿಸಿದರು. ಇಂಗ್ಲೆಂಡ್ 32.3 ಓವರ್ ನಲ್ಲಿ ಆರು ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಜಯ ಸಾಧಿಸಿತು.
ಐರ್ಲೆಂಡ್ ಪರ ಜೋಶುವಾ ಲಿಟಲ್ ಮೂರು ವಿಕೆಟ್ ಪಡೆದರೆ, ಕ್ಯಾಂಫರ್ ಎರಡು ವಿಕೆಟ್ ಕಬಳಿಸಿದರು. ಬೆರಿಸ್ಟೋ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.