ಬೆಂಗಳೂರು : ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ವಿಶ್ವ ಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದೆ.
ಇಂಗ್ಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಲಂಕನ್ನರ ಬಿಗಿ ಬೌಲಿಂಗ್ ದಾಳಿಗೆ ಸಿಲುಕಿ 33.2 ಓವರ್ ಗಳಲ್ಲಿ 156 ರನ್ ಗಳಿಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಲಂಕಾ 25.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ 8 ವಿಕೆಟ್ ಅಂತರದ ಭರ್ಜರಿ ಜಯದ ನಗೆ ಬೀರಿತು.
ಆರಂಭಿಕ ಆಟಗಾರ ಪಾತುಮ್ ನಿಸ್ಸಂಕ(77*) ಮತ್ತು ಸದೀರ ಸಮರವಿಕ್ರಮ(65*) ಆಕರ್ಷಕ ಅರ್ಧ ಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕುಸಾಲ್ ಪೆರೆರಾ 4ರನ್ , ನಾಯಕ ಕುಸಾಲ್ ಮೆಂಡಿಸ್ 11ರನ್ ಗಳಿಸಿ ಔಟಾದರು.
ಇದನ್ನೂ ಓದಿ:Cricket World Cup; ಲಂಕಾ ದಾಳಿಗೆ ಬೆದರಿದ ಇಂಗ್ಲೆಂಡ್; 156 ರನ್ ಗೆ ಆಲೌಟಾದ ಬಟ್ಲರ್ ಪಡೆ
ಹಾಲಿ ಚಾಂಪಿಯನ್ ಇಂಗ್ಲೆಂಡ್ ಈ ವಿಶ್ವಕಪ್ ನಲ್ಲಿ ನಾಲ್ಕನೇ ಸೋಲು ಅನುಭವಿಸಿದ್ದು ಸೆಮಿಫೈನಲ್ ಪ್ರವೇಶದ ಕನಸು ಬಹುತೇಕ ಅಂತ್ಯಗೊಂಡಿದೆ. ನ್ಯೂಜಿಲ್ಯಾಂಡ್ , ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ಥಾನ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿತ್ತು. ಬಾಂಗ್ಲಾದೇಶ ವಿರುದ್ಧ ಮಾತ್ರ ಜಯ ಗಳಿಸಿತ್ತು.
ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕಾ , ಪಾಕಿಸ್ಥಾನ ಮತ್ತು ಆಸ್ಟ್ರೇಲಿಯ ಎದುರಿನ ಸೋಲಿನ ಬಳಿಕ ನೆದರ್ ಲೆಂಡ್ಸ್ ವಿರುದ್ಧ ಗೆಲುವಿನ ಖಾತೆ ತೆರೆದು ವಿಶ್ವಕಪ್ ನಲ್ಲಿ ಎರಡನೇ ಜಯವನ್ನು ಸಂಭ್ರಮಿಸಿದೆ.