Advertisement

ಇಂಗ್ಲೆಂಡ್‌ ತಂಡ ಪ್ರಕಟ: ಮ್ಯಾಂಚೆಸ್ಟರ್‌ ಟೆಸ್ಟ್‌ನಲ್ಲಿ ಸರಣಿ ಸಮಬಲಕ್ಕೆ ಪ್ರಯತ್ನ

11:53 PM Aug 24, 2022 | Team Udayavani |

ಮ್ಯಾಂಚೆಸ್ಟರ್‌: ಮೊದಲ ಟೆಸ್ಟ್‌ನಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದೆದುರು ಇನ್ನಿಂಗ್ಸ್‌ ಸೋಲಿನ ಆಘಾತಕ್ಕೆ ಒಳಗಾಗಿದ್ದ ಇಂಗ್ಲೆಂಡ್‌ ತಂಡವು ಗುರುವಾರದಿಂದ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫ‌ರ್ಡ್‌ನಲ್ಲಿ ಆರಂಭವಾಗುವ ದ್ವಿತೀಯ ಟೆಸ್ಟ್‌ಗೆ ತಂಡವನ್ನು ಪ್ರಕಟಿಸಿದ್ದು ಒಂದು ಬದಲಾವಣೆ ಮಾಡಿಕೊಂಡಿದೆ.

Advertisement

ಸರಣಿಯನ್ನು ಸಮಬಲಗೊಳಿಸುವ ಗುರಿಯೊಂದಿಗೆ ಕಣಕ್ಕೆ ಇಳಿಯಲಿರುವ ಇಂಗ್ಲೆಂಡ್‌ ತಂಡವು ವೇಗಿ ಒಲೀ ರಾಬಿನ್ಸನ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಹೋರಾಟಕ್ಕೆ ಕೇವಲ ಒಂದು ದಿನವಿರುವಾಗ ಆತಿಥೇಯ ತಂಡವು ಆಟವಾಡುವ ಬಳಗವನ್ನು ಅಂತಿಮಗೊಳಿಸಿದೆ. ಮೊದಲ ಟೆಸ್ಟ್‌ನಲ್ಲಿ ಆಡಿದ ಬಹುತೇಕ ಎಲ್ಲ ಆಟಗಾರರು ಕಣದಲ್ಲಿದ್ದಾರೆ.

ಬೌಲಿಂಗ್‌ ವಿಭಾಗದಲ್ಲಿ ವೇಗಿ ಓಲೀ ರಾಬಿನ್ಸನ್‌ ಅವರು ಮ್ಯಾಥ್ಯೂ ಪಾಟ್ಸ್‌ ಅವರ ಬದಲಿಗೆ ತಂಡವನ್ನು ಸೇರಿಕೊಂಡಿದ್ದಾರೆ. ಜೇಮ್ಸ್‌ ಆ್ಯಂಡರ್ಸನ್‌ ಮತ್ತು ಸ್ಟುವರ್ಟ್‌ ಬ್ರಾಡ್‌ ವೇಗದ ದಾಳಿಯ ನೇತೃತ್ವ ವಹಿಸಲಿದ್ದರೆ ಜಾಕ್‌ ಲೀಚ್‌ ಸ್ಪಿನ್‌ ವಿಭಾಗವನ್ನು ನೋಡಿಕೊಳ್ಳಲಿದ್ದಾರೆ.

ಬ್ಯಾಟಿಂಗ್‌ ವಿಭಾಗದಲ್ಲಿ ಅಲೆಕ್ಸ್‌ ಲೀಸ್‌ ಮತ್ತು ಜಾಕ್‌ ಕ್ರಾಲಿ ಉತ್ತಮ ಆರಂಭ ನೀಡುವ ನಿರೀಕ್ಷೆಯಿದೆ. ಅಗ್ರ ರ್‍ಯಾಂಕಿನ ಆಟಗಾರ ಜೋ ರೂಟ್‌ ಈ ಪಂದ್ಯದಲ್ಲಾದರೂ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುವ ವಿಶ್ವಾಸವಿದೆ. ಇದೇ ವೇಳೆ ಜಾನಿ ಬೇರ್‌ಸ್ಟೋ ಮತ್ತು ನಾಯಕ ಬೆನ್‌ ಸ್ಟೋಕ್ಸ್‌ ಮಧ್ಯಮ ಕ್ರಮಾಂಕದಲ್ಲಿ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಅಗತ್ಯವಿದೆ.

Advertisement

ಸರಣಿ ಗೆಲುವಿನ ವಿಶ್ವಾಸ
ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದ ದಕ್ಷಿಣ ಆಫ್ರಿಕಾ ದ್ವಿತೀಯ ಟೆಸ್ಟ್‌ನಲ್ಲಿ ಜಯಭೇರಿ ಬಾರಿಸಿ ಸರಣಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಡೀನ್‌ ಎಲ್ಗರ್‌ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ ಇನ್ನಿಂಗ್ಸ್‌ ಮತ್ತು 12 ರನ್ನುಗಳಿಂದ ಗೆಲ್ಲುವ ಮೂಲಕ ಇಂಗ್ಲೆಂಡಿನ ಸತತ ಗೆಲುವಿನ ಸರಮಾಲೆಗೆ ಬ್ರೇಕ್‌ ಹಾಕಿತ್ತು. ಮೊದಲ ಟೆಸ್ಟ್‌ ಮೊದಲು ಇಂಗ್ಲೆಂಡ್‌ ತಂಡವು ಬೆನ್‌ ಸ್ಟೋಕ್ಸ್‌ ಮತ್ತು ರೆಡ್‌ ಬಾಲ್‌ ಕೋಚ್‌ ಬ್ರೆಂಡನ್‌ ಮೆಕಲಮ್‌ ಹುದ್ದೆ ಸ್ವೀಕರಿಸಿದ ಬಳಿಕ ತವರಿನಲ್ಲಿ ನಡೆದ ಕಳೆದ ನಾಲ್ಕು ಟೆಸ್ಟ್‌ ಪಂದ್ಯಗಳಲ್ಲಿ ಜಯ ಸಾಧಿಸಿತ್ತು.

ಸದ್ಯ ಐಸಿಸಿ ಡಬ್ಲ್ಯುಟಿಸಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾವು ದ್ವಿತೀಯ ಟೆಸ್ಟ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ನಂಬರ್‌ ವನ್‌ ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದೆ.

ದ್ವಿತೀಯ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡ
ಅಲೆಕ್ಸ್‌ ಲೀಸ್‌, ಜಾಕ್‌ ಕ್ರಾಲಿ, ಓಲೀ ಪೋಪ್‌, ಜೋ ರೂಟ್‌, ಜಾನಿ ಬೇರ್‌ಸ್ಟೋ, ಬೆನ್‌ ಸ್ಟೋಕ್ಸ್‌ (ನಾಯಕ), ಬೆನ್‌ ಫೋಕ್ಸ್‌, ಓಲೀ ರಾಬಿನ್ಸನ್‌, ಜಾಕ್‌ ಲೀಚ್‌, ಸ್ಟುವರ್ಟ್‌ ಬ್ರಾಡ್‌, ಜೇಮ್ಸ್‌ ಆ್ಯಂಡರ್ಸನ್‌.

Advertisement

Udayavani is now on Telegram. Click here to join our channel and stay updated with the latest news.

Next