Advertisement

ಇಂಗ್ಲೆಂಡ್‌-ದಕ್ಷಿಣ ಆಫ್ರಿಕಾ ಸೆಮಿಫೈನಲ್‌ : ಬಿರುಸಿನ ಆಟದ ನಿರೀಕ್ಷೆ

08:13 AM Jul 18, 2017 | Team Udayavani |

ಬ್ರಿಸ್ಟಲ್‌: ವನಿತಾ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಮೊದಲ ಸೆಮಿಫೈನಲ್‌ ಸೆಣಸಾಟಕ್ಕೆ ವೇದಿಕೆ ಸಿದ್ಧ ಗೊಂಡಿದೆ. ಮಂಗಳವಾರ ಬ್ರಿಸ್ಟಲ್‌ನಲ್ಲಿ ಆತಿಥೇಯ ಇಂಗ್ಲೆಂಡ್‌ ಮತ್ತು ಸಾಕಷ್ಟು ಬಲಿಷ್ಠವೆನಿಸಿದ ದಕ್ಷಿಣ ಆಫ್ರಿಕಾ ಪರಸ್ಪರ ಮುಖಾಮುಖೀಯಾಗಲಿವೆ. ಇತ್ತಂಡಗಳ ನಡುವೆ ಬಿರುಸಿನ ಪೈಪೋಟಿ ನಡೆಯುವ ಎಲ್ಲ ಸಾಧ್ಯತೆಗಳಿವೆ. ಗುರುವಾರ ಡರ್ಬಿಯಲ್ಲಿ ನಡೆಯುವ ಇನ್ನೊಂದು ಸೆಮಿಫೈನಲ್‌ನಲ್ಲಿ ಮಿಥಾಲಿ ರಾಜ್‌ ನೇತೃತ್ವದ ಭಾರತ, ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ತಂಡಗಳು ಎದುರಾಗಲಿವೆ.

Advertisement

ಇಂಗ್ಲೆಂಡ್‌ ಸತತ 6 ಜಯ
ಆರಂಭಿಕ ಪಂದ್ಯದಲ್ಲಿ ಭಾರತದ ವಿರುದ್ಧ ಆಘಾತಕಾರಿ ಸೋಲುಂಡ ಬಳಿಕ ಅಜೇಯ ಅಭಿಯಾನ ಬೆಳೆಸಿದ ಇಂಗ್ಲೆಂಡ್‌ ವನಿತೆ ಯರು ಯಾರಿಗೂ ತಲೆ ಬಾಗಲಿಲ್ಲ ಎಂಬುದು ವಿಶೇಷ. ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ವನ್ನೂ ಆವರು ಸೋಲಿಸದೇ ಬಿಡಲಿಲ್ಲ. ಸತತ 6 ಗೆಲುವಿನೊಂದಿಗೆ ಲೀಗ್‌ ಹಂತದಲ್ಲಿ ಅಗ್ರಸ್ಥಾನಿ ಯಾದದ್ದು ಹೀತರ್‌ ನೈಟ್‌ ತಂಡದ ಹೆಗ್ಗಳಿಕೆ. ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಎಲ್ಲ ದಿಕ್ಕು ಗಳಿಂದಲೂ ಸಾಕಷ್ಟು ಪೈಪೋಟಿ ಎದುರಿಸಿ 4ನೇ ಸ್ಥಾನಿಯಾಗಿ ಸೆಮಿಫೈನಲ್‌ ಪ್ರವೇಶಿ ಸಿದೆ. ನಾಲ್ಕನ್ನು ಗೆದ್ದ ಹರಿಣಗಳ ಪಡೆ, ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯ ವಿರುದ್ಧ ಪರಾಭವ ಗೊಂಡಿತ್ತು. ನ್ಯೂಜಿಲ್ಯಾಂಡ್‌ ಎದುರಿನ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.

ಭಾರೀ ಮೊತ್ತದ ಲೀಗ್‌ ಪಂದ್ಯ
ಇಂಗ್ಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಲೀಗ್‌ ಮುಖಾಮುಖೀ ಈ ಕೂಟದ ಅಮೋಘ ಪಂದ್ಯಗಳಲ್ಲಿ ಒಂದಾಗಿತ್ತು. ಬ್ರಿಸ್ಟಲ್‌ನಲ್ಲೇ ನಡೆದ ಈ ಪಂದ್ಯದಲ್ಲಿ ವನಿತಾ ಏಕದಿನ ಕ್ರಿಕೆಟಿನ ಅನೇಕ ದಾಖಲೆಗಳು ನಿರ್ನಾಮವಾಗಿ ಹೊಸ ದಾಖಲೆಗಳು ಸೃಷ್ಟಿಯಾಗಿದ್ದವು. ಟ್ಯಾಮಿ ಬೇಮಾಂಟ್‌ (148) ಮತ್ತು ಸಾರಾ ಟಯ್ಲರ್‌ (147) ಆವರ ಅಮೋಘ ಶತಕ, ಇವರಿಬ್ಬರ ನಡುವೆ 2ನೇ ವಿಕೆಟಿಗೆ 275 ರನ್‌ ಜತೆಯಾಟ, ಇಂಗ್ಲೆಂಡಿನ ಬೃಹತ್‌ ಮೊತ್ತ (5ಕ್ಕೆ 373), ದಕ್ಷಿಣ ಆಫ್ರಿಕಾದ ದಿಟ್ಟ ಚೇಸಿಂಗ್‌ (9ಕ್ಕೆ 305), ಪಂದ್ಯವೊಂದರಲ್ಲಿ 678 ರನ್‌ ಸಂಗ್ರಹ… ಹೀಗೆ ಸಾಗುತ್ತದೆ ಈ ಪಂದ್ಯದ ರೋಮಾಂಚನ. ಇಂಗ್ಲೆಂಡ್‌ ಮತ್ತೂಮ್ಮೆ ಇದೇ ಸಾಹಸವನ್ನು ಪ್ರದರ್ಶಿಸೀತೇ ಅಥವಾ ದಕ್ಷಿಣ ಆಫ್ರಿಕಾ ಲೀಗ್‌ ಪಂದ್ಯಕ್ಕೆ ಸೇಡು ತೀರಿಸಿಕೊಂಡು ಫೈನಲ್‌ಗೆ ಲಗ್ಗೆ ಇರಿಸೀತೇ? ಇದು ಮಂಗಳವಾರದ ಕುತೂಹಲ.

ಇತಿಹಾಸ ಇಂಗ್ಲೆಂಡ್‌ ಪರ
ಆದರೆ ವಿಶ್ವಕಪ್‌ ಇತಿಹಾಸ, ದಾಖಲೆ ಹಾಗೂ ಬಲಾಬಲದ ಲೆಕ್ಕಾಚಾರದಲ್ಲಿ ಇಂಗ್ಲೆಂಡ್‌ ತಂಡವೇ ಮುಂದಿದೆ. ಈವರೆಗೆ 6 ಸಲ ವಿಶ್ವಕಪ್‌ ಫೈನಲ್‌ ಪ್ರವೇಶಿಸಿರುವ ಇಂಗ್ಲೆಂಡ್‌ 3 ಸಲ ಚಾಂಪಿಯನ್‌ ಆಗಿ ಮೂಡಿಬಂದಿದೆ. ಕೊನೆಯ ಸಲ ಪ್ರಶಸ್ತಿ ಎತ್ತಿದ್ದು 2009ರಲ್ಲಿ. ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಚಾಂಪಿ ಯನ್‌ ಆಗುವುದಿರಲಿ, ಈ ತನಕ ಪ್ರಶಸ್ತಿ ಸುತ್ತನ್ನೇ ಪ್ರವೇಶಿಸಿಲ್ಲ. ಹೀಗಾಗಿ ಮಂಗಳವಾರ ಇಂಗ್ಲೆಂಡನ್ನು ಮಣಿಸಿದರೆ ಅದು ದಕ್ಷಿಣ ಆಫ್ರಿಕಾ ಬರೆಯಲಿರುವ ಹೊಸ ಇತಿಹಾಸವಾಗಲಿದೆ. ಆದರೆ ಆಂಗ್ಲ ವನಿತೆಯರ ಓಟ ಗಮನಿಸಿದರೆ ಇದು ಸುಲಭವಲ್ಲ ಎಂದೇ ಹೇಳಬೇಕಾಗುತ್ತದೆ.

“ಭಾರತ ವಿರುದ್ಧ ಸೋಲನುಭವಿಸಿದ ಬಳಿಕ ನಾವು ಎಚ್ಚೆತ್ತುಕೊಂಡಿದ್ದೇವೆ. ಅನಂತರದ ಪ್ರತಿ ಪಂದ್ಯದಲ್ಲೂ ಒಬ್ಬೊಬ್ಬ ರಾಗಿ ತಂಡದ ನೆರವಿಗೆ ನಿಂತು ಮ್ಯಾಚ್‌ ವಿನ್ನರ್‌ ಎನಿಸಿಕೊಂಡಿರುವುದು ನಮ್ಮ ವಿಶೇಷ. ಇದು ಸೆಮಿಫೈನಲ್‌ನಲ್ಲೂ ಮುಂದುವರಿಯಲಿದೆ…’ ಎಂಬ ವಿಶ್ವಾಸ ಇಂಗ್ಲೆಂಡ್‌ ಆರಂಭಕಾರ್ತಿ ಬೇಮಾಂಟ್‌ ಅವರದು. ಹೊಸ ಚೆಂಡನ್ನು ಕೈಗೆತ್ತಿಕೊಳ್ಳಲಿರುವ ಮರಿಜಾನ್‌ ಕಾಪ್‌-ಶಬ್ನಂ ಇಸ್ಮಾಯಿಲ್‌ ವಿಶ್ವದಲ್ಲೇ ಅತ್ಯುತ್ತಮ ಆರಂಭಿಕ ಬೌಲಿಂಗ್‌ ಜೋಡಿ ಎಂಬುದು ದಕ್ಷಿಣ ಆಫ್ರಿಕಾದ ನಾಯಕಿ ಡೇನ್‌ ವಾನ್‌ ನೀಕರ್ಕ್‌ ಆವರ ಅಭಿಪ್ರಾಯ. 2000ದ ಬಳಿಕ ಮೊದಲ ಸಲ ಸೆಮಿಫೈನಲ್‌ಗೆ ಬಂದಿರುವ ಆಫ್ರಿಕಾ ವನಿತೆಯರು ಪ್ರಶಸ್ತಿ ಸುತ್ತಿಗೆ ನೆಗೆದರೆ ಅದೊಂದು ಮಹಾನ್‌ ಸಾಧನೆ ಎನಿಸಲಿದೆ.

Advertisement

ಇಂಗ್ಲೆಂಡ್‌-ದಕ್ಷಿಣ ಆಫ್ರಿಕಾ ವನಿತಾ ತಂಡಗಳು
ಇಂಗ್ಲೆಂಡ್‌: ಹೀತರ್‌ ನೈಟ್‌ (ನಾಯಕಿ), ಟ್ಯಾಮಿ ಬೇಮಾಂಟ್‌, ಕ್ಯಾಥರಿನ್‌ ಬ್ರಂಟ್‌, ಜಾರ್ಜಿಯಾ ಎಲ್ವಿಸ್‌, ಜೆನ್ನಿ ಗನ್‌, ಅಲೆಕ್ಸ್‌ ಹಾಟಿ, ಡೇನಿಯಲ್‌ ಹ್ಯಾಜೆಲ್‌, ಬೆತ್‌ ಲ್ಯಾಂಗ್‌ಸ್ಟನ್‌, ಲಾರಾ ಮಾರ್ಷ್‌, ನಥಾಲಿ ಶಿವರ್‌, ಅನ್ಯಾ ಶ್ರಬೊಲ್‌, ಸಾರಾ ಟಯ್ಲರ್‌, ಫ್ರಾನ್‌ ವಿಲ್ಸನ್‌, ಲಾರೆನ್‌ ವಿನ್‌ಫೀಲ್ಡ್‌, ಡೇನಿಯಲ್‌ ವ್ಯಾಟ್‌.

ದಕ್ಷಿಣ ಆಫ್ರಿಕಾ: ಡೇನ್‌ ವಾನ್‌ ನೀಕರ್ಕ್‌ (ನಾಯಕಿ), ತಿೃಷಾ ಚೆಟ್ಟಿ, ಮೊಸೆಲಿನ್‌ ಡೇನಿಯಲ್ಸ್‌, ನ್ಯಾಡಿನ್‌ ಡಿ ಕ್ಲರ್ಕ್‌, ಮಿಗ್ನನ್‌ ಡು ಪ್ರೀಝ್, ಶಬ್ನಂ ಇಸ್ಮಾಯಿಲ್‌, ಮರಿಜಾನ್‌ ಕಾಪ್‌, ಅಯಬೊಂಗ ಖಾಕ, ಒಡಿನ್‌ ಕರ್ಸ್ಟನ್‌, ಮಸಬಟ ಕ್ಲಾಸ್‌, ಲಿಜೆಲ್‌ ಲೀ, ಸುನ್‌ ಲೂಸ್‌, ರಸಿನ್‌ ಎನ್‌ರಕೆ, ಕ್ಲೋ ಟ್ರಯಾನ್‌, ಲಾರಾ ವೊಲ್ವಾರ್ಡಿ.

ಆರಂಭ: 3.00  ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next