ಲಂಡನ್: ಕಳೆದ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಅತ್ಯಂತ ಹೀನಾಯ ಪ್ರದರ್ಶನ ತೋರಿದ ಕಾರಣ ಹೆಡ್ ಕೋಚ್ ಸ್ಥಾನದಿಂದ ಕ್ರಿಸ್ ಸಿಲ್ವರ್‌ವುಡ್ ಅವರನ್ನು ವಜಾಗೊಳಿಸಲಾಗಿದೆ.
ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಿಂದ ಆ್ಯಶ್ಲೆ ಜೈಲ್ಸ್ ಅವರನ್ನು ಕೆಳಗಿಳಿಸಿದ 24 ಗಂಟೆಗಳಲ್ಲಿ ಈ ಬೆಳವಣಿಗೆ ಸಂಭವಿಸಿದೆ.
ಆಸ್ಟ್ರೇಲಿಯ ವಿರುದ್ಧ ಇಂಗ್ಲೆಂಡ್ 4-0 ಅಂತರದ ಹೀನಾಯ ಸೋಲನುಭವಿಸಿತ್ತು. ಇದರಿಂದ ಸಿಲ್ವರ್‌ವುಡ್ ತಲೆದಂಡ ಖಾತ್ರಿಯಾಗಿತ್ತು. “ಇಷ್ಟು ಕಾಲ ಇಂಗ್ಲೆಂಡ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿರುವುದಕ್ಕೆ ನನಗೆ ಬಹಳ ಹೆಮ್ಮೆ ಇದೆ. ಇಲ್ಲಿನ ಆಟಗಾರರು ಹಾಗೂ ಸಹಾಯಕ ಸಿಬಂದಿ ಜತೆ ಕೆಲಸ ಮಾಡಿರುವುದಕ್ಕೆ ಖುಷಿ ಇದೆ’ ಎಂದು ಸಿಲ್ವರ್‌ವುಡ್ ಹೇಳಿದ್ದಾರೆ.
ಇದನ್ನೂ ಓದಿ:ಒಲಿಂಪಿಕ್ಸ್ ಉದ್ಘಾಟನೆ; ಅರಳಿತು ತ್ರಿವರ್ಣ ಧ್ವಜ
“ತಂಡದ ವ್ಯವಸ್ಥಾಪಕ ನಿರ್ದೇಶಕರಾಗಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಆಂಡ್ರೂé ಸ್ಟ್ರಾಸ್ ಅವರೇ ಸದ್ಯ ಉಸ್ತುವಾರಿ ಕೋಚ್ ಆಗಿರುತ್ತಾರೆ’ ಎಂದು ಇಸಿಬಿ ಮುಖ್ಯ ಕಾರ್ಯ ನಿರ್ವಾಹಕ ಟಾಮ್ ಹ್ಯಾರಿಸನ್ ತಿಳಿಸಿದ್ದಾರೆ. ಅನಂತರದ ಬೆಳವಣಿಗೆಯಲ್ಲಿ ಇಂಗ್ಲೆಂಡಿನ ಬ್ಯಾಟಿಂಗ್ ಕೋಚ್ ಗ್ರಹಾಂ ಥೋರ್ಪ್ ಕೂಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾಗಿ ವರದಿಯಾಗಿದೆ.