Advertisement

ಟೆಸ್ಟ್‌ : ಇಂಗ್ಲೆಂಡ್‌ 5 ಲಕ್ಷ ರನ್‌ ಸಾಧನೆ!

09:54 AM Jan 26, 2020 | Sriram |

ಜೊಹಾನ್ಸ್‌ಬರ್ಗ್‌: ಕ್ರಿಕೆಟನ್ನು ಜಗತ್ತಿಗೆ ಪರಿಚಯಿಸಿದ ಇಂಗ್ಲೆಂಡ್‌ ಈಗ ಟೆಸ್ಟ್‌ ಇತಿಹಾಸದಲ್ಲಿ 5 ಲಕ್ಷ ರನ್‌ ಪೇರಿಸಿದ ಮೊದಲ ತಂಡವೆಂಬ ಹಿರಿಮೆಗೆ ಪಾತ್ರವಾಗಿದೆ.

Advertisement

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್‌ ಪಂದ್ಯದಲ್ಲಿ ನಾಯಕ ಜೋ ರೂಟ್‌ ಒಂಟಿ ರನ್‌ ತೆಗೆದುಕೊಂಡ ವೇಳೆ ಇಂಗ್ಲೆಂಡ್‌ ಈ ಎತ್ತರ ತಲುಪಿತು. ಇದು ಇಂಗ್ಲೆಂಡ್‌ ಆಡುತ್ತಿರುವ 1,022ನೇ ಟೆಸ್ಟ್‌ ಪಂದ್ಯವಾಗಿದೆ.

ಈ ಯಾದಿಯಲ್ಲಿ ಆಸ್ಟ್ರೇಲಿಯ ದ್ವಿತೀಯ ಸ್ಥಾನದಲ್ಲಿದೆ. 830 ಟೆಸ್ಟ್‌ ಆಡಿರುವ ಆಸೀಸ್‌ ಒಟ್ಟು 4,32,706 ರನ್‌ ಗಳಿಸಿದೆ. ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯ 1877ರಲ್ಲಿ ಟೆಸ್ಟ್‌ ಚರಿತ್ರೆಯ ಮೊದಲ ಪಂದ್ಯವನ್ನಾಡಿದ್ದವು.

ಅತ್ಯಧಿಕ ರನ್‌ ಗಳಿಕೆಯಲ್ಲಿ 3ನೇ ಸ್ಥಾನದಲ್ಲಿರುವ ತಂಡ ಭಾರತ. 540 ಟೆಸ್ಟ್‌ಗಳಿಂದ 2,73,518 ರನ್‌ ಗಳಿಸಿದ ಸಾಧನೆ ಭಾರತದ್ದಾಗಿದೆ. ವೆಸ್ಟ್‌ ಇಂಡೀಸ್‌ 4ನೇ ಸ್ಥಾನದಲ್ಲಿದೆ (545 ಟೆಸ್ಟ್‌ಗಳಿಂದ 2,70,441 ರನ್‌).

ಪೋರ್ಟ್‌ ಎಲಿಜಬೆತ್‌ನಲ್ಲಿ ನಡೆದ ಸರಣಿಯ 3ನೇ ಟೆಸ್ಟ್‌ ವೇಳೆ ಇಂಗ್ಲೆಂಡ್‌ ವಿದೇಶಿ ನೆಲದಲ್ಲಿ 500 ಟೆಸ್ಟ್‌ ಆಡಿದ ವಿಶ್ವದ ಮೊದಲ ತಂಡವೆಂಬ ದಾಖಲೆ ಬರೆದಿತ್ತು.

Advertisement

ಇಂಗ್ಲೆಂಡ್‌ ಭರ್ತಿ 400 ರನ್‌
ಸರಣಿಯಲ್ಲಿ 2-1 ಮುನ್ನಡೆಯಲ್ಲಿರುವ ಇಂಗ್ಲೆಂಡ್‌, ಜೊಹಾನ್ಸ್‌ಬರ್ಗ್‌ ಟೆಸ್ಟ್‌ ಪಂದ್ಯದ 2ನೇ ದಿನದಾಟದಲ್ಲಿ ಭರ್ತಿ 400 ರನ್ನಿಗೆ ಮೊದಲ ಇನ್ನಿಂಗ್ಸ್‌ ಮುಗಿಸಿದೆ. ಆರಂಭಕಾರ ಕ್ರಾಲಿ 66, ರೂಟ್‌ 59, ಪೋಪ್‌ 56, ಕೊನೆಯವರಾಗಿ ಕ್ರೀಸ್‌ ಇಳಿದ ಬ್ರಾಡ್‌ 43 ರನ್‌ ಹೊಡೆದರು. ಬ್ರಾಡ್‌ ಮತ್ತು ವುಡ್‌ (ಅಜೇಯ 35) ಅಂತಿಮ ವಿಕೆಟಿಗೆ 82 ರನ್‌ ಪೇರಿಸಿದ್ದು ಇಂಗ್ಲೆಂಡ್‌ ಸರದಿಯ ವಿಶೇಷವಾಗಿತ್ತು. ಆಫ್ರಿಕಾ ಪರ ಅನ್ರಿಚ್‌ ನೋರ್ಜೆ 110ಕ್ಕೆ 5 ವಿಕೆಟ್‌ ಉರುಳಿಸಿದರು.

ಜವಾಬು ನೀಡಲಾರಂಭಿಸಿದ ದಕ್ಷಿಣ ಆಫ್ರಿಕಾ ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟಿಗೆ 88 ರನ್‌ ಮಾಡಿ ತೀವ್ರ ಸಂಕಟಕ್ಕೆ ಸಿಲುಕಿದೆ.ಡಿ ಕಾಕ್‌ 32 ರನ್‌ ಮಾಡಿ ಆಡುತ್ತಿದ್ದಾರೆ. ಮಾರ್ಕ್‌ ವುಡ್‌ 3 ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next