ಲಂಡನ್: ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯಲ್ಲಿ ಪಾಲ್ಗೊಂಡಿದ್ದ ಇಂಗ್ಲೆಂಡ್ ಆಟಗಾರರಿಗೆ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಥಾನ ಲಭಿಸುವುದಿಲ್ಲವೇ? ಇಂಥ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಐಪಿಎಲ್‌ನಲ್ಲಿ ಆಡುವ ಆಟಗಾರರಿಗೆ ರೆಡ್‌ಬಾಲ್ ಅಭ್ಯಾಸವೂ ಕಡಿಮೆ ಇರುವುದರಿಂದ ಇಸಿಬಿ ಈ ನಿರ್ಧಾರ ಕೈಗೊಳ್ಳಲಿದೆ ಎಂದು ವರದಿಯೊಂದು ತಿಳಿಸಿದೆ.
ಸದ್ಯ ಸ್ಥಗಿತಗೊಂಡಿರುವ ಐಪಿಎಲ್‌ನಿಂದ ವಾಪಸಾಗಿರುವ ಇಂಗ್ಲೆಂಡ್ ಆಟಗಾರರು 10 ದಿನಗಳ ಕಡ್ಡಾಯ ಕ್ವಾರಂಟೈನ್‌ನಲ್ಲಿದ್ದಾರೆ. ಜೂನ್ 2ರಿಂದ ನ್ಯೂಜಿಲ್ಯಾಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಆದ್ದರಿಂದ ಐಪಿಎಲ್‌ನಿಂದ ವಾಪಸಾದ ಆಟಗಾರರಿಗೆ ಅಭ್ಯಾಸ ನಡೆಸಲು ಹೆಚ್ಚು ಸಮಯಾವಕಾಶ ಸಿಗದ ಹಿನ್ನೆಲೆಯಲ್ಲಿ ಇವರರನ್ನು ಕೈಬಿಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಇಸಿಬಿ ಮೂಲವೊಂದು ತಿಳಿಸಿದೆ.
ಐಪಿಎಲ್ ಆಡಿದ ಜಾಸ್ ಬಟ್ಲರ್, ಜಾನಿ ಬೇರ್ ಸ್ಟೊ, ಸ್ಯಾಮ್ ಕರನ್, ಮೊಯಿನ್ ಅಲಿ, ಟಾಮ್ ಕರನ್, ಕ್ರಿಸ್ ವೋಕ್ಸ್ ಮೊದಲಾದ ಆಟಗಾರರು ಸದ್ಯ ಕ್ವಾರಂಟೈನ್‌ನಲ್ಲಿದ್ದಾರೆ. ಇವರೆಲ್ಲ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಸಂಭವವಿಲ್ಲ.
“ಐಪಿಎಲ್‌ನಿಂದ ವಾಪಸಾದ ಆಟಗಾರರಿಗೆ ಈ ಬಾರಿ ಅವಕಾಶ ಕಷ್ಟ. ಹೀಗಾಗಿ ಓಲಿ ರಾಬಿನ್ಸನ್, ಮತ್ತು ಬ್ರೇಸಿ ಅವರಿಗೆ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ’ ಎಂಬುದಾಗಿ ವರದಿ ತಿಳಿಸಿದೆ.