ಲಂಡನ್: ಆಸ್ಟ್ರೇಲಿಯದಲ್ಲಿ ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಕೂಟಕ್ಕೆ ಇಂಗ್ಲೆಂಡ್ ತನ್ನ ತಂಡವನ್ನು ಪ್ರಕಟಿಸಿದೆ.
ಫಾರ್ಮ್ನಲ್ಲಿ ಇರದ ಆರಂಭಿಕ ಆಟಗಾರ ಜಾಸನ್ ರಾಯ್ ಅವರನ್ನು ಕೈಬಿಡಲಾಗಿದೆ. ಮತ್ತೆ ಫಿಟ್ ಆಗಿರುವ ಕ್ರಿಸ್ ವೋಕ್ಸ್ ಮತ್ತು ಮಾರ್ಕ್ ವುಡ್ ತಂಡಕ್ಕೆ ಮರಳಿದ್ದಾರೆ.
ಇಂಗ್ಲೆಂಡಿನ ವೈಟ್‌ಬಾಲ್ ತಂಡದ ಪ್ರಮುಖ ಆಟಗಾರರಾಗಿದ್ದ ರಾಯ್ 2019ರಲ್ಲಿ ಇಂಗ್ಲೆಂಡ್ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 32ರ ಹರೆಯದ ಅವರು ಆಬಳಿಕ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದರು. ಕಳೆದ ಆರು ಟಿ20 ಪಂದ್ಯಗಳಲ್ಲಿ ಅವರು ಕೇವಲ 76 ರನ್ ಗಳಿಸಿದ್ದರು. ಈ ಕಾರಣಕ್ಕಾಗಿ ಅವರನ್ನು ಕೈಬಿಡಲಾಗಿದೆ ಎನ್ನಲಾಗಿದೆ.
ಕಳೆದ ಮಾರ್ಚ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದ್ದ ವೋಕ್ಸ್ ಮತ್ತು ವುಡ್ ಇದೀಗ ಗಾಯದಿಂದ ಚೇತರಿಸಿಕೊಂಡಿದ್ದಾರೆ. ವಿಶ್ವಕಪ್ ತಂಡದಲ್ಲಿ ಕ್ರಿಸ್ ಜೋರ್ಡಾನ್, ಲಿಯಮ್ ಲಿವಿಂಗ್‌ಸ್ಟೋನ್ ಕೂಡ ಇದ್ದಾರೆ. ಇವರಿಬ್ಬರು ವಿಶ್ವಕಪ್ ಮೊದಲು ಪಾಕಿಸ್ಥಾನದಲ್ಲಿ ನಡೆಯುವ ಏಳು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗವಹಿಸುವುದಿಲ್ಲ.
ಗಾಯದಿಂದ ಚೇತರಿಸಿಕೊಂಡಿರುವ ನಾಯಕ ಜಾಸ್ ಬಟ್ಲರ್ ಪಾಕಿಸ್ಥಾನ ಪ್ರವಾಸಕ್ಕೆ ಲಭ್ಯರಿದ್ದರೂ ಸರಣಿಯ ಅಂತಿಮ ಹಂತದಲ್ಲಿ ಡಲಿದ್ದಾರೆ. ಬಟ್ಲರ್ ಅವರ ಅನುಪಸ್ಥಿತಿಯಲ್ಲಿ ಮೊಯಿನ್ ಅಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಇಂಗ್ಲೆಂಡ್ ಆ್ಯನ್x ವೇಲ್ಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಮಾಜಿ ಚಾಂಪಿಯನ್ ಇಂಗ್ಲೆಂಡ್ ಪರ್ತ್‌ನಲ್ಲಿ ಅ. 22ರಂದು ನಡೆಯುವ ಪಂಧ್ಯದಲ್ಲಿ ಅಫ್ಘಾನಿಸ್ಥಾನವನ್ನು ಎದುರಿಸುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.
ಟಿ20 ವಿಶ್ವಕಪ್ ತಂಡ
ಜಾಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಜಾನಿ ಬೇರ್‌ಸ್ಟೋ, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್, ಲಿಯಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಾಲನ್, ಅದಿಲ್ ರಶೀದ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ರೀಸ್ ಟಾಪ್ಲೆ, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್. ಮೀಸಲು ಆಟಗಾರರು: ಲಿಯಮ್ ಡಾಸನ್, ರಿಚರ್ಡ್ ಗ್ಲೀಸನ್, ಟೈಮಲ್ ಮಿಲ್ಸ್.