Advertisement

ಇಲ್ಲಿ ಅಲ್ಪಸಂಖ್ಯಾಕರಿಗೆ ಶವ ದಫ‌ನವೇ ಸಮಸ್ಯೆ

02:56 PM May 12, 2020 | sudhir |

ಲಂಡನ್‌: ಕೋವಿಡ್ ಮರಣ ತಾಂಡವಕ್ಕೆ ಜಗತ್ತು ತತ್ತರಿಸಿ ಹೋಗಿದೆ. ಈಗ ಎಲ್ಲೆಲ್ಲೂ ಸಾವಿನದ್ದೇ ಸುದ್ದಿ. ಅಮೆರಿಕದ ನ್ಯೂಯಾರ್ಕ್‌ನ ಶ್ಮಶಾನಗಳು ಭರ್ತಿಯಾಗಿ ಪಕ್ಕದ ಉದ್ಯಾನದಲ್ಲಿ ದಫ‌ನ ಮಾಡುತ್ತಿರುವುದು ವರದಿಯಾಗಿತ್ತು. ಇಂಗ್ಲೆಂಡಿನಲ್ಲಿಯೂ ಕೋವಿಡ್ ಅಲ್ಲಿನ ಅಲ್ಪಸಂಖ್ಯಾಕರನ್ನು ತುಂಬಾ ಕಾಡಿದೆ. ಪವಿತ್ರ ರಂಜಾನ್‌ ಹಬ್ಬದ ಸಂದರ್ಭ ಇದಾಗಿರುವ ಕಾರಣಕ್ಕೆ ಪ್ರತಿವರ್ಷ ಈ ಸಮಯದಲ್ಲಿ ಮಸೀದಿಗಳು ಜನರಿಂದ ತುಂಬಿರುತ್ತವೆ. ಆದರೆ ಈ ಬಾರಿ ನಿರ್ಜನವಾಗಿರುವ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಶವಪೆಟ್ಟಿಗಳು ಮಾತ್ರ ಕಾಣಸಿಗುತ್ತಿವೆ.

Advertisement

ಪ್ರತಿ ಗಂಟೆಗೊಂದು ಆ್ಯಂಬುಲೆನ್ಸ್‌ ಮಸೀದಿಯನ್ನು ಪ್ರವೇಶಿಸುತ್ತಿದ್ದು, ಕುರಾನ್‌ನ ಸಾಲುಗಳು ಪಠಣವಾಗುತ್ತಿದೆ. ವ್ಯಾನ್‌ನಿಂದ ಇಳಿದು ವೈಯಕ್ತಿಕ ರಕ್ಷಣಾ ಕವಚ ಮತ್ತು ಮಾಸ್ಕ್ಗಳನ್ನು ಧರಿಸಿದ ಆರೋಗ್ಯ ಸೇವಕರು ಶವಪೆಟ್ಟಿಗೆಯನ್ನು ಕೆಳಗಿಳಿಸಿ ಮಸೀದಿಯ ಪಾರ್ಕಿಂಗ್‌ ಸ್ಥಳದಲ್ಲಿರುವ ಶವಾಗಾರದೊಳಗೆ ಸಾಗಿಸುತ್ತಾರೆ. ಅಲ್ಲಿ ಶವಗಳನ್ನು ಸ್ನಾನ ಮಾಡಿಸಿ ಮತ್ತೆ ಶವಪೆಟ್ಟಿಗೆಯೊಳಗೆ ತಂದಿರಿಸುತ್ತಾರೆ ಇದು ಕೆಲವೇ ಕ್ಷಣಗಳಲ್ಲಿ ಮುಗಿದು ಹೋಗುವ ಶಾಸ್ತ್ರ.

ನಿತ್ಯ 5- 6 ಶವ
ಸಾಮಾನ್ಯ ದಿನಗಳಲ್ಲಿ ಅಂದರೆ ಕೋವಿಡ್ ವೈರಸ್‌ ಜಗತ್ತನ್ನು ಕಾಡುವ ಮೊದಲು, ಬರ್ಮಿಂಗ್‌ಹಾಮ್‌ ನಗರದ ಮಸೀದಿಯಲ್ಲಿ ವಾರಕ್ಕೆ ಒಂದು ಅಥವಾ ಎರಡು ದಫ‌ನ ಕಾರ್ಯ ಆಗುತ್ತಿತ್ತು. ಬರ್ಮಿಂಗ್‌ಹಾಮ್‌ ಬ್ರಿಟನ್‌ನ ಎರಡನೇ ಅತಿದೊಡ್ಡ ನಗರವಾಗಿದೆ. ಕೋವಿಡ್ ವೈರಸ್‌ ಬಳಿಕ ಇಲ್ಲಿನ ಮಸೀದಿಯಲ್ಲಿ ಪ್ರತಿದಿನ ಐದರಿಂದ ಆರು ಶವಗಳ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.

ಇದೀಗ ಅಲ್ಲಿ ಜಾಗದ ಕೊರತೆ ಕಂಡು ಬಂದಿದ್ದು, ಮಸೀದಿಯ ಪಾರ್ಕಿಂಗ್‌ ಸ್ಥಳವನ್ನು ಶವಾಗಾರವಾಗಿ ಬದಲಾಯಿಸಲಾಗಿದೆ. ಅಂದಹಾಗೆ ಈಗ ಅದು ಎಲ್ಲ ಧರ್ಮಗಳಿಗೆ ಮುಕ್ತವಾಗಿದೆ.

ನನ್ನ ಬಳಿ ಲೆಕ್ಕವಿಲ್ಲ
“ಕೋವಿಡ್ ಬಳಿಕ ಇಲ್ಲಿ ದಫ‌ನ ಮಾಡಲಾದ ಸಂಖ್ಯೆಗಳನ್ನು ನಾನು ಪಟ್ಟಿಮಾಡಲು ಹೋಗಿಲ್ಲ. ಇದುವರೆಗೆ ನಾನು ಇಂತಹ ಸಂದರ್ಭಗಳನ್ನು ನೋಡೇ ಇಲ್ಲ’ ಎಂದು ಮಸೀದಿಯ ಅಂತ್ಯಕ್ರಿಯೆಯನ್ನು ನೆರವೇರಿಸುವ ಜಾವಿದ್‌ ಅಖ್ತರ್‌ ಹೇಳುತ್ತಾರೆ. ಬ್ರಿಟನ್‌ನಲ್ಲಿ ಇದುವರೆಗೆ 32,000ಕ್ಕೂ ಹೆಚ್ಚು ಜನರು ಕೋವಿಡ್ ವೈರಸ್‌ಗೆ ಬಲಿಯಾಗಿದ್ದಾರೆ. ಲಂಡನ್‌ನಲ್ಲಿ ಪ್ರಕರಣಗಳು ಹೆಚ್ಚಾಗಿದ್ದರೆ, ಇತ್ತ ಬರ್ಮಿಂಗ್‌ಹಾಮ್‌ ಮತ್ತು ವೆಸ್ಟ್‌ ಮಿಡ್‌ಲ್ಯಾಂಡ್‌ನ‌ ಸುತ್ತಮುತ್ತಲಿನ ಪ್ರದೇಶಗಳು ವೈರಸ್‌ ಹಾಟ್‌ಸ್ಪಾಟ್‌ ಆಗಿ ಬದಲಾಗಿವೆ.

Advertisement

ಆರೋಗ್ಯ ಕಾರ್ಯಕರ್ತೆಯರಿಗೆ ಸೋಂಕು
ಬರ್ಮಿಂಗ್‌ಹ್ಯಾಮ್‌ನ 8,42,000 ನಿವಾಸಿಗಳಲ್ಲಿ ಶೇ. 26ರಷ್ಟು ಮಂದಿಯಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಎಪ್ರಿಲ್‌ 17ರ ವರೆಗೆ ಸಾವನ್ನಪ್ಪಿದ ಕೋವಿಡ್ ವೈರಸ್‌ ಪೀಡಿತರಲ್ಲಿ ಶೇ. 16ರಷ್ಟು ಮಂದಿ ಅಲ್ಪಸಂಖ್ಯಾಕ ಸಮುದಾಯದವರು ಎಂದು ವರದಿಯೊಂದು ಹೇಳಿದೆ.

ವೈರಸ್‌ನಿಂದ ಸಾವನ್ನಪ್ಪಿದ 100ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರಲ್ಲಿ, ಶೇ. 63ರಷ್ಟು ಮಂದಿ ಆ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಬರ್ಮಿಂಗ್‌ಹಾಮ್‌ನ ಒಂದು ಕಡೆಯಲ್ಲಿ ಶವಾಗಾರ ನಿರ್ಮಾಣಕ್ಕೆ ಸಹಾಯ ಮಾಡಿದ ಮಸೀದಿಯೊಂದರ ಸಮಿತಿಯ ಸದಸ್ಯರು ಸೋಂಕಿಗೆ ಒಳಗಾಗಿದ್ದಾರೆ.

ಹೀಗಿದೆ ಶವಾಗಾರ
ಬರ್ಮಿಂಗ್‌ಹಾಮ್‌ನ ಶವಾಗಾರವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಡಜನ್‌ಗಟ್ಟಲೆ ಮರದ ಖಾಲಿ ಶವಪೆಟ್ಟಿಗೆಗಳನ್ನು ಜೋಡಿಸಿಡಲಾಗಿದೆ.

ಎಡಭಾಗದಲ್ಲಿ 400 ಮೃತ ದೇಹಗಳ ಸಂಗ್ರಹ ಸಾಮರ್ಥ್ಯ ಹೊಂದಿರುವ ದೊಡ್ಡ ರೆಫ್ರಿಜರೇಟರ್‌ಗಳನ್ನು ಜೋಡಿಸಲಾಗಿದೆ. ಈ ದಿನಗಳಲ್ಲಿ ಮೃತದೇಹವನ್ನು ತೆಗೆದುಕೊಳ್ಳಲು ಒಂದು ಅಥವಾ ಎರಡು ಗಂಟೆಗಳ ಸಮಯ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಸಾಯುತ್ತಿದ್ದು, ದಾಖಲೆಗಳು ಪೂರ್ಣಗೊಳ್ಳುವಾಗ ಸಮಯತೆಗೆದುಕೊಳ್ಳುತ್ತದೆ.

ಶವಾಗಾರದ ಹೊರಗೆ ಆರು ಹಸಿರು ಪ್ಲಾಸ್ಟಿಕ್‌ ಕುರ್ಚಿಗಳು, ಅಂತ್ಯಕ್ರಿಯೆ ಸಂದರ್ಭ ಸೀಮಿತ ಕುಟುಂಬಸ್ಥರಿಗೆ ಪ್ರಾರ್ಥನೆ ಮಾಡಲು ಎರಡು ಮ್ಯಾಟ್‌ಗಳನ್ನು ಇಡಲಾಗಿದೆ.

ಇಸ್ಲಾಂ ಧರ್ಮದ ಪ್ರಕಾರ ಅಂತ್ಯಕ್ರಿಯೆಯ ವಿಧಿಗಳಲ್ಲಿ ಸಮಾಧಿ ಕ್ರಿಯೆ ಆದಷ್ಟು ವೇಗವಾಗಿ ನಡೆಯಬೇಕು. ಸಾಮಾನ್ಯವಾಗಿ ಸಾವಿನ 24 ಗಂಟೆಗಳ ಒಳಗೆ ಅವುಗಳ ಕಾರ್ಯ ಪೂರೈಸಬೇಕು ಎಂಬ ನಿಯಮ ಇದೆ. ಆದರೆ ಇತ್ತೀಚಿನ ವಾರಗಳಲ್ಲಿ ಮೃತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಅಂತ್ಯಕ್ರಿಯೆಗಳು ವಿಳಂಬವಾಗುತ್ತಿವೆ.

ಕೆಲವೊಮ್ಮೆ ಏಳು ದಿನಗಳ ಬಳಿಕ ಆಗುವುದೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next