ಲಂಡನ್: ಕೋವಿಡ್ 19 ಸೋಂಕಿನ ಕಾರಣದಿಂದ ಕ್ರಿಕೆಟ್ ಸರಣಿಗಳ ರೂಪುರೇಷೆಗಳು ಬದಲಾವಣೆಯಾಗಿದೆ. ಸರಣಿಗೂ ಮೊದಲು ಹಲವು ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದೆ. ಸರಣಿಯುದ್ದಕ್ಕೂ ಬಯೋ ಬಬಲ್ ನಲ್ಲಿ ಕಾಲ ಕಳೆಯುವುದು ಅನಿವಾರ್ಯವಾಗಿದೆ. ಆದರೆ ಇದೇ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ.
ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ- ಇಂಗ್ಲೆಂಡ್ ನಡುವಿನ ಪ್ರತಿಷ್ಠಿತ ಆ್ಯಶಸ್ ಸರಣಿ ಇಂತಹದ್ದೇ ಸಮಸ್ಯೆಗೆ ಸಿಲುಕಿದೆ. ಆಸ್ಟ್ರೇಲಿಯಾದಲ್ಲಿನ ಕಠಿಣ ನಿಯಮಗಳು ಇಂಗ್ಲೆಂಡ್ ಆಟಗಾರರ ಸಮಸ್ಯೆಗೆ ಕಾರಣವಾಗಿದ್ದು, ಸರಣಿಯನ್ನೇ ಬಹಿಷ್ಕಾರ ಮಾಡುವ ಚಿಂತನೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಆರ್‌ಸಿಬಿ ಅಭ್ಯಾಸ ಪಂದ್ಯದಲ್ಲಿ ಎಬಿಡಿ ಸಿಡಿಲಬ್ಬರ
ಆಸೀಸ್ ನಲ್ಲಿ ಕಠಿಣ ನಿಯಮಗಳ ಕಾರಣದಿಂದ ತಿಂಗಳುಗಳ ಸರಣಿ ಆಡುವುದು ಕಷ್ಟ ಎಂದು ಹಿರಿಯ ಆಟಗಾರರು ಇಸಿಬಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಸರಣಿಯನ್ನು ಮುಂದೂಡಲು ಅಥವಾ ಭಾಗಶಃ ಸರಣಿಯನ್ನು ಮುಂದೂಡಲು ಮನವಿ ಮಾಡಿದ್ದಾರೆ. ಆದರೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ಕ್ರಿಕ್ ಇನ್ಫೋ ವರದಿ ಮಾಡಿದೆ.
ಹೀಗಾಗಿ ಹಲವು ಆಟಗಾರರು ಆ್ಯಶಸ್ ಸರಣಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.