ಪರ್ತ್: ಮುಂಬರುವ ಟಿ20 ವಿಶ್ವಕಪ್‌ಗಾಗಿ ನಡೆದ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಆತಿಥೇಯ ಆಸ್ಟ್ರೇಲಿಯ ತಂಡದ ವಿರುದ್ಧ 8 ರನ್ನುಗಳ ರೋಚಕ ಗೆಲುವು ದಾಖಲಿಸಿದೆ.
ಕೊನೆ ಹಂತದಲ್ಲಿ ಇಂಗ್ಲೆಂಡ್ ತಂಡ ಬಿಗು ಬೌಲಿಂಗ್ ದಾಳಿ ಸಂಘಟಿಸಿದ್ದರಿಂದ ಇಂಗ್ಲೆಂಡ್ ಜಯಭೇರಿ ಬಾರಿಸಿತು. ಕೊನೆಯ ಎಂಟು ಎಸೆತಗಳು ಬಾಕಿ ಇರುವಾಗ ಇಂಗ್ಲೆಂಡ್ ಮೂರು ವಿಕೆಟ್ ಹಾರಿಸಿದ್ದರಿಂದ ಆಸ್ಟ್ರೇಲಿಯ ಸೋಲು ಕಾಣುವಂತಾಯಿತು. ವುಡ್ ಮತ್ತು ಕರನ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ 9 ವಿಕೆಟಿಗೆ 200 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಈ ಮೊದಲು ಅಲೆಕ್ಸ್ ಹೇಲ್ಸ್ ಮತ್ತು ಜೋಸ್ ಬಟ್ಲರ್ ಅವರ ಉತ್ತಮ ಆಟದಿಂದಾಗಿ ಇಂಗ್ಲೆಂಡ್ ತಂಡವು 6 ವಿಕೆಟಿಗೆ 208 ರನ್ನುಗಳ ದೊಡ್ಡ ಮೊತ್ತ ಪೇರಿಸಿತ್ತು. ಹೇಲ್ಸ್ ಮತ್ತು ಬಟ್ಲರ್ ಮೊದಲ ವಿಕೆಟಿಗೆ 132 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರು. ಹೇಲ್ಸ್ 84 ಮತ್ತು ಬಟ್ಲರ್ 68 ರನ್ ಹೊಡೆದರು.
ಅಭ್ಯಾಸ ಪಂದ್ಯವಾಗಿದ್ದರಿಂದ ಆಸ್ಟ್ರೇಲಿಯ ತಂಡವು ಸ್ಟೀವ್ ಸ್ಮಿತ್ ಸಹಿತ ಆ್ಯಡಂ ಝಂಪ, ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್, ಪ್ಯಾಟ್ ಕಮಿನ್ಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಗೆ ವಿಶ್ರಾಂತಿ ನೀಡಿತ್ತು.
ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ನಡುವಣ ಇನ್ನೆರಡು ಪಂದ್ಯಗಳು ಬುಧವಾರ ಮತ್ತು ಶುಕ್ರವಾರ ಕ್ಯಾನ್‌ಬೆರ್ರಾದಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್ 6 ವಿಕೆಟಿಗೆ 208 (ಅಲೆಕ್ಸ್ ಹೇಲ್ಸ್ 84, ಜೋಸ್ ಬಟ್ಲರ್ 68, ನಥನ್ ಎಲ್ಲಿಸ್ 20ಕ್ಕೆ 3); ಆಸ್ಟ್ರೇಲಿಯ 9 ವಿಕೆಟಿಗೆ 200 (ಡೇವಿಡ್ ವಾರ್ನರ್ 73, ಮಿಚೆಲ್ ಮಾರ್ಷ್ 36, ಮಾರ್ಕಸ್ ಸ್ಟೋಯಿನಿಸ್ 35, ರೀಸ್ ಟಾಪ್ಲೆ 36ಕ್ಕೆ 2. ಮಾರ್ಕ್ ವುಡ್ 34ಕ್ಕೆ 3, ಸ್ಯಾಮ್ ಕರನ್ 35ಕ್ಕೆ 2).