ಹೇಡಿಂಗ್ಲೆ: ಲಾರ್ಡ್ಸ್ ಟೆಸ್ಟ್ ಪಂದ್ಯದ 9 ವಿಕೆಟ್ ಸೋಲಿಗೆ ಇನ್ನಿಂಗ್ಸ್ ಹಾಗೂ 55 ರನ್ ಜಯದೊಂದಿಗೆ ಸೇಡು ತೀರಿಸಿಕೊಂಡ ಇಂಗ್ಲೆಂಡ್, ಪ್ರವಾಸಿ ಪಾಕಿಸ್ಥಾನ ವಿರುದ್ಧದ 2 ಪಂದ್ಯಗಳ ಸರಣಿಯನ್ನು 1-1 ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಪಂದ್ಯವನ್ನು ಮೂರೇ ದಿನದಲ್ಲಿ ಮುಗಿಸಿದೆ. ಇನ್ನಿಂಗ್ಸ್ ಸೋಲಿನಿಂದ ಪಾರಾಗಲು 189 ರನ್ ಮಾಡಬೇಕಿದ್ದ ಪಾಕಿಸ್ಥಾನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡಿನ ಸಾಂ ಕ ಬೌಲಿಂಗ್ ದಾಳಿಗೆ ತತ್ತರಿಸಿ 46 ಓವರ್‌ಗಳಲ್ಲಿ 134 ರನ್ನಿಗೆ ಆಲೌಟ್ ಆಯಿತು.
ಬಟ್ಲರ್ ಆಕ್ರಮಣಕಾರಿ ಆಟ
ಪಾಕಿಸ್ಥಾನದ 174 ರನ್ನುಗಳ ಮೊದಲ ಇನ್ನಿಂಗ್ಸಿಗೆ ಉತ್ತರವಾಗಿ ಇಂಗ್ಲೆಂಡ್ 363 ರನ್ ಪೇರಿಸಿ 189 ರನ್ನುಗಳ ಬೃಹತ್ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಐಪಿಎಲ್‌ನಂತೆ ಇಲ್ಲಿಯೂ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಜಾಸ್ ಬಟ್ಲರ್ 101 ಎಸೆತಗಳಿಂದ 80 ರನ್ ಬಾರಿಸಿದರು. ಈ ಅಜೇಯ ಇನ್ನಿಂಗ್ಸ್ ವೇಳೆ 11 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಯಲ್ಪಟ್ಟಿತು.
ಉಳಿದಂತೆ ಮೂವರಿಂದ 40 ಪ್ಲಸ್ ರನ್ ದಾಖಲಾಯಿತು. ಲಾರ್ಡ್ಸ್‌ನಲ್ಲಿ ಘಾತಕ ದಾಳಿ ನಡೆಸಿದ ಪಾಕ್ ವೇಗಿಗಳಿಗೆ ಹೇಡಿಂಗ್ಲೆಯಲ್ಲಿ ಆತಿಥೇಯರನ್ನು ನಿಯಂತ್ರಿಸಲು ಸಾಧ್ಯ ವಾಗಲಿಲ್ಲ. ಆದರೆ 9 ವಿಕೆಟ್‌ಗಳು ವೇಗಿಗಳ ಬುಟ್ಟಿಗೆ ಬಿದ್ದವು. ಫಾಹಿಮ್ ಅಶ್ರಫ್ 3 ವಿಕೆಟ್; ಅಬ್ಟಾಸ್, ಆಮಿರ್ ಮತ್ತು ಹಸನ್ ಅಲಿ ತಲಾ 2 ವಿಕೆಟ್ ಉರುಳಿಸಿದರು.
ಬ್ರಾಡ್, ಬೆಸ್ ಭರ್ಜರಿ ದಾಳಿ
ಪಾಕಿಸ್ಥಾನದ ದ್ವಿತೀಯ ಸರದಿಯಲ್ಲಿ ಇಮಾಮ್ ಉಲ್ ಹಕ್ ಸರ್ವಾಧಿಕ 34 ರನ್, ಮೊದಲ ಟೆಸ್ಟ್ ಆಡಿದ ಉಸ್ಮಾನ್ ಸಲಾಹುದ್ದೀನ್ 33 ರನ್ ಮಾಡಿದರು. ಎರಡಂಕೆಯ ಗಡಿ ದಾಟಿದ ಮತ್ತೂಬ್ಬ ಆಟಗಾರ ಅಜರ್ ಅಲಿ (11). ಬೆಸ್ ಮತ್ತು ಬ್ರಾಡ್ ತಲಾ 3 ವಿಕೆಟ್ ಹಾರಿಸಿ ಇಂಗ್ಲೆಂಡ್ ಗೆಲುವನ್ನು ಸುಲಭಗೊಳಿಸಿದರು. ಆ್ಯಂಡರ್ಸನ್ 2 ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-174 ಮತ್ತು 134 (ಇಮಾಮ್ 34, ಸಲಾಹುದ್ದೀನ್ 33, ಬ್ರಾಡ್ 28ಕ್ಕೆ 3, ಬೆಸ್ 33ಕ್ಕೆ 3, ಆ್ಯಂಡರ್ಸನ್ 35ಕ್ಕೆ 2). ಇಂಗ್ಲೆಂಡ್-363.