Advertisement

ಸುಪ್ರೀಂ ತೀರ್ಪು ಗಾಳಿಗೆ ತೂರಿ ಎಂಜಿನಿಯರ್‌ಗಳಿಗೆ ಬಡ್ತಿ?

06:47 AM Feb 14, 2017 | |

ಬೆಂಗಳೂರು: ತೀವ್ರ ಚರ್ಚೆಗೆ ಗ್ರಾಸವಾಗಿರುವ ಬಡ್ತಿ ಮೀಸಲು ಕುರಿತು ಸುಪ್ರೀಂಕೋರ್ಟ್‌ ತೀರ್ಪು ಕೊಟ್ಟ ನಂತರವೂ ಲೋಕೋಪಯೋಗಿ ಇಲಾಖೆಯಲ್ಲಿ 47 ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಬಡ್ತಿ “ಭಾಗ್ಯ’ ನೀಡಿರುವುದು ಬೆಳಕಿಗೆ ಬಂದಿದೆ.

Advertisement

ಫೆ.11ರಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆಯಾದರೂ ಎರಡು ದಿನಗಳ ಹಿಂದಿನ ಫೆ.9ರ ದಿನಾಂಕ ನಮೂದಿಸಿ 47 ಮಂದಿಗೆ
ಕಾರ್ಯಪಾಲಕ ಅಭಿಯಂತರ ಹುದ್ದೆಗೆ ಬಡ್ತಿ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಾರ್ಯಪಾಲಕ ಅಭಿಯಂತರ ಹುದ್ದೆಗೆ ಬಡ್ತಿ ಪಡೆದಿರುವ 47 ಮಂದಿಯ ಪೈಕಿ 13 ಮಂದಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಸೇರಿದ್ದಾರೆ. ಇವರೆಲ್ಲರೂ ಆಯಕಟ್ಟಿನ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಚಿವರೊಬ್ಬರ ಬಳಿ ವಿಶೇಷ ಕರ್ತವ್ಯಾಧಿಕಾರಿಯಾಗಿರುವವರು ಇದ್ದಾರೆ. ಪ್ರಭಾವಿಗಳ ಕೃಪಾಕಟಾಕ್ಷ ಇರುವವರಿಗೆ ಅನುಕೂಲ ಕಲ್ಪಿಸಿಕೊಡಲು ತರಾತುರಿಯಲ್ಲಿ ಬಡ್ತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಡ್ತಿ ಆದೇಶದಲ್ಲಿ ಸುಪ್ರೀಂಕೋರ್ಟ್‌ನ ಅಂತಿಮ ತೀರ್ಪುಗೆ ಒಳಪಟ್ಟಿರುತ್ತದೆ ಎಂಬ ಅಂಶವನ್ನೂ ಸೇರಿಸಲಾಗಿದೆ. ಆದರೆ, ಬಡ್ತಿ ಪ್ರಕ್ರಿಯೆ ಸುಪ್ರೀಂಕೋರ್ಟ್‌ ಆದೇಶಕ್ಕೆ ಸಂಪೂರ್ಣ ವಿರುದ್ಧ ಅಷ್ಟೇ ಅಲ್ಲದೆ ಅವೈಜ್ಞಾನಿಕ ಎಂದು ಹೇಳಲಾಗುತ್ತಿದೆ.

ಲೋಕೋಪಯೋಗಿ ಇಲಾಖೆಯಲ್ಲಿ ಬಡ್ತಿ ಮೀಸಲು ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಶೇ.18, ಇತರೆ ಹಿಂದುಳಿದ ವರ್ಗಕ್ಕೆ ಶೇ.32
ಹಾಗೂ ಸಾಮಾನ್ಯ ವರ್ಗಕ್ಕೆ ಶೇ.50ರಷ್ಟು ಇರಬೇಕು ಎಂಬುದು ನಿಯಮಾವಳಿ. ಆದರೆ, ಪ್ರಸ್ತುತ ಮುಖ್ಯ ಎಂಜಿನಿಯರ್‌ ಹುದ್ದೆಗಳಲ್ಲಿ
ಶೇ.40, ಸೂಪರಿಂಡೆಂಟ್‌ ಹುದ್ದೆಗಳಲ್ಲಿ ಶೇ.47, ಕಾರ್ಯಪಾಲಕ ಹುದ್ದೆಗಳಲ್ಲಿ ಶೇ.75 ರಷ್ಟು ಮೀಸಲಾತಿ ಸಿಕ್ಕಂತಾಗಿದೆ. ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಶೇ.18ರಷ್ಟು ಕೊಡಲು ಯಾವುದೇ ತಕರಾರಿಲ್ಲ. ಆದರೆ, ಅದಕ್ಕೆ ಯಾರ ವಿರೋಧವೂ ಇಲ್ಲ. ಆದರೆ, ಶೇ.75 ರಷ್ಟು ಒಂದೇ ವರ್ಗಕ್ಕೆ ದೊರೆತರೆ ಬೇರೆಯವರಿಗೆ ಅನ್ಯಾಯ ಆಗುವುದಿಲ್ಲವೇ. ಬೇರೆ ಇಲಾಖೆಗಳಲ್ಲೂ ಮೀಸಲಾತಿ ಪ್ರಮಾಣ ಶೇ.200 ರಷ್ಟು ಪ್ರಮಾಣ ತಲುಪಿದೆ. ಇದು ಅನ್ಯಾಯವಲ್ಲವೇ ಎಂಬುದು ಸಾಮಾನ್ಯ ವರ್ಗದ ಅಧಿಕಾರಿಗಳ ಪ್ರಶ್ನೆಯಾಗಿದೆ 
ಎನ್ನಲಾಗಿದೆ.

ಬಡ್ತಿ ಮೀಸಲಾತಿ ಸಂಬಂಧ ಎಂ.ನಾಗರಾಜ್‌ ಹಾಗೂ ಇತರರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ನ್ಯಾಯಾಲಯವು ಫೆ.11ರಂದು ತೀರ್ಪು ನೀಡಿ ಹಿಂದಿನ ಬಡ್ತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ 39 ವರ್ಷಗಳ ಕೋಟಾ ಕಾನೂನು ಅಸಿಂಧುಗೊಳಿಸಿತ್ತು. ಆದರೆ, ಫೆ.9ರಂದು ಲೋಕೋಪಯೋಗಿ ಇಲಾಖೆಯ 47 ಸಹಾಯಕ ಕಾರ್ಯಪಾಲಕರಿಗೆ ಕಾರ್ಯಪಾಲಕ ಅಭಿಯಂತರರಾಗಿ ಬಡ್ತಿ ನೀಡಲಾಗಿತ್ತು. ಈ ಬಡ್ತಿ ನ್ಯಾಯಾಲಯದ ತೀರ್ಪಿನ ನಂತರ ಕೊಟ್ಟಿದ್ದು, ಎರಡು ದಿನಗಳ ಹಿಂದಿನ ದಿನಾಂಕ ನಮೂದಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.  

Advertisement

Udayavani is now on Telegram. Click here to join our channel and stay updated with the latest news.

Next