Advertisement

ಎಂಜಿನಿಯರಿಂಗ್‌ ಕನಸು ನನಸಾದದ್ದು ಸೇನೆಯಲ್ಲಿ !

12:30 AM Feb 02, 2019 | |

ಕಾಪು: ಭವಿಷ್ಯದಲ್ಲಿ ಎಂಜಿನಿಯರ್‌ ಆಗುವ ಕನಸು ಹೊತ್ತು ತಂದೆಯೊಂದಿಗೆ ಜೀವನಾ ಧಾರವಾಗಿದ್ದ ಬಾಣಸಿಗ ವೃತ್ತಿಗೂ ಕೈಜೋಡಿಸುತ್ತ ವಿದ್ಯಾಭ್ಯಾಸ ನಡೆಸಿದ ಯುವಕ ಪ್ರಸ್ತುತ ಭಾರತೀಯ ಸೇನೆಯಲ್ಲಿ ಕ್ಷಿಪಣಿ ವಿಭಾಗದ ನುರಿತ ತಂತ್ರಜ್ಞ.  ಇವರು ಬೆಳಪು ಗ್ರಾಮದ ಪಣಿಯೂರಿನ ಅನಂತರಾಮ ರಾವ್‌.

Advertisement

ಅನಂತರಾಮ ಅವರು ಉಡುಪಿ ತಾಲೂಕಿನ ಕಾಪು ಹೋಬಳಿ ಬೆಳಪು ಗ್ರಾಮದ ಪಣಿಯೂರಿನ ಕುಂಜಗುತ್ತಿನ ಶಕುಂತಳಾ-ವಿಶ್ವನಾಥ ರಾಯರ ಪುತ್ರ. ಮೂವರು ಪುತ್ರರು, ಓರ್ವ ಪುತ್ರಿಯ ರಲ್ಲಿ ಎರಡನೆಯವರಾಗಿ 1977ರಲ್ಲಿ ಜನಿಸಿದರು.1996ರಲ್ಲಿ ಸೇನೆಯಲ್ಲಿ ಎಲೆಕ್ಟ್ರಾನಿಕ್‌ ಮತ್ತು ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿ ಸೇವೆ ಆರಂಭಿ ಸಿದ್ದು, ಪ್ರಸ್ತುತ ರಾಜಸ್ಥಾನದ ಬಿಕಾನೇರ್‌ನಲ್ಲಿ ಕ್ಷಿಪಣಿ ವಿಭಾಗದಲ್ಲಿ ಕರ್ತವ್ಯ ನಿರತರಾಗಿದ್ದಾರೆ.

ಬಡ ಕುಟುಂಬದಲ್ಲಿ ಜನನ
ಬಡತನದ ನಡುವೆಯೂ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕೆಂಬ ತಂದೆಯ ಕನಸನ್ನು ಕಠಿನ ಪರಿಶ್ರಮದಿಂದ ನನಸು ಮಾಡಿದವರು ಅನಂತರಾಮ್‌. ಎಂಜಿನಿಯರ್‌ ಆಗಬೇಕೆಂಬ ಆಸೆ ಚಿಕ್ಕಂದಿನಿಂದಲೇ ಇತ್ತು. ಆದರೆ ಆರ್ಥಿಕ ಪರಿಸ್ಥಿತಿ ಅಡಚಣೆಯಾಗಿತ್ತು. ಹೊಟ್ಟೆಪಾಡು ಮತ್ತು ಶಿಕ್ಷಣಕ್ಕೆ ಹಣ ಹೊಂದಿಸುವುದಕ್ಕಾಗಿ 7ನೇ ತರಗತಿಯಲ್ಲಿರುವಾಗಿನಿಂದಲೇ ತಂದೆಯ ಜತೆಗೆ ಅಡುಗೆ ಕೆಲಸಕ್ಕೆ ಹೋಗುತ್ತಿದ್ದರು.

ಬೆಳೆವ ಸಿರಿ ಮೊಳಕೆಯಲ್ಲಿ ..
ಹೆತ್ತವರ ಸಹಾಯದೊಂದಿಗೆ ಸ್ವ ಪ್ರಯತ್ನದಿಂದ ತಾನೇ ಹಣಕಾಸು ಹೊಂದಾಣಿಕೆ ಮಾಡಿಕೊಂಡು ಪಣಿಯೂರಿನಲ್ಲಿ ಪ್ರಾಥಮಿಕ ವಿದ್ಯಾ ಭ್ಯಾಸ, ಅದಮಾರು ಪೂರ್ಣಪ್ರಜ್ಞ ಕಾಲೇಜಿ ನಲ್ಲಿ ಪ್ರೌಢ ಮತ್ತು ಪದವಿಪೂರ್ವ ಕಾಲೇಜು ವಿದ್ಯಾಭ್ಯಾಸ ವನ್ನು ಪೂರ್ಣಗೊಳಿಸಿದರು. ಚಿಕ್ಕಂದಿನಿಂದಲೂ ಆಟೋಟ ಸ್ಪರ್ಧೆಗಳಲ್ಲಿ ಅವರು ಮುಂದು. ಕಾಲೇಜು ಹಂತದವರೆಗೂ ಹಲವು ಕ್ರೀಡೆಗಳಲ್ಲಿ ಬಹುಮಾನ ಗಳಿಸಿ ಶಾಲೆಗೆ ಮತ್ತು ಮನೆಗೆ ಉತ್ತಮ ಹೆಸರು ತಂದಿದ್ದರು. ವಿದ್ಯಾರ್ಥಿ ಜೀವನದಲ್ಲಿ ಎನ್‌ಸಿಸಿ ಘಟಕದಲ್ಲಿ ಸಕ್ರಿಯರಾಗಿದ್ದರು.

23 ವರ್ಷಗಳಿಂದ ಸುದೀರ್ಘ‌ ಸೇವೆ
ಅನಂತರಾಮ ರಾವ್‌ 23 ವರ್ಷಗಳಿಂದ ಭಾರ ತೀಯ ಸೇನೆಯ ಭಾಗವಾಗಿ ದೇಶ ಸೇವೆಯಲ್ಲಿ ನಿರತರಾಗಿದ್ದಾರೆ. 1999ರ ಕಾರ್ಗಿಲ್‌ ಯುದ್ಧ ಹಾಗೂ 2004-2005ರಲ್ಲಿ  ಸುನಾಮಿ ಅಪ್ಪಳಿಸಿದ ಸಂದರ್ಭ ಅಂಡಮಾನ್‌ ನಿಕೋಬಾರ್‌ನಲ್ಲಿ ಸೇನಾಪಡೆಯೊಂದಿಗೆ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ. ಭಾರತೀಯ ಸೇನೆಯ ಎಲೆ ಕ್ಟ್ರಾನಿಕ್‌ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ (ಇಎಂಇ) ವಿಭಾಗದ ಜತೆ ಸೇರಿ ಯುದ್ಧದ ಟ್ಯಾಂಕರ್‌ (ಟಿ-72, ಟಿ-90, ಅರ್ಜುನ್‌, ಕೆ-9 ವಜ್ರ) ರಚನೆ ಮತ್ತು ಕ್ಷಿಪಣಿ ನಿರ್ಮಾಣ ಕಾರ್ಯದಲ್ಲಿ ನುರಿತ ತಂತ್ರಜ್ಞಾನಿಯಾಗಿ ಕೆಲಸ ಮಾಡಿದ್ದಾರೆ.

Advertisement

9 ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಣೆ
ಸೇನೆಗೆ ಆಯ್ಕೆಯಾದ ಬಳಿಕ ಸಿಕಂದರಾಬಾದ್‌ನಲ್ಲಿ ತರಬೇತಿಯಲ್ಲಿರುವಾಗಲೇ ಎಂಜಿನಿಯ ರಿಂಗ್‌ ಡಿಪ್ಲೊಮಾ ಪಡೆದರು. ಲೇಹ್‌ ಲಡಾಖ್‌, ಅಂಡಮಾನ್‌ – ನಿಕೋಬಾರ್‌, ಪಂಜಾಬ್‌ -ಪಟಿಯಾಲ, ಅಸ್ಸಾಂ, ಉತ್ತರ ಸಿಕ್ಕಿಂ, ಪುಣೆ, ಮಧ್ಯಪ್ರದೇಶದ ಜಬಲ್‌ಪುರಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 

ಈಗ ಎರಡು ತಿಂಗಳುಗಳಿಂದ ರಾಜಸ್ಥಾನದ ಬಿಕಾನೇರ್‌ನಲ್ಲಿ ಕಾರ್ಯ ನಿರ್ವಹಿ ಸುತ್ತಿದ್ದಾರೆ. ಮೈನಸ್‌ 15 ಡಿಗ್ರಿ ಸೆ.ಗಿಂತಲೂ ಕಡಿಮೆ ತಾಪಮಾನವಿರುವ ಲೇಹ್‌ -ಲಡಾಖ್‌ ಮತ್ತು ಉತ್ತರ ಸಿಕ್ಕಿಂನಲ್ಲಿ ಕರ್ತವ್ಯ ನಿರ್ವಹಣೆ ಅತ್ಯಂತ ಕಷ್ಟಕರವಾಗಿತ್ತು ಎನ್ನುತ್ತಾರೆ.

ಮಕ್ಕಳಿಗೆ ದೇಶ ಸೇವೆಯ ಪಾಠ
ತಾಯಿ, ಪತ್ನಿ ಮಾಧವಿ, ಮಗ ವರುಣ್‌ ಹಾಗೂ ಮಗಳು ವೈಷ್ಣವಿ ಇರುವ ಸುಖಸಂಸಾರ ಅನಂತರಾಮ ರಾವ್‌ ಅವರದು. ಪತ್ನಿ ಅದಮಾರು ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅಧ್ಯಾಪಕಿ. ರಜೆಯ ಅವಧಿಯಲ್ಲಿ ಊರಿಗೆ ಬಂದಾಗಲೆಲ್ಲ ಅವಕಾಶ ಮಾಡಿಕೊಂಡು ವಿವಿಧ ಶಾಲಾ – ಕಾಲೇಜುಗಳಿಗೆ ತೆರಳಿ ಮಿಲಿಟರಿ ಜೀವನ ಪದ್ಧತಿಯ ಬಗ್ಗೆ ಮಾಹಿತಿ – ಮಾರ್ಗದರ್ಶನ ನೀಡುವ ಪ್ರಯತ್ನ ಮಾಡುತ್ತಾರೆ. ಉದ್ದೇಶ -ವಿದ್ಯಾರ್ಥಿಗಳಲ್ಲಿ ದೇಶ ಸೇವೆಯ ಅರಿವನ್ನು ಮೂಡಿಸುವುದು. ಈ ಬಾರಿ ಮುದರಂಗಡಿ, ಪಣಿಯೂರು, ಎಲ್ಲೂರು ಮತ್ತು ಅದಮಾರು ಶಾಲೆಗಳಲ್ಲಿ ಮಕ್ಕಳಿಗೆ ದೇಶ ಸೇವೆಯ ಪಾಠ ಮಾಡಿದ್ದಾರೆ.

ಮರೆಯಲಾಗದ ಕ್ಷಣಗಳು
– 1999ರ ಸೆಪ್ಟಂಬರ್‌, ಕಾರ್ಗಿಲ್‌ ಯುದ್ಧದ ಸಂದರ್ಭ. ಎರಡು ವಾರಗಳ ಕಾಲ ನಿರಂತರ ಫೈರಿಂಗ್‌ ಸದ್ದು ಮೊಳಗುತ್ತಿದ್ದುದು, ಆ ಸಂದರ್ಭ ಫ್ರಂಟ್‌ ಲೈನ್‌ನಲ್ಲಿದ್ದವರು ನಮ್ಮನ್ನು ರಕ್ಷಿಸಲು ಪ್ರಯತ್ನಿಸಿದ್ದು, ಹಲವು ಯೋಧರು ವೀರ ಮರಣವನ್ನಪ್ಪಿದ್ದು ರಾವ್‌ ನೆನಪಿನಲ್ಲಿ ಅಮರ.
– 1999ರ ಡಿಸೆಂಬರ್‌. ರಜೆಯಲ್ಲಿ ಮರಳುವಾಗ ಲೇಹ್‌ – ಲಡಾಖ್‌ನಿಂದ ದಿಲ್ಲಿಗೆ 12 ಮಂದಿ ಸೈನಿಕರ ಮೃತದೇಹ ಹೊತ್ತಿದ್ದ ವಿಮಾನದಲ್ಲೇ ಪ್ರಯಾಣಿಸುವ ಅವಕಾಶ ಸಿಕ್ಕಿದ್ದನ್ನು ರಾವ್‌ ಅವರಿಗೆ ಮರೆಯಲಾಗದು.
– 2004ರ ಡಿ. 25. ಅಂಡಮಾನ್‌ – ನಿಕೋಬಾರ್‌ ಭಾಗಕ್ಕೆ ಸುನಾಮಿ ಅಪ್ಪಳಿಸಿದ ದಿನ. ಅಂದು ರಾವ್‌ ಅಲ್ಲೇ ಇದ್ದರು. ಆ ಬಳಿಕ ಒಂದು ವಾರ ಕಾಲ ಮನೆಯವರೊಂದಿಗೆ ಸಂಪರ್ಕ ಕಡಿದು ಹೋಗಿತ್ತು. ಇದರಿಂದ ಮನೆಯವರು ತೀವ್ರ ಆತಂಕಕ್ಕೆ ಒಳಗಾಗಿದ್ದರು.
– 2016ರಲ್ಲಿ ಮಧ್ಯಪ್ರದೇಶದ ಜಬಲ್ಪುರದ ಆರ್ಮಿ ಕ್ಯಾಂಪ್‌ನ ಟ್ಯಾಂಕ್‌ ಮತ್ತು ಗನ್‌ ನವೀಕರಣ ಶಿಬಿರದಲ್ಲಿದ್ದಾಗ ತಂದೆ ನಿಧನಹೊಂದಿದರು. ಎರಡನೇ ದಿನವಷ್ಟೇ ಮನೆ ಸೇರಲು ಸಾಧ್ಯವಾಯಿತು. ಅವರ ಅಂತಿಮ ದರ್ಶನ ಪಡೆಯಲಾಗದ್ದು ಸಹಿಸಲಸಾಧ್ಯವಾದ ನೋವು.

ಯುವಕರಿಗೆ ಸೇನೆಗೆ 
ಸೇರಲು ಉತ್ತೇಜನ ನೀಡುವೆ

ನಾನು ಸೇನೆಯ ಭಾಗವಾಗಿರುವುದಕ್ಕೆ ತಾಯಿ,ಪತ್ನಿ ಮತ್ತು  ಮಕ್ಕಳು ಹೆಮ್ಮೆ ಪಟ್ಟುಕೊಳ್ಳುತ್ತಿದ್ದಾರೆ. ದೇಶ ಸೇವೆಯೇ ನನ್ನ ಉಸಿರು. ಇಂದಿನ ಯುವ ಜನಾಂಗವು ಮಿಲಿಟರಿಯ ಬಗ್ಗೆ ವಿಶೇಷ ಆಸಕ್ತಿ ಮೂಡಿಸಿಕೊಳ್ಳಬೇಕು. ಎಂಜಿನಿಯರ್‌, ಡಾಕ್ಟರ್‌, ಪ್ರೊಫೆಸರ್‌ ಅಥವಾ ಇನ್ಯಾವುದೇ ವೃತ್ತಿಯ ಬಗ್ಗೆ ಆಸಕ್ತಿಯುಳ್ಳವರು ಕೂಡ ತಮ್ಮ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಭೂ, ವಾಯು, ನೌಕಾಪಡೆಗಳಲ್ಲಿ ಉತ್ತಮ ಹುದ್ದೆ ಪಡೆಯಲು ಅವಕಾಶವಿದೆ. ಉತ್ತಮ ಆರೋಗ್ಯ ಮತ್ತು ದೈಹಿಕ ಕ್ಷಮತೆ ಹೊಂದಿರುವ ಯುವ ಸಮುದಾಯವು ಯಾವುದೇ ಒತ್ತಡವಿಲ್ಲದೆ ಸೇನೆ ಸೇರಿ ಬೇಕಾದ ಹುದ್ದೆಯನ್ನು ಪಡೆಯಬಹುದು.  
– ಅನಂತರಾಮ ರಾವ್‌

ಸೇನೆಯ ಸೇವೆಗೆ ಸೆಲ್ಯೂಟ್‌
ನಾನು ಆರ್ಮಿ ಕುಟುಂಬದ ಸದಸ್ಯೆಯಾಗಿರುವು ದಕ್ಕೆ ಹೆಮ್ಮೆಯಿದೆ. ಯೋಧರನ್ನು ಮದುವೆಯಾಗು ವುದಕ್ಕೆ ಹುಡುಗಿಯರು ಹೆದರುತ್ತಾರೆ, ಹೆಣ್ಣು ಕೊಡಲು ಹೆತ್ತವರೂ ಹಿಂಜರಿಯುತ್ತಾರೆ. ನಮ್ಮಲ್ಲಿ ಮಾತ್ರ ಹಾಗಿಲ್ಲ. ಮಕ್ಕಳು ಬಯಸಿದಲ್ಲಿ  ಅವರನ್ನೂ ಮಿಲಿಟರಿಗೆ ಸೇರಿಸುವೆ
– ಮಾಧವಿ ರಾವ್‌, 
ಅನಂತರಾಮ್‌ ರಾವ್‌ ಅವರ ಪತ್ನಿ

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next