Advertisement

ಕೃಷಿಯಲ್ಲಿ ಖುಷಿ ಕಂಡ ಎಂಜಿನಿಯರ್‌ 

01:14 PM Sep 25, 2017 | |

ಇವರು ಮನಸ್ಸು ಮಾಡಿದ್ದರೆ ಕೈತುಂಬ ಸಂಬಳ ಪಡೆಯಬಹುದಿತ್ತು. ಅಂಥ ಉದ್ಯೋಗವಿತ್ತು. ಆ ಉದ್ಯೋಗ ಕಾರಣದಿಂದಲೇ ನಗರದಲ್ಲಿದ್ದುಕೊಂಡು ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ ಇವರನ್ನು ಸೆಳೆದದ್ದು ಮಣ್ಣಿನ ವಾಸನೆ. ಅದಕ್ಕೆಂದೇ ಕೃಷಿಯಲ್ಲಿ ಖುಷಿ ಕಂಡುಕೊಂಡವರು ಬೆಳಗಾವಿ ಜಿಲ್ಲೆ ರಾಮದುರ್ಗದ ಚಿಕ್ಕೊಪ್ಪ ಕೆ.ಎಸ್‌. ಗ್ರಾಮದ ರವಿ ಭೀಮಪ್ಪ ವಾಸನದ. ಕೃಷಿಯಲ್ಲೇ ಖುಷಿ ಕಾಣುವ ಆಸೆಯಿಂದ ಅವರು ಸಿವಿಲ್‌ ಎಂಜನಿಯರ್‌ ಸೇವೆಗೆ ಗುಡ್‌ಬೈ ಹೇಳಿ ಹೊಲದತ್ತ ಹೆಜ್ಜೆ ಹಾಕಿದರು. ತೋಟಗಾರಿಕೆಯಲ್ಲಿ ಮಿಶ್ರ ಬೇಸಾಯ ಪದ್ಧತಿ ಅನುಸರಿಸಿ ಒಂದೇ ತೋಟದಲ್ಲಿ ಬಹು ಬೆಳೆಗಳನ್ನು ಬೆಳೆದು ಕೈತುಂಬಾ ಸಂಪಾದಿಸುವ ಇವರು ಗರಸು ಭೂಮಿಯಲ್ಲಿ ಬಹುಬೆಳೆ ಬೆಳೆದು ಹೊಸ ಪ್ರಯೋಗಕ್ಕೆ ನಾಂದಿ ಹಾಡಿದ್ದಾರೆ.

Advertisement

ಮಿಶ್ರ ಬೇಸಾಯ
ಜಲಾನಯನ ಇಲಾಖೆಯಿಂದ ರವಿ ಸೂಕ್ತ ಮಾರ್ಗದರ್ಶನ ಪಡೆದಿದ್ದಾರೆ.  47 ಎಕರೆ ಗರಸು ಜಮೀನಿನ 15 ಎಕರೆಯಲ್ಲಿ 5 ಎಕರೆಗೊಂದರಂತೆ 3 ಒಡ್ಡುಗಳನ್ನು ನಿರ್ಮಿಸಿ ಭೂಮಿಯ ಫಲವತ್ತತೆ ವೃದ್ಧಿಸಿದ್ದಾರೆ. 15 ಎಕರೆ ಜಿ-9 ಬಾಳೆ ಹಾಗೂ 3 ಎಕರೆ ಜವಾರಿ ಬಾಳೆ ಸೇರಿ ಒಟ್ಟು 18 ಎಕರೆ ಬಾಳೆ ಬೆಳೆದಿದ್ದಾರೆ. ಅದರಲ್ಲಿ ತಾಳೆ ಬೆಳೆ, ಸಿತಾರ ಮೆಣಸಿನ ಬೆಳೆ, ಈರುಳ್ಳಿ ಬೆಳೆದು ಅಂತರ ಬೇಸಾಯದಲ್ಲಿ ಹೆಚ್ಚಿನ ಲಾಭ ಪಡೆದಿದ್ದಾರೆ.

ಫಲ ವೈವಿಧ್ಯ
ಜಮೀನಿನ ಎಲ್ಲ ಬದುಗಳಲ್ಲಿ ಸಾಂದ್ರ ಬೇಸಾಯದಂತೆ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. 710 ಕೇಸರಿ ಮಾವು, 50ಕ್ಕೂ ಅ ಧಿಕ ತಿಪಟೂರು ತೆಂಗಿನ ಗಿಡ, 75 ಪೇರಲು, 25ಕ್ಕೂ ಅಧಿ ಕ ಜವಾರಿ ಲಿಂಬೆ, ಚಿಕ್ಕು (ಕ್ರಿಕೆಟ್‌ ಬಾಲ್‌), ನೆಲ್ಲಿ, ಮೋಸಂಬಿ, ಗೋಡಂಬಿ, ಕಿತ್ತಳೆ, ಸೇಬು ಮಾದರಿ ಬಾರಿ, ಕವಳಿ, ಸೀತಾಫಲ(ಬಾಲಾನಗರ), ದಾಳಿಂಬೆ, ಕಂಚಿಕಾಯಿ, ಕರಿಬೇವು ಸೇರಿದಂತೆ ವಿವಿಧ ಜಾತಿಯ ಹಣ್ಣಿನ ಗಿಡಗಳ ಜೊತೆಗೆ ಜನಿಫರ್‌ ಶೋಗಿಡ, ದಾಸವಾಳ, ಮಲ್ಲಿಗೆ, ಸಂಪಿಗೆ, ಗುಲಾಬಿ ಹೂವಿನ ಗಿಡಗಳನ್ನು  ಬೆಳೆಸುತ್ತಿರುವುದು ಕಾಡು ಗಿಡಗಳಾದ ಸುಬಾಬುಲ್‌, ಗೊಬ್ಬರ ಗಿಡ, ಬೇವಿನಮರವನ್ನು ಬೆಳೆಸಿದ್ದಾರೆ.

ಒಟ್ಟು 25 ಎಕರೆ ಜಮೀನಲ್ಲಿ 1100 ತಾಳೆ ಗಿಡಗಳನ್ನು ಬೆಳೆಸುತ್ತಿದ್ದಾರೆ. ಆಮೂಲಕ ಬೆಳಗಾವಿಯಲ್ಲಿಯೇ ಅತಿ ಹೆಚ್ಚು ತಾಳೆ ಬೆಳೆದ ಕೀರ್ತಿಗೆ ಪಾತ್ರರಾಗಿದ್ದಾರೆ. ತಾಳೆ ಬೆಳೆ 5 ವರ್ಷಕ್ಕೆ ಫಲ ನೀಡುತ್ತಿದೆ. ನಾಟಿ ಮಾಡಿ 1.5 ವರ್ಷವಾಗಿದ್ದು.  ಪ್ರತಿ ತಿಂಗಳಿಗೆ ಸುಮಾರು 2.30 ಲಕ್ಷ ರೂ. ಆದಾಯವಂತೆ. 

ಹನಿ ನೀರಾವರಿ ಬೇಸಾಯ
ಸದ್ಯ ಸಾಗುವಳಿಯಾಗುತ್ತಿರುವ 25 ಎಕರೆ ಜಮೀನಿನಲ್ಲಿ 2 ಬೋರ್‌ವೆಲ್‌ ಕೊರೆಸಲಾಗಿದ್ದು, ಎರಡರಲ್ಲೂ 3.5 ಇಂಚಿನಷ್ಟು ನೀರು ಲಭ್ಯವಾಗಿದೆ. ಎರಡು ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಸಮಗ್ರ ಹ‌ನಿ ನೀರಾವರಿ ಪದ್ಧತಿ ಅನುಸರಿಸುತ್ತಿದ್ದಾರೆ. ಸರ್ಕಾರಿ ನೌಕರಿಯಿಂದ ಕೇವಲ ಒಂದು ಕುಟುಂಬದ ಅಭಿವೃದ್ಧಿ ಮಾತ್ರ ಸಾಧ್ಯ. ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಅಣ್ಣಾ ಹಜಾರೆ ಅವರನ್ನು ಪ್ರೇರಣೆಯಾಗಿಟ್ಟುಕೊಂಡಿದ್ದೇನೆ. ಮಿಶ್ರಬೇಸಾಯ ಮಾಡುವ ಸಾಹಸಕ್ಕೆ ಕೈಹಾಕಿ, ಸತತ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದೇನೆ. ನಂಬಿದರೆ ಭೂಮಾತೆ ಎಂದೂ ಕೈಬಿಡುವುದಿಲ್ಲ ಎಂಬುದಕ್ಕೆ ನಾನೇ ಸಾಕ್ಷಿ ಎನ್ನುತ್ತಾರೆ ರವಿ. 

Advertisement

ಈರನಗೌಡ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next