ಸಂತೆಮರಹಳ್ಳಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಲ್ಲಿ ಯಳಂದೂರು ತಾಲೂಕಿನಲ್ಲಿರುವ ಎಂಜಿನಿಯರ್‌ಗಳಾದ ಸಲ್ಮಾನ್‌ಖಾನ್, ನಿಂಗರಾಜು, ಆದರ್ಶ್ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದು ಇವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಶಾಸಕ ಎನ್.ಮಹೇಶ್‌ಗೆ ಯರಗಂಬಳ್ಳಿಯ ಕೆಲ ಸಾರ್ವಜನಿಕರು ಒತ್ತಾ ಯಿಸಿದ್ದಾರೆ. ಯರಗಂಬಳ್ಳಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಈ ಬಗ್ಗೆ ಲಿಖೀತ ದೂರು ಸಲ್ಲಿಸಲಾಯಿತು.
ಎಲ್ಲೆಡೆ ಎಂಜಿನಿಯರ್‌ಗಳ ಕೈವಾಡ: ತಾಲೂಕಿನಲ್ಲಿ ನಡೆಯುತ್ತಿರುವ ನರೇಗಾ ಯೋಜನೆಯ ರಸ್ತೆ, ಕಾಲುವೆ, ಚರಂಡಿ, ಕೆರೆಕಟ್ಟೆಗಳ ಪುನಶ್ಚೇತನದ ಸೇರಿದಂತೆ ಅನೇಕ ಕಾಮಗಾರಿಗಳು ನಡೆಯುತ್ತಿವೆ. ಇದರಲ್ಲಿ ಕೆಲ ಎಂಜಿನಿಯರ್‌ಗಳು ಪಾಲುದಾರರಾಗಿ ಕೆಲಸ ಮಾಡಿಸುತ್ತಿದ್ದಾರೆ. ಅಲ್ಲದೆ ಕೆಲಸ ನಡೆಯದಿದ್ದರೂ ಬಿಲ್ ಹಾಗೂ ಕಳಪೆ ಕಾಮಗಾರಿಗೂ ಹಣ ಪಾವತಿಸಲಾಗಿದೆ ಎಂದು ದೂರಿದರು.
ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದರೂ ಕ್ರಮ ವಹಿಸುವುದಿಲ್ಲ. ಇವರೂ ಕೂಡ ಇದರಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದು ಗ್ರಾಮಸ್ಥರು ದೂರಿದರು. ಈ ಬಗ್ಗೆ ಶಾಸಕ ಎನ್. ಮಹೇಶ್ ಇಒ ಬಿ.ಎಸ್. ರಾಜು ಅವರಿಗೆ ಪ್ರತಿ ಸಭೆಯಲ್ಲೂ ಇವರು ಭಾಗವಹಿಸಬೇಕು. ಈ ಬಗ್ಗೆ ತನಿಖೆಯಾಗಬೇಕು. ತಪ್ಪು ಕಂಡುಬಂದಲ್ಲಿ ಇವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಗಣಿಗಾರಿಕೆ ಅಕ್ರಮ: ಯರಗಂಬಳ್ಳಿ ಗ್ರಾಮದ ಸುತ್ತ ಕರಿಕಲ್ಲಿನ ಗಣಿಗಾರಿಕೆ ನಡೆಯುತ್ತಿದೆ. ಶಾಲೆಯ ಅನತಿ ದೂರ, ವಾಸವಾಗಿರುವ ಮನೆಗಳ ಬಳಿ, ಕಾಲುವೆಯ ಪಕ್ಕದಲ್ಲೇ ಗಣಿಗಾರಿಕೆ ನಡೆಯುತ್ತಿದೆ. ನಿಯಮ ಮೀರಿ ರಾತ್ರಿ ವೇಳೆ ನ್ಪೋಟಕ ಬಳಕೆಯಾಗುತ್ತಿದೆ. ಅತಿ ಆಳವಾಗಿರುವುದರಿಂದ ನೀರು ಜಿನುಗುತ್ತಿದ್ದು ಅಂತರ್ಜಲ ಕಡಿಮೆಯಾಗಿ ಮುಂದೆ ಅಪಾರ ಪ್ರಮಾಣದ ಹಾನಿಯಾಗುವ ಸಂದರ್ಭವೂ ಇದೆ. ಮನೆಗಳೆಲ್ಲವೂ ಬಿರುಕು ಬಿಟ್ಟಿದೆ.
ಇಲ್ಲಿ ಕಾನೂನಿನ ಯಾವ ಪಾಲನೆಯೂ ಆಗುತ್ತಿಲ್ಲ. ಈ ಬಗ್ಗೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ, ಗಣಿ ಭೂ ವಿಜ್ಞಾನ ಇಲಾಖೆಗೆ ಮಾಹಿತಿ ಕೇಳಿದ್ದರೂ ಸುಳ್ಳು ದಾಖಲೆ ಮಾಹಿತಿ ನೀಡುತ್ತಿದ್ದಾರೆ. ಈ ಬಗ್ಗೆ ಶಿಸ್ತು ಕ್ರಮ ವಹಿಸಬೇಕು. ಗಣಿಗಾರಿಕೆ ನಿಲ್ಲಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಇಲಾಖೆ ಸೇರಿದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಶಾಸಕರು ಸೂಚನೆ ನೀಡಿದರು.
ಕಾಮಗಾರಿ ಮಾಡದ ನೀರಾವರಿ ಇಲಾಖೆ: ಕಾವೇರಿ ನೀರಾವರಿ ನಿಗಮದಿಂದ ಕಬಿನಿ ಕಾಲುವೆ ದುರಸ್ತಿ ಕಾಮಗಾರಿ ಅರ್ಧಂಬರ್ಧ ಆಗಿದೆ. ಅಲ್ಲದೆ ಕೆಲವು ಉಪ ಕಾಲುವೆಗಳಲ್ಲಿ ಕೆಲಸ ಮಾಡದೆ ಬಿಲ್ ಪಾವತಿ ಮಾಡಿಕೊಳ್ಳಲಾಗಿದೆ. ಇಲ್ಲಿ ಲಕ್ಷಾಂತರ ರೂ. ಅವ್ಯಹಾರ ನಡೆದಿದೆ ಎಂದು ಗ್ರಾಮಸ್ಥರು ದೂರಿದರು. ಈ ಬಗ್ಗೆ ತನಿಖೆ ನಡೆಸಿ, ಕಾಮಗಾರಿ ಪರಿಶೀಲಿಸಿ ಸಮಗ್ರ ವರದಿನೀಡುವಂತೆ ಸಂಬಂಧಪಟ್ಟ ಇಲಾಖೆಯ ಎಇಇ ಗೆ ಶಾಸಕರು ಸೂಚನೆ ನೀಡಿದರು.
ಗ್ರಾಪಂ ಅಧ್ಯಕ್ಷೆ ದಾಕ್ಷಾಯಿಣಿ ಉಪಾಧ್ಯಕ್ಷ ಸಿದ್ದರಾಜು, ಸದಸ್ಯರಾದ ಪದ್ಮಾವತಿ, ನಾಗರಾಜು, ನಂಜುಂಡಸ್ವಾಮಿ, ಮಂಜುನಾಥ, ರೂಪಶ್ರೀ, ಉಷಾ, ಶಿವಮ್ಮ, ಮಂಜುಳಾ ತಹಶೀಲ್ದಾರ್ ವರ್ಷಾ, ಇಒ ಬಿ.ಎಸ್.ರಾಜು, ಪಿಡಿಒ ವೆಂಕಟಾಚಲಮೂರ್ತಿ ಕೆಎಂಎಫ್ ಎಂಡಿ ಮಲ್ಲಿಕಾರ್ಜುನ, ಎಇಇ ಮಹಾದೇವಸ್ವಾಮಿ ಇದ್ದರು.