ಉಡುಪಿ: ಜನಿವಾರ (ಯಜ್ಞೋಪವೀತ) ಎಂಬುದು ಬ್ರಹ್ಮಗ್ರಂಥಿ ಎಂಬ ಗಂಟಿನಿಂದ ಕೂಡಿಸಲ್ಪಟ್ಟ ದಾರ. ನೋಡಲು ಸಾಧಾರಣ ನೂಲಿನಂತೆ ಕಾಣುವ ಇದರ ಹಿಂದಿನ ಶ್ರಮ ಮಾತ್ರ ಅಪಾರ. ಆ. 15ರಂದು ಯಜುರುಪಾಕರ್ಮದಂದು ವಾರ್ಷಿಕವಾಗಿ ಜನಿವಾರ ಬದಲಾಯಿಸುವ ಕ್ರಮ ಚಾಲ್ತಿಯಲ್ಲಿದೆ. ತೆಂಕನಿಡಿಯೂರು ಶಾಲೆಯ ಬಳಿ ಕಳೆದ 5 ತಲೆಮಾರುಗಳಿಂದಲೂ ಪೈ ಕುಟುಂಬಸ್ಥರು ಜನಿವಾರ ತಯಾರಿ ಕಾಯಕದಲ್ಲಿ ತೊಡಗಿದ್ದಾರೆ. ಪ್ರಸ್ತುತ ವಾಸುದೇವ ಪೈ ಹಾಗೂ ಸಹೋದರರು ಈ ಕಾಯಕವನ್ನೇ ಮುಂದುವರಿಸಿದ್ದಾರೆ.
1 ರೂ.ಗೆ ಮಾರಾಟ
ಚರಕಗಳ ಸಹಾಯದಿಂದ ಜನಿವಾರ ತಯಾರಿಕೆ ಯಲ್ಲಿ ಇವರು ತೊಡಗಿಸಿಕೊಂಡಿದ್ದಾರೆ. ದಿನ ವೊಂದಕ್ಕೆ ಸುಮಾರು 300ರಷ್ಟು ಜನಿವಾರಗಳನ್ನು ಉತ್ಪಾದಿಸುತ್ತಾರೆ. ಒಂದು ಜನಿವಾರಕ್ಕೆ ಸುಮಾರು 70ಪೈಸೆಯಷ್ಟು ವೆಚ್ಚ ಬೀಳುತ್ತದೆ. 1 ರೂಪಾಯಿಗೆ ಇವರು ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಾರೆ. ವ್ಯಾಪಾರಸ್ಥರು 3.20 ರೂ.ನಲ್ಲಿ ಮಾರಾಟ ಮಾಡುತ್ತಾರೆ.
ಬೇಕಿದೆ ಸರಕಾರದ ಪ್ರೋತ್ಸಾಹ
ಈ ಕೈಗಾರಿಕೆ ಇಂದು ಅವನತಿಯತ್ತ ಸಾಗುತ್ತಿದೆ. 1991ರಲ್ಲಿ 6 ಎಳೆಯ ಜನಿವಾರಕ್ಕೆ 15 ಪೈಸೆ ಹಾಗೂ 9 ಎಳೆಯ ಜನಿವಾರಕ್ಕೆ 24 ಪೈಸೆ ದರವಿತ್ತು. ಈಗ ನೂಲಿನ ದರ ಹೆಚ್ಚಳವಾದ ಕಾರಣ ಜನವಾರದ ದರವೂ ಅಧಿಕವಾಗಿದೆ. ಈ ಕಾಯಕವನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಇಂತಹವರನ್ನು ಗುರುತಿಸುವ ಕೆಲಸ ಮಾಡಬೇಕಿದೆ. ಪ್ರಸ್ತುತ ಇವರು ಮಾಡಿದ ಜನಿವಾರಗಳು ಉಡುಪಿ, ಮಂಗಳೂರು ಮಾತ್ರವಲ್ಲದೆ ಸುಳ್ಯ, ಪುತ್ತೂರು, ಮೂಡುಬಿದಿರೆ, ಹೊನ್ನಾವರ ಭಾಗ ಗಳಿಗೂ ವ್ಯಾಪಾರಸ್ಥರ ಮೂಲಕ ತಲುಪುತ್ತಿವೆ. ದೊಡ್ಡ ದೊಡ್ಡ ಯಂತ್ರಗಳು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತಿರುವ ಈ ಕಾಲಘಟ್ಟದಲ್ಲಿ ಸಾಂಪ್ರದಾಯಿಕ ರೀತಿಯ ಉತ್ಪಾದನೆ ಕಂಡು ಬರುವುದೂ ವಿರಳ. ನಶಿಸುತ್ತಿರುವ ಈ ಕೈಗಾರಿಕೆಯನ್ನು ಪ್ರೋತ್ಸಾಹಿಸುವುದರಿಂದ ಜನಿವಾರದ ನೈಜತೆಯೂ ಉಳಿಯಲು ಸಾಧ್ಯವಾಗುತ್ತದೆ.
ಗಾಯತ್ರಿ ಮಂತ್ರಪೂರ್ವಕ ಧಾರಣೆ
ಜನಿವಾರದ ಧಾರಣೆ ಗಾಯತ್ರಿ ಮಂತ್ರದಿಂದ ಆರಂಭವಾಗುತ್ತದೆ. ಗಾಯತ್ರಿ ಮಂತ್ರ ಹಾಗೂ ಜನಿವಾರದ ಸಮ್ಮಿಲನವೇ ದ್ವಿಜತ್ವ. ಜನಿವಾರದಲ್ಲಿ ಮೂರು ಎಳೆಗಳಿರುತ್ತವೆ. ಗಾಯತ್ರಿ ಮಂತ್ರದಲ್ಲೂ ಮೂರು ಚರಣಗಳಿರುತ್ತವೆ.
ದೀರ್ಘಾಯುಷ್ಯದ ನಂಬಿಕೆ
ಜನಿವಾರ ಧರಿಸಿದವರು ಹಲವಾರು ನಿಯಮ ಗಳನ್ನು ಪಾಲಿಸಬೇಕಾಗುತ್ತದೆ. ಅದು ವ್ಯಕ್ತಿಯನ್ನು ಸಾತ್ವಿಕ ಜೀವನದತ್ತ ಕೊಂಡೊಯ್ಯುತ್ತದೆ ಎಂಬ ನಂಬಿಕೆಯಿದೆ.
ಜನಿವಾರ ಪವಿತ್ರ ದಾರ
ಜನಿವಾರವನ್ನು ಯಾವುದೋ ನೂಲಿನಿಂದ ತಯಾರಿಸುವಂತಿಲ್ಲ. ಏಕೆಂದರೆ ಇದರ ಪ್ರತಿ ನೂಲಿಗೂ ಧಾರ್ಮಿಕ ಮಹತ್ವವಿದೆ. ಪ್ರಮುಖವಾಗಿ ಜನಿವಾರದಲ್ಲಿ ಮೂರು ಎಳೆಗಳಿರುತ್ತವೆ. ಅವಿವಾಹಿತರು ಒಂದು ಜನಿವಾರ ಧರಿಸಬೇಕು. ವಿವಾಹಿತರು ಎರಡು ಎಳೆಗಳ ಜನಿವಾರವನ್ನೂ, ದಂಪತಿಗಳಿಗೆ ಸಂತಾನಭಾಗ್ಯ ಪ್ರಾಪ್ತವಾದ ಬಳಿಕ ಮೂರು ಎಳೆಗಳ ಜನಿವಾರವನ್ನು ಧರಿಸುವುದು ಸಂಪ್ರದಾಯವಾಗಿದೆ.