Advertisement

ಮಹಾರಾಷ್ಟ್ರ ಬ್ಯಾಂಕ್ ಹಗರಣ: ಶರದ್ ಪವಾರ್ ವಿರುದ್ಧ ಪ್ರಕರಣ ದಾಖಲಿಸಿದ ಜಾರಿ ನಿರ್ದೇಶನಾಲಯ

09:53 AM Sep 25, 2019 | Hari Prasad |

ನವದೆಹಲಿ: ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ನಲ್ಲಿನ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಮುಖಂಡ ಶರದ್ ಪವಾರ್ ಮತ್ತು ಅವರ ಸೋದರಳಿಯ ಮಹಾರಾಷ್ಟ್ರದ ಮಾಜೀ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಹಣಕಾಸು ಅವ್ಯವಹಾರ ಪ್ರಕರಣವನ್ನು ದಾಖಲಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿರುವುದು ಎನ್.ಸಿ.ಪಿ.ಗೆ ಬಹುದೊಡ್ಡ ಹೊಡೆತ ಎಂದೇ ವಿಶ್ಲೇಷಿಸಲಾಗುತ್ತಿದೆ.

Advertisement

ಮುಂಬಯಿ ಹೈಕೋರ್ಟ್ ನಿರ್ದೇಶನದಂತೆ ಮುಂಬಯಿ ಪೊಲೀಸರು ಅಜಿತ್ ಪವಾರ್ ಮತ್ತು ಆಡಳಿತ ಮಂಡಳಿತ ಇತರೇ ಸದಸ್ಯರ ವಿರುದ್ಧ ಕಳೆದ ತಿಂಗಳಷ್ಟೇ ಎಫ್.ಐ.ಆರ್. ಒಂದನ್ನು ದಾಖಲಿಸಿದ್ದರು.

ಪೆಸೆಂಟ್ಸ್ ಆ್ಯಂಡ್ ವರ್ಕರ್ಸ್ ಪಕ್ಷದ ನಾಯಕ ಜಯಂತ್ ಪಾಟೀಲ್ ಮತ್ತು ರಾಜ್ಯದ 34 ಜಿಲ್ಲೆಗಳಲ್ಲಿನ ಸೂಪರ್ ಸೀಡ್ ಗೆ ಒಳಗಾಗಿರುವ ಬ್ಯಾಂಕ್ ಶಾಖೆಯ ಅಧಿಕಾರಿಗಳು ಈ ಹಗರಣದ ಇತರೇ ಆರೋಪಿಗಳಾಗಿದ್ದಾರೆ. ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ಗೆ 2007 ರಿಂದ 2011ರ ಅವಧಿಯಲ್ಲಿ ಸುಮಾರು 1,000 ಕೋಟಿ ರೂಪಾಯಿಗಳ ನಷ್ಟವನ್ನು ಉಂಟುಮಾಡಿರುವ ಆರೋಪ ಇವರೆಲ್ಲರ ಮೇಲಿದೆ.

ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಅಸಮರ್ಪಕವಾಗಿ ಸಾಲ ಮಂಜೂರು ಮಾಡಿರುವ ಮತ್ತು ಹಣಕಾಸು ಸ್ಥಿತಿ ಉತ್ತಮವಿಲ್ಲದಿದ್ದರೂ ಸಾಲ ಮಂಜೂರು ಮಾಡಿರುವ ಆರೋಪಗಳು ಈ ಹಗರಣದಲ್ಲಿ ಬಲವಾಗಿ ಕೇಳಿಬಂದಿದ್ದವು. ಇಷ್ಟು ಮಾತ್ರವಲ್ಲದೇ ಹಲವು ಪ್ರಕರಣಗಳಲ್ಲಿ ಯಾವುದೇ ಭದ್ರತೆ ಇಲ್ಲದೆ ಸಾಲ ನೀಡಿರುವ ಆರೋಪವೂ ಈ ಹಗರಣದಲ್ಲಿ ಕೇಳಿಬಂದಿತ್ತು. ಇನ್ನು ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಕೆಲವೊಂದು ನಿರ್ಧಿಷ್ಟ ರಾಜಕಾರಣಿಗಳ ಸಂಬಂಧಿಕರಿಗೆ ಮಾರಾಟ ಮಾಡಿರುವ ಕುರಿತಾಗಿಯೂ ಬಲವಾದ ಆರೋಪಗಳು ಕೇಳಿಬಂದಿದ್ದವು.

ಈ ವಿಚಾರಕ್ಕೆ ಸಂಬಂಧಿಸಿದಂತೆ ನಬಾರ್ಡ್ ಹಣಕಾಸು ಸಂಸ್ಥೆಯು ಬ್ಯಾಂಕಿನ ವ್ಯವಹಾರಗಳ ತಪಾಸಣೆಯನ್ನೂ ಸಹ ನಡೆಸಿತ್ತು ಮತ್ತು ಹಲವಾರು ಬ್ಯಾಂಕಿಂಗ್ ಕಾನೂನುಗಳನ್ನು ಮತ್ತು ಆರ್.ಬಿ.ಐ. ನಿರ್ದೇಶನಗಳನ್ನು ಗಾಳಿಗೆ ತೂರಿರುವ ಸಂಗತಿಗಳು ಸದರಿ ತಪಾಸಣೆಯ ಸಂದರ್ಭದಲ್ಲಿ ಬಯಲಾಗಿತ್ತು.

Advertisement

ಸ್ಥಳೀಯ ಹೋರಾಟಗಾರ ಸುರೀಂದರ್ ಅರೋರಾ ಎಂಬವರು 2015ರಲ್ಲಿ ಆರ್ಥಿಕ ಅಪರಾಧಗಳ ಘಟಕಕ್ಕೆ ಈ ಸಂಬಂಧವಾಗಿ ದೂರನ್ನು ನೀಡಿದ್ದರು ಮತ್ತು ತಪ್ಪಿತಸ್ಥರ ವಿರುದ್ಧ ಎಫ್.ಐ.ಆರ್. ದಾಖಲಿಸಲು ನಿರ್ದೇಶಿಸುವಂತೆ ಕೋರಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ಇತ್ತ ನಬಾರ್ಡ್ ನೀಡಿದ್ದ ವರದಿಯನ್ನು ಆಧರಿಸಿ ಭಾರತೀಯ ರಿಸರ್ವ್ ಬ್ಯಾಂಕ್ 2011ರಲ್ಲಿ ಎಂ.ಎಸ್.ಸಿ.ಬಿ. ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡುವಂತೆ ಮತ್ತು ಬ್ಯಾಂಕ್ ವ್ಯವಹಾರಗಳನ್ನು ನೋಡಿಕೊಳ್ಳಲು ಆಡಳಿತಾಧಿಕಾರುಯನ್ನು ನೇಮಿಸುವಂತೆ ನಿರ್ದೇಶನ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next