ಮುಂಬಯಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರನ್ನು ಜಾರಿ ನಿರ್ದೇಶನಾಲಯ ಸುಮಾರು 13 ಗಂಟೆಗಳಿಗೂ ಅಧಿಕ ಕಾಲ ವಿಚಾರಣೆಗೊಳಪಡಿಸಿದ ನಂತರ ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ;ಸಿಂದಗಿ: ಬಿಜೆಪಿ ಕಾರ್ಯಕರ್ತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ದೇಶ್ ಮುಖ್ 100 ಕೋಟಿ ರೂಪಾಯಿ ಲಂಚ ಕೇಳಿರುವುದಾಗಿ ಮುಂಬಯಿ ಮಾಜಿ ಪೊಲೀಸ್ ಕಮಿಷನರ್ ಪರಂಬೀರ್ ಸಿಂಗ್ ಆರೋಪಿಸಿದ್ದರು. ಈ ಬಗ್ಗೆ ಇ.ಡಿ. ಪಿಎಂಎಲ್ ಎ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸಮನ್ಸ್ ಜಾರಿಗೊಳಿಸಿತ್ತು. ಈ ಆರೋಪದ ನಂತರ ದೇಶ್ ಮುಖ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಕಾನೂನನ್ನು ಗೌರವಿಸುವುದಾಗಿ ಹೇಳಿದ್ದ ಎನ್ ಸಿಪಿ ಮುಖಂಡ ಅನಿಲ್ ದೇಶ್ ಮುಖ್ (72) ಸೋಮವಾರ ಮಧ್ಯಾಹ್ನ ಜಾರಿ ನಿರ್ದೇಶನಾಲಯ ಕಚೇರಿಗೆ ಆಗಮಿಸಿದ್ದರು. ಇ.ಡಿ ಅಧಿಕಾರಿಗಳು ಸುಮಾರು 13 ಗಂಟೆಗಳಿಗೂ ಅಧಿಕ ಕಾಲ ವಿಚಾರಣೆಗೊಳಪಡಿಸಿದ ನಂತರ ದೇಶ್ ಮುಖ್ ಅವರನ್ನು ಬಂಧಿಸಿರುವುದಾಗಿ ವರದಿ ವಿವರಿಸಿದೆ.
ಜಾರಿ ನಿರ್ದೇಶನಾಲಯ, ಸಿಬಿಐ ಮುಂಬಯಿ ಮತ್ತು ನಾಗ್ಪುರ್ ನಲ್ಲಿರುವ ಎಲ್ಲಾ ನನ್ನ ಮನೆಗಳು, ನನ್ನ ಕುಟುಂಬ ಸದಸ್ಯರು, ನಮ್ಮ ನಿಕಟವರ್ತಿಗಳ ನಿವಾಸದ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿತ್ತು. ಅಲ್ಲದೇ ಜಾರಿ ನಿರ್ದೇಶನಾಲಯದಿಂದ ದೇಶ್ ಮುಖ್ ತಪ್ಪಿಸಿಕೊಂಡಿರುವುದಾಗಿ ಸುಳ್ಳು ಸುದ್ದಿ ಹರಡಿಸಿದ್ದರು. ಆದರೆ ನಾನೇ ಇಂದು ಖುದ್ದಾಗಿ ಇ.ಡಿ ಕಚೇರಿಗೆ ಆಗಮಿಸಿದ್ದೇನೆ ಎಂದು ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ನೀಡಿರುವುದಾಗಿ ವರದಿ ತಿಳಿಸಿದೆ.