ಚಿತ್ರ: ಏನೆಂದು ಹೆಸರಿಡಲಿ ನಿರ್ಮಾಣ: ಶ್ರೀನಿವಾಸ ಕುಲಕರ್ಣಿ ನಿರ್ದೇಶನ: ರವಿ ಬಸಪ್ಪನದೊಡ್ಡಿ
ತಾರಾಗಣ: ಅರ್ಜುನ್, ರೋಜ, ಚಿತ್ಕಳಾ, ಬಿರಾದಾರ್, ಸಂಕೇತ್ ಕಾಶಿ, ಸುನೇತ್ರಾ ಪಂಡಿತ್ ಮುಂತಾದವರು
ಮದುವೆಯ ವಿಷಯ ಪ್ರಸ್ತಾಪ ಮಾಡಬೇಕಾದರೆ, ಮೊದಲು ಅವರಿಗೆ ಹತ್ತಿರವಾಗಬೇಕು, ಹತ್ತಿರವಾಗಬೇಕಾದರೆ ಪರಿಚಯವಾಗಬೇಕು, ಪರಿಚಯವಾಗಬೇಕಾದರೆ ಗಮನ ಸೆಳೆಯಬೇಕು … ಹೀಗೆ ತೀರ್ಮಾನಿಸಿಕೊಂಡೇ ತಾನು ಪ್ರೀತಿಸುವ ಹುಡುಗಿಯ ತಾಯಿಯನ್ನು ಭೇಟಿಯಾಗುವುದಕ್ಕೆ ಹೊರಡುತ್ತಾನೆ ಗೌತಮ್. ಗಮನ ಸೆಳೆಯುತ್ತಾನೆ, ಪರಿಚಯ ಮಾಡಿಕೊಳ್ಳುತ್ತಾನೆ, ಹತ್ತಿರವೂ ಆಗುತ್ತಾನೆ … ಆದರೆ, ತಾನು ಪ್ರೀತಿಸುತ್ತಿರುವ ವಿಷಯವನ್ನು ಹೇಳಿಕೊಳ್ಳುವುದಕ್ಕೆ ಮಾತ್ರ ಆಗುವುದಿಲ್ಲ. ಮದುವೆಯ ದಿನ ಹುಡುಗಿಯ ತಾಯಿಗೆ ಈ ವಿಷಯ ಗೊತ್ತಾದರೂ, ಮದುವೆ ನಿಲ್ಲುವುದಕ್ಕೆ ಅವನು ಬಿಡುವುದಿಲ್ಲ. ಮಗಳಿಗೆ ಇಷ್ಟವಿಲ್ಲದಿದ್ದರೂ ತಾಯಿಯ ಸಂತೋಷಕ್ಕಾಗಿ ಮದುವೆಯಾಗುತ್ತಾಳೆ. ತಾಯಿಗೆ ಇಷ್ಟವಿಲ್ಲದಿದ್ದರೂ ಮಗಳ ಪ್ರೇಮಿ ಹೇಳಿದ ಎಂದು ಮದುವೆ ಮಾಡಿಸುತ್ತಾಳೆ. ಅಲ್ಲಿಗೆ ಚಿತ್ರ ಮುಗಿಯುತ್ತದೆ ಎಂದು ಭಾವಿಸಬೇಡಿ. ಇದು ಇಂಟರ್‌ವೆಲ್ ಪಾಯಿಂಟು. ಸಾಮಾನ್ಯವಾಗಿ ಇದಿಷ್ಟೇ ಕಥೆಯನ್ನು ಎರಡೂವರೆ, ಮೂರು ಗಂಟೆ ಹೇಳುವ ನಿರ್ದೇಶಕರಿದ್ದಾರೆ. ಆದರೆ, ನಿರ್ದೇಶಕ ರವಿ ಬಸಪ್ಪನದೊಡ್ಡಿಗೆ ಅಷ್ಟೆಲ್ಲಾ ಎಳೆದಾಡಿದರೆ, ಜನಕ್ಕೆ ಬೋರೆದ್ದು ಹೋಗುತ್ತದೆ ಎಂಬುದು ಸ್ಪಷ್ಟವಾಗಿ ಗೊತ್ತು. ಅದೇ ಕಾರಣಕ್ಕೆ ಅವರು ಫಟಾಫಟ್ ಸಿನಿಮಾ ಮಾಡಿದ್ದಾರೆ. ಇಲ್ಲಿ ಎಲ್ಲವೂ ಬೇಗ ನಡೆಯುತ್ತದೆ.
ಬೇರೆ ಸಿನಿಮಾಗಳಲ್ಲಿ ನಾಯಕಿಯನ್ನು ನಾಯಕ ನೋಡುವುದು, ಅವಳಿಗೆ ಪ್ರಪೋಸ್ ಮಾಡುವುದೇ ಗಂಟೆಗಟ್ಟಲೆ ಆದರೆ, ಇಲ್ಲಿ ಕೇವಲ ಒಂದು ನಿಮಿಷದಲ್ಲಿ ನಾಯಕ-ನಾಯಕಿಯರಿಬ್ಬರನ್ನು ಪ್ರೀತಿಗೆ ಸಿಲುಕಿಸುತ್ತಾರೆ ನಿರ್ದೇಶಕರು. ಹಾಗಾಗಿ ಎಲ್ಲವು ಬೇಗ ಆಗುತ್ತದೆ ಮತ್ತು ಇಂಟರ್‌ವೆಲ್ ಹೊತ್ತಿಗೆ ಹುಡುಗಿಯ ಮದುವೆಯೂ ಆಗಿ ಹೋಗುತ್ತದೆ. ಮುಂದೆ? ಅಲ್ಲಿಂದ ಹೊಸ ಟ್ವಿಸ್ಟ್ ತರುತ್ತಾರೆ ಅವರು. ಮಗಳನ್ನು ಗಂಡನ ಮನೆಗೆ ಕಳುಹಿಸಿ ಒಂಟಿಯಾಗುವ ಅಮ್ಮನಿಗೆ, ಮಗಳ ಬಾಯ್‌ಫ್ರೆಂಡ್ ಹತ್ತಿರವಾಗುತ್ತಾನೆ. ಅವನ ಸಹವಾಸದಿಂದ ಆಕೆ ಬದಲಾಗುತ್ತಾಳೆ ಮತ್ತು ಅವನಿಗೆ ಇನ್ನಷ್ಟು ಹತ್ತಿರವಾಗುತ್ತಾಳೆ. ಅಷ್ಟರಲ್ಲಿ ಗಂಡನನ್ನು ಕಳೆದುಕೊಂಡ ಮಗಳು ಮನೆಗೆ ವಾಪಸ್ಸಾಗುತ್ತಾಳೆ. ತನ್ನ ಅಮ್ಮ ಮತ್ತು ಬಾಯ್‌ಫ್ರೆಂಡ್ ಇಬ್ಬರೂ ಹತ್ತಿರವಾಗಿರುವುದನ್ನು ನೋಡಿ ಕಸಿವಿಸಿಯಾಗುತ್ತಾಳೆ. ಆದರೆ, ಇಷ್ಟಕ್ಕೂ ಅವರಿಬ್ಬರ ನಡುವಿನ ಸಂಬಂಧವಾದರೂ ಎಂಥದ್ದು? ಅದೇ ಸಂದರ್ಭದಲ್ಲಿ ಚಿತ್ರದ ಟೈಟಲ್ ಸಾಂಗ್ ಬರುತ್ತದೆ. “ಏನೆಂದು ಹೆಸರಿಡಲಿ ನಾ ಈ ಭಾವಕೆ, ಏನೆಂದು ಹೆಸರಿಡಲಿ ನಾ ಈ ಬಂಧಕೆ, ಸ್ನೇಹವೆಂದು ಹೇಳುವುದೇ, ಮೋಹವೆಂದು ಹೇಳುವುದೇ …’ ಈ ಹಾಡಿನ ಮುಂದಿನ ಸಾಲು ಚಿತ್ರಕ್ಕೊಂದು ಅರ್ಥ ಕೊಡುತ್ತದೆ. ಆ ಸಾಲು ಏನು ಎನ್ನುವುದಷ್ಟೇ ಅಲ್ಲ, ಮುಂದೆ ಏನಾಗುತ್ತದೆ ಎನ್ನುವುದಕ್ಕೆ ಚಿತ್ರ ನೋಡಬೇಕು.
“ಏನೆಂದು ಹೆಸರಿಡಲಿ’ ಒಂದು ವಿಭಿನ್ನ ಪ್ರಯತ್ನ. ಅದರಲ್ಲೂ ಸಂಬಂಧಗಳ ಕುರಿತಾಗಿ ಚರ್ಚಿಸುವ ಈ ತರಹದ ಚಿತ್ರವೊಂದು ಬಂದಿರಲಿಲ್ಲ. ಅದರಲ್ಲೂ ಸ್ನೇಹ ಮತ್ತು ಮೋಹವನ್ನು ಮೀರಿದ ಭಾವ ಅದೆಷ್ಟು ಮುಖ್ಯ ಮತ್ತು ಅಂಥದ್ದೊಂದು ಭಾವವೇ ಸುಖ ಜೀವನಕ್ಕೆ ಸೂತ್ರ ಎನ್ನುವುದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ರವಿ. ಅದರಲ್ಲೂ ಕ್ಲೈಮ್ಯಾಕ್ಸ್‌ನಲ್ಲಿನ ಮೂರು ಪಾತ್ರಗಳ ನಡುವಿನ ಸಂಭಾಷಣೆಗಳೇ ಚಿತ್ರದ ಹೈಲೈಟ್ ಎಂದರೆ ತಪ್ಪಿಲ್ಲ. ಈ ಉದ್ದೇಶ ಮತ್ತು ಸಂದೇಶಗಳಿಗೆ ಒಂದು ಕಥೆಯ ರೂಪ ಕೊಟ್ಟು, ಯಾವುದನ್ನೂ ಹೆಚ್ಚು ಎಳೆಯದೆ, ಹೇಳಬೇಕಾದ್ದನ್ನೆಲ್ಲಾ 112 ನಿಮಿಷಗಳಲ್ಲಿ ಹೇಳಿ ಮುಗಿಸಿಬಿಟ್ಟಿದ್ದಾರೆ ರವಿ. ಆದರೆ, ಅದರಲ್ಲೂ ಸಮಸ್ಯೆಗಳಿವೆ. ಅದರಲ್ಲೂ ಸುನೇತ್ರಾ ಪಂಡಿತ್ ಅವರು ಇಂಗ್ಲೀಷ್ ಮತ್ತು ಕನ್ನಡದ ಕಲಬೆರೆಕೆಯ ಮಾತುಗಳು ವಿಪರೀತ ಕಿರಿಕಿರಿ ಮಾಡುತ್ತವೆ. ಚಿತ್ರಕ್ಕಿರುವ ಗಾಂಭೀರ್ಯವನ್ನೇ ಆ ಪಾತ್ರ ಮತ್ತು ಅದರ ಮಾತುಗಳು ಹಾಳು ಮಾಡುತ್ತವೆ. ಹೋಗಲಿ ಆ ಪಾತ್ರ ನಗು ಉಕ್ಕಿಸುತ್ತದಾ ಎಂದರೆ ಅದೂ ಇಲ್ಲ. ಹಾಗಿರುವಾಗ ಅಂಥದ್ದೊಂದು ಪಾತ್ರವನ್ನು ಅನಾವಶ್ಯಕವಾಗಿ ತಂದು, ಮೊಸರಲ್ಲಿ ಕಲ್ಲು ಹಾಕಿಬಿಡುತ್ತಾರೆ ರವಿ. ಈ ತರಹದ ಸಮಸ್ಯೆಗಳಿಂದ ಹೊರಬಂದರೆ, ಚಿತ್ರ ಅರಗಿಸಿಕೊಳ್ಳುವುದು ಸುಲಭ.
ಚಿತ್ರದಲ್ಲಿ ಕಲಾವಿದರಿಗಿಂತ, ತಂತ್ರಜ್ಞರು ಮಿಂಚುತ್ತಾರೆ. ಮೋಹನ್ ನಾಯಕ್ ಅವರ ಛಾಯಾಗ್ರಹಣ ಮತ್ತು ಸುರೇಂದ್ರನಾಥ್ ಅವರ ಸಂಗೀತ ಮೆಲುಕು ಹಾಕುವಂತಿದೆ. ಜೋಗಿ ಅವರ ಸಂಭಾಷಣೆ ತೂಕವಾಗಿದೆ. ಬಹುಶಃ ಅದೇ ಲೆವೆಲ್ಲಿಗೆ ಅಭಿನಯವೂ ಇದ್ದಿದ್ದರೆ ಚಿತ್ರಕ್ಕೆ ದೊಡ್ಡ ಪ್ಲಸ್ ಆಗುತಿತ್ತು. ಆದರೂ ಅರ್ಜುನ್, ಚಿತ್ಕಳಾ ಸಾಕಷ್ಟು ಪ್ರಯತ್ನಪಟ್ಟು ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ. ರೋಜಾ ಅವರ ಅಭಿನಯಕ್ಕಿಂತ ಹೆಚ್ಚಾಗಿ ಎದ್ದು ಕಾಣುವುದು ಅವರ ಮೇಕಪ್. ಕಾಶಿ ಅವರ ಧ್ವನಿಯನ್ನು ಪ್ರೇಕ್ಷಕ ಖಂಡಿತಾ ಮಿಸ್ ಮಾಡಿಕೊಳ್ಳುತ್ತಾನೆ. ಇನ್ನು ಮಿಲಿಂದ ಗುಣಾಜಿಗೆ ಇಲ್ಲಿ ಹೆಚ್ಚು ಕೆಲಸವಿಲ್ಲ.
ಚೇತನ್ ನಾಡಿಗೇರ್