Advertisement

ಎಂಡೋ ಸಂತ್ರಸ್ತರಿಗೆ ಅಗತ್ಯ ಸೌಕರ್ಯ: ದ.ಕ. ಜಿಲ್ಲಾಧಿಕಾರಿ ಡಾ|ರಾಜೇಂದ್ರ ಕೆ.ವಿ.

12:54 AM Jan 18, 2022 | Team Udayavani |

ಮಂಗಳೂರು: ಎಂಡೊಸಲ್ಫಾನ್‌ ಸಂತ್ರಸ್ತರ ಸಮಸ್ಯೆಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಗುರುತಿನ ಚೀಟಿ, ಸ್ಮಾರ್ಟ್‌ ಕಾರ್ಡ್‌, ಆರೋಗ್ಯ ಸೇವೆ ಮತ್ತಿತರರ ವಿವಿಧ ಸೌಲಭ್ಯಗಳನ್ನು ತಲುಪಿಸುವ ವಿಚಾರದಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸ ಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಸೂಚನೆ ನೀಡಿದರು.ಅವರು ಸೋಮವಾರ ದ.ಕ. ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಎಂಡೋಸಲ್ಫಾನ್‌ ಸಂತ್ರಸ್ತರ ಪುನರ್ವಸತಿ ಬಗ್ಗೆ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಎಂಡೋ ಸಂತ್ರಸ್ತರ ಪುನರ್ವಸತಿ
ಕಾರ್ಯಕ್ರಮಗಳಡಿ, ಅವರ ಅನುಕೂಲ ಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಅವು ಗಳನ್ನು ತುರ್ತಾಗಿ ಒದಗಿಸಲು ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ನಿಯಮಿತವಾಗಿ ಆಯಾ ತಾಲೂಕುಗಳಲ್ಲಿ ಸಭೆ ನಡೆಸಿ, ಸಂತ್ರಸ್ತರ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸಬೇಕು. ಸಹಾಯಕ ಆಯುಕ್ತರು, ತಹಶೀಲ್ದಾರರು, ತಾಲೂಕು ಆರೋಗ್ಯ ಅಧಿಕಾರಿಗಳು, ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಆಯಾ ಹೋಬಳಿಗಳ ಕಂದಾಯ ನಿರೀಕ್ಷಕರು ಇನ್ನು ಮುಂದೆ ನಿಯಮಿತವಾಗಿ ತಾಲೂಕು ಮಟ್ಟದ ಸಭೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

12,000 ಅರ್ಜಿ
ಅಂಗವಿಕಲ ಗುರುತಿನ ಚೀಟಿ ನೀಡುವ ಬಗ್ಗೆ 12,000 ಅರ್ಜಿಗಳು ಸಲ್ಲಿಕೆಯಾಗಿದ್ದು, 3,000 ತಿರಸ್ಕೃತವಾಗಿವೆ. ತಿರಸ್ಕೃತವಾದವುಗಳಲ್ಲಿ ಸುಮಾರು 1,500 ಅರ್ಜಿಗಳು ಎಂಡೊ ಸಂತ್ರಸ್ತರದ್ದು ಇರಬಹುದು. ಈ ಬಗ್ಗೆ ತಾಲೂಕು ತಹಶೀಲ್ದಾರರು ತಾಂತ್ರಿಕ ತಂಡದ ಜತೆ ಸಂಬಂಧಿತ ಗ್ರಾಮಗಳ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸಬೇಕು ಎಂದು ಡಿಸಿ ಸೂಚಿಸಿದರು.

ಕೊಕ್ಕಡ ಪಾಲನಾ ಕೇಂದ್ರದಿಂದ ಸಂತ್ರಸ್ತರಿಗೆ ಡೈಪರ್ ಪೂರೈಸುವ ಬಗ್ಗೆ ಮುಂದಿನ 15 ದಿನಗಳ ತನಕ ಸ್ಥಳೀಯವಾಗಿ ಡೈಪರ್‌ಗಳನ್ನು ಖರೀದಿಸಿ ಒದಗಿಸಲು ಹಾಗೂ ಬಳಿಕ ಟೆಂಡರುದಾರರಿಗೆ ವಹಿಸುವಂತೆ ಡಿಸಿ ಸೂಚಿಸಿದರು.

ಉಪ್ಪಿನಂಗಡಿಯ ಇಸ್ಮಾಯಿಲ್‌ ಅವರು ತಮ್ಮ ಎಂಡೋ ಪೀಡಿತ ಪುತ್ರ ಮಹಮದ್‌ ಆದಿಲ್‌ನನ್ನು ಹೆಗಲ ಮೇಲೆ ಹಾಕಿಕೊಂಡು ಸಭೆಯ ವೇದಿಕೆಯತ್ತ ತೆರಳಿ ಜಿಲ್ಲಾಧಿಕಾರಿಗಳ ಬಳಿ ತನಗೆ ಮನೆ ಒದಗಿಸ ಬೇಕೆಂದು ಮನವಿ ಮಾಡಿದರು.

Advertisement

ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ ಶಾನುಬಾಗ್‌ ಅವರು ಎಂಡೊ ಪೀಡಿತರ ಮನೆಗೆ ಫಿಸಿಯೊಥೆರಪಿಸ್ಟ್‌ಗಳ ಭೇಟಿಗೆ ಸಂಬಂಧಿಸಿ ಪ್ರಸ್ತಾವಿಸಿ, ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿಯೇ ಫಿಸಿಯೋಥೆರಪಿಸ್ಟ್‌ಗಳನ್ನು ನೇಮಕ ಮಾಡಬಹುದೆಂದು ಸಲಹೆ ಮಾಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪೃಥ್ವಿರಾಜ್‌ ವರ್ಣೇ ಕರ್‌ ಮಾತನಾಡಿದರು. ಡಿಎಚ್‌ಒ ಡಾ| ಕಿಶೋರ್‌ ಕುಮಾರ್‌, ಸಹಾಯಕ ಆಯುಕ್ತರಾದ ಮದನ್‌ ಮೋಹನ್‌, ಯತೀಶ್‌, ಜಿ.ಪಂ. ಉಪಕಾರ್ಯದರ್ಶಿ ಆನಂದಕುಮಾರ್‌ ಹಾಗೂ ಎಂಡೋ ಸಲ್ಫಾನ್‌ ನೋಡಲ್‌ ಅಧಿಕಾರಿ ಡಾ| ನವೀನ್‌ ಕುಲಾಲ್‌ ವೇದಿಕೆಯಲ್ಲಿದ್ದರು.

ತಾಲೂಕು ಆರೋಗ್ಯ ಅಧಿಕಾರಿಗೆ ನೋಟಿಸ್‌
2021 ಫೆಬ್ರವರಿಯಲ್ಲಿ ಸಂತ್ರಸ್ತರೊಬ್ಬರಿಗೆ ಹೊಸ ಸ್ಮಾರ್ಟ್‌ ಕಾರ್ಡ್‌ ಕೊಡುವುದಾಗಿ ಹೇಳಿ ಹಳೆಯ ಕಾರ್ಡನ್ನು ಪಡೆದಿದ್ದು, ಇದೀಗ 11 ತಿಂಗಳಾದರೂ ಹೊಸ ಕಾರ್ಡ್‌ ಬಂದಿಲ್ಲ; ಹಳೆಯ ಕಾರ್ಡನ್ನೂ ಹಿಂದಿರುಗಿಸಿಲ್ಲ ಎಂದು ಎಂಡೊ ಸಂತ್ರಸ್ತರ ಹೋರಾಟ ಸಮಿತಿಯ ಶ್ರೀಧರ ಗೌಡ ಆರೋಪಿಸಿದರು. ವಿಳಂಬವೇಕೆ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದಾಗ ಸಂಬಂಧಪಟ್ಟ ಕೇಸ್‌ ವರ್ಕರ್‌ ಇಲ್ಲ ಎಂದು ಬೆಳ್ತಂಗಡಿ ತಾಲೂಕು ಆರೋಗ್ಯ ಅಧಿಕಾರಿ ಡಾ| ಕಲಾಮಧು ತಿಳಿಸಿದರು. ತೀವ್ರ ಅಸಮಾಧಾನಗೊಂಡ ಜಿಲ್ಲಾಧಿಕಾರಿಗಳು ಇದು ಜವಾಬ್ದಾರಿಯುತ ಅಧಿಕಾರಿಯ ಬೇಜವಾಬ್ದಾರಿತನದ ಹೇಳಿಕೆ. ಜಿಲ್ಲಾಡಳಿತಕ್ಕೇ ಇದು ಮುಜುಗರ ತರುವ ಸಂಗತಿ ಎಂದು ತರಾಟೆಗೆ ತೆಗೆದುಕೊಂಡರು. ಬಳಿಕ ಈ ಬಗ್ಗೆ ತಾಲೂಕು ಆರೋಗ್ಯ ಅಧಿಕಾರಿಗೆ ನೋಟೀಸು ಜಾರಿ ಮಾಡುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ಆದೇಶಿಸಿದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next