Advertisement

Endosulfan ಸಂತ್ರಸ್ತೆ ಮೇಲೆ ಅತ್ಯಾಚಾರ: 10 ವರ್ಷ ಕಠಿನ ಸಜೆ

12:10 AM Sep 12, 2023 | Team Udayavani |

ಮಂಗಳೂರು: ಎಂಡೋಸಲ್ಫಾನ್‌ ಸಂತ್ರಸ್ತೆಯಾಗಿರುವ ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಎಸಗಿದಾತನಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿ ಕೆ.ಪಿ. ಅವರು 10 ವರ್ಷಗಳ ಕಠಿನ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

Advertisement

ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ರಾಜೇಶ್‌ ರೈ (33) ಶಿಕ್ಷೆಗೊಳಗಾದವನು. ಆತ ತನ್ನದೇ ಊರಿನ 19 ವರ್ಷದ ಪರಿಶಿಷ್ಟ ಜಾತಿಯ ಯುವತಿ ಮೇಲೆ ಅತ್ಯಾಚಾರವೆಸಗಿದ್ದ.

ಪ್ರಕರಣದ ವಿವರ
2015ರ ಅ.1ರಂದು ಯುವತಿಯ ತಂದೆ, ತಾಯಿ ಮತ್ತು ಸಹೋದರಿಯರು ತೋಟದ ಕೆಲಸಕ್ಕೆಂದು ಹೋಗಿದ್ದರು. ಯುವತಿ ಮನೆಯಲ್ಲಿ ಒಬ್ಬಳೇ ಇರುವುದನ್ನು ಅರಿತ ರಾಜೇಶ್‌ ರೈ ಮದುವೆಯಾಗುವ ಭರವಸೆ ನೀಡಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಎಎಸ್‌ಪಿ ರಾಹುಲ್‌ ಕುಮಾರ್‌ ತನಿಖೆ ನಡೆಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಯಿದೆಯಡಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

14 ಸಾಕ್ಷಿದಾರರ ವಿಚಾರಣೆ
ಆರೋಪಿ ವಿರುದ್ಧ ಒಟ್ಟು 27 ಸಾಕ್ಷಿದಾರರನ್ನು ದೋಷಾರೋಪಣಪಟ್ಟಿಯಲ್ಲಿ ಉಲ್ಲೇಖೀಸಲಾಗಿತ್ತು. ಅದರಲ್ಲಿ 14 ಮಂದಿಯನ್ನು ವಿಚಾರಣೆ ನಡೆಸಲಾಗಿತ್ತು. ಯುವತಿ 5ನೇ ತರಗತಿವರೆಗೆ ಓದಿದ್ದು, ಆಕೆಯ ಹೆತ್ತವರು ಅನಕ್ಷರಸ್ಥರು. 2021ರ ಸೆ.22ರಂದು ಆರಂಭಗೊಂಡಿದ್ದ ವಿಚಾರಣೆ 2023ರ ಫೆ.27ರಂದು ಮುಗಿದಿತ್ತು. ಸೆ.7ರಂದು ನ್ಯಾಯಾಧೀಶರು ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿ ಭಾರತೀಯ ದಂಡ ಸಂಹಿತೆ ಕಲಂ 376(2)(ಎಲ್‌) ಅಡಿಯಲ್ಲಿ 10 ವರ್ಷದ ಕಠಿನ ಸಜೆ ಹಾಗೂ 10,000 ರೂ. ದಂಡ, ಕಲಂ 448ರಡಿ 3 ತಿಂಗಳ ಕಠಿನ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಜತೆಗೆ ಸಂತ್ರಸ್ತೆಗೆ ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದ್ದಾರೆ. ಅಭಿಯೋಜನೆ ಪರವಾಗಿ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ಅವರು ವಿಚಾರಣೆ ನಡೆಸಿ ವಾದ ಮಂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next