ಇಂಡಿ: ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಖೇಡ ಕಾಲೇಜು ಹತ್ತಿರ ಕೊಳಚೆ ನಿರ್ಮೂಲನೆ ಮಂಡಳಿಯವರು ಹುಡ್ಕೋ ಕಾಲೋನಿಯಲ್ಲಿ ನಿರ್ಮಿಸಿದ ಮನೆಗಳಿಗೆ ಮೂಲಭೂತ ಸೌಕರ್ಯಗಳಿಲ್ಲದೆ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಪುರಸಭೆ ಚುನಾವಣೆ ಬಂದಿದ್ದು ಈ ಬಾರಿ ಚುನಾವಣೆ ಬಹಿಷ್ಕರಿಸಲು ಅಲ್ಲಿನ ನಿವಾಸಿಗಳು ನಿರ್ಧರಿಸಿದ್ದಾರೆ.
ಈ ಕಾಲೋನಿಯಲ್ಲಿ ರಸ್ತೆಗಳಿಲ್ಲ, ಕುಡಿಯಲು ನೀರಿನ ವ್ಯವಸ್ಥೆ ಇಲ್ಲ, ಒಳ ಚರಂಡಿಯಂತೂ ಇಲ್ಲವೇ ಇಲ್ಲ. ಮಳೆಗಾಲ ಬಂತೆಂದರೆ ಸಾಕು ಇಲ್ಲಿನ ಜನ ತಮ್ಮ ಮನೆಗೆ ಬೈಕ್, ಕಾರ್‌ಗಳಲ್ಲಿ ಹೋಗಬೇಕಾದರೆ ಸಾಧ್ಯವಾಗುತ್ತಿಲ್ಲ. ಸಣ್ಣ ಮಳೆಯಾದರೆ ಸಾಕು ರಸ್ತೆಯಲ್ಲಿ ಕೆಸರು ಗದ್ದೆಯಾಗಿ ಮಾರ್ಪಟ್ಟು ಬಿಡುತ್ತದೆ. ಹೀಗಾಗಿ ಅಲ್ಲಿನ ನಿವಾಸಿಗಳಿಗೆ ಅತಿಯಾದ ತೊಂದರೆಯಾಗುತ್ತಿದೆ.
ಕುಡಿಯುವ ನೀರಿಲ್ಲ: ಇನ್ನು ಇಲ್ಲಿ ಕುಡಿಯುವ ನೀರಿಗೆ ಯಾವುದೇ ಬೋರ್‌ವೆಲ್ಗಳನ್ನು ಕೊರೆಸಿಲ್ಲ. ಹೀಗಾಗಿ ಅಲ್ಲಿ ವಾಸಿಸುವ ಜನ ನೀರಿಗೆ ಪರಿತಪಿಸುವಂತಾಗಿದೆ. ಪುರಸಭೆಯವರಿಗೆ ಹೇಳಿದರೆ ಬೋರ್‌ವೆಲ್ ಕೋರೆಸುತ್ತೇವೆ ಎಂದು ಹೇಳುತ್ತಾರೆ. ಆದರೆ ಇದುವರೆಗೂ ಬೋರ್‌ವೆಲ್ ಕೊರೆಸಿಲ್ಲ.
ಇಪ್ಪತ್ತು ವರ್ಷಗಳ ಹಿಂದೆ ಕೊಳಚೆ ನಿರ್ಮೂಲನೆ ಮಂಡಳಿಯವರು 120 ಮನೆಗಳನ್ನು ನಿರ್ಮಿಸಿ ಬಡ ಜನರಿಗೆ ನೀಡಿದ್ದಾರೆ. ಆದರೆ ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಪುರಸಭೆ ಅಧ್ಯಕ್ಷರು ಹಾಗೂ ಸಂಬಂಧಿಸಿದ ಸದಸ್ಯರಿಗೆ ಹತ್ತಾರು ಬಾರಿ ಮನವಿ ಮಾಡಿಕೊಂಡರೂ ಅವರು ನಾಳೆಯೇ ಮಾಡಿಸುತ್ತೇನೆ ಎಂದು ಹೇಳುತ್ತಾರೆ. ಸರಿಯಾಗಿ ಒಂದು ವರ್ಷಕ್ಕಿಂತ ಹೆಚ್ಚಿಗೆ ಸಮಯವಾಯಿತು ಸದಸ್ಯರ ಹಾಗೂ ಅಧ್ಯಕ್ಷರ ಗಮನಕ್ಕೆ ತಂದು ಆದರೂ ಯಾವುದೇ ಪ್ರಯೋಜನವಾಗಿಲ್ಲ. ರಾತ್ರಿಯಾದರೆ ಸಾಕು ಬೀದಿ ದೀಪಗಳಿಲ್ಲದೆ ಇರುವುದರಿಂದ ಕಾಡಿನಲ್ಲಿದ್ದಂತೆ ಭಾಸವಾಗುತ್ತದೆ ಎಂದು ಸ್ಥಳೀಯ ನಾಗರಿಕರು ಆರೋಪಿಸಿದ್ದಾರೆ.
ಕೊಳಚೆ ನಿರ್ಮೂಲನೆ ಮಂಡಳಿಯವರು ನೀಡಿದ 120 ಮನೆಗಳಲ್ಲಿ 60 ಕುಟುಂಬಗಳು ವಾಸಿಸುತ್ತಿದ್ದಾರೆ. ಇನ್ನುಳಿದ 60 ಮನೆಗಳಿಗೆ ಬೀಗ ಹಾಕಿದ್ದಾರೆ. ಅಲ್ಲದೆ ಕೆಲ ಜನ ಬೇರೆ ಕಡೆ ವಾಸವಿರುವ ಕಾರಣ ಅಲ್ಲಿ ಬಾಡಿಗೆ ನೀಡಿದ್ದಾರೆ. ಹೀಗಾಗಿ ಅಲ್ಲಿ ಕೆಲ ಜನರು ಹಾಡು ಹಗಲೆ ಅನೈತಿಕ ಚಟುವಟಿಕೆ ಮಾಡುತ್ತಿದ್ದಾರೆ. ಸುಸಂಸ್ಕೃತ ಮನೆತನದವರು ಅಲ್ಲಿ ವಾಸವಿರಲು ಕಷ್ಟವಾಗುತ್ತಿದೆ. ಇಲ್ಲಿ ಯಾವೊಬ್ಬ ಅಧಿಕಾರಿಗಳೂ ಬರಲ್ಲ. ಪೊಲೀಸ್ ಅಧಿಕಾರಿಗಳು ಈ ಕುರಿತು ಗಮನ ಹರಿಸಿ ಇಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಗೆ ಬ್ರೇಕ್ ಹಾಕಿಸಬೇಕು. ಇಲ್ಲವಾದಲ್ಲಿ ನಾವು ಈ ಬಾರಿ ಪುರಸಭೆ ಚುನಾವಣೆ ಬಹಿಷ್ಕರಿಸುತ್ತೇವೆ.
•
ಶಂಕರ ಹೂಗಾರ, ಸ್ಥಳೀಯ ನಿವಾಸಿ
ಕೊಳಚೆ ನಿರ್ಮೂಲನೆ ಮಂಡಳಿಯವರು ತಾವೇ ಸ್ವತಃ ಜಾಗ ಖರೀದಿಸಿ ಮನೆ ಕಟ್ಟಿ ಕೊಟ್ಟಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಪುರಸಭೆ ವ್ಯಾಪ್ತಿಗೆ ನೀಡಿದ್ದಾರೆ. ಆ ಕಾಲೋನಿ ಅಭಿವೃದ್ಧಿಗೆ ಈಗಾಗಲೆ ರಸ್ತೆ ಮತ್ತು ವಾಟರ್ ಟ್ಯಾಂಕ್ ನಿರ್ಮಾಣಕ್ಕೆ ಹಣ ಮಂಜೂರಾಗಿದೆ. ನೀತಿ ಸಂಹಿತೆ ಇರುವುದರಿಂದ ಗುತ್ತಿಗೆದಾರರು ಇನ್ನೂ ಕಾರ್ಯ ಪ್ರಾರಂಭಿಸಿಲ್ಲ.
•ಶ್ರೀಕಾಂತ ಕುಡಿಗನೂರ, ಪುರಸಭೆ ಅಧ್ಯಕ್ಷ
•ಉಮೇಶ ಬಳಬಟ್ಟಿ