Advertisement

ದೇಶದಲ್ಲಿ ಏಕ ಚಕ್ರಾಧಿಪತ್ಯ ಅಂತ್ಯಗೊಳಿಸಿ

11:51 PM Aug 18, 2019 | Team Udayavani |

ಬೆಂಗಳೂರು: ದೇಶದಲ್ಲಿ ಏಕ ಚಕ್ರಾಧಿಪತ್ಯ ವ್ಯವಸ್ಥೆ ಬರುತ್ತಿದ್ದು, ಪ್ರಜಾಪ್ರಭುತ್ವ ಗಂಡಾಂತರದಲ್ಲಿದೆ. ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಜೀವಂತವಾಗಿವೆ ಎನ್ನುವುದನ್ನು ಉಪ ಚುನಾವಣೆ ಮೂಲಕ ದೇಶಕ್ಕೆ ಸಂದೇಶ ರವಾನಿಸಬೇಕೆಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

Advertisement

ಭಾನುವಾರ ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದಲ್ಲಿ ದೇವೇಗೌಡರು ಜೆಡಿಎಸ್‌ ನಿಷ್ಠಾವಂತ ಕಾರ್ಯಕರ್ತರ ಸಭೆ ನಡೆಸಿ, ಪಕ್ಷದ ವಿರುದ್ಧ ಬಂಡಾಯ ಸಾರಿ ಅನರ್ಹಗೊಂಡಿರುವ ಗೋಪಾಲಯ್ಯ ಹಾಗೂ ಅವರ ಪತ್ನಿ ವಿರುದ್ಧ ವಾಗ್ಧಾಳಿ ನಡೆಸಿದರು. ರಾಜ್ಯದಲ್ಲಿ ಉಪ ಚುನಾವಣೆ ಅಥವಾ ಸಾರ್ವತ್ರಿಕ ಚುನಾವಣೆ ಬರಬಹುದು, ಕಾರ್ಯಕರ್ತರು ಎಲ್ಲದಕ್ಕೂ ಸಿದ್ಧರಾಗಿ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರ ವಿರುದ್ಧವೂ ಪರೋಕ್ಷ ವಾಗ್ಧಾಳಿ ನಡೆಸಿದ ಅವರು, ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿ ಎಂದು ಕಾಂಗ್ರೆಸ್‌ ಬಳಿ ನಾನು ಹೋಗಿರಲಿಲ್ಲ. ನೀವೇ ಸಿಎಂ ಆಗಿ ಎಂದು ಖರ್ಗೆ ಅವರ ಹೆಸರನ್ನು ಸೂಚಿಸಿದೆ. ಹಿಂದೆ ಅನುಭವಿಸಿದ ನೋವು, ಮತ್ತೆ ಬರುವುದು ಬೇಡ ಎಂದು ಹೇಳಿದ್ದೆ. ಆದರೆ ಕುಮಾರಸ್ವಾಮಿ ಅವರೇ ಸಿಎಂ ಆಗಲಿ ಎಂದು ಕಾಂಗ್ರೆಸ್‌ ನಾಯಕರಾದ ಗುಲಾಂ ನಬಿ ಆಜಾದ್‌, ಗೆಹ್ಲೋಟ್ ಹಠ ಹಿಡಿದರು, ಹಾಗಾಗಿಯೇ ನಾನು ಒಪ್ಪಿಕೊಂಡೆ ಎಂದರು.

ಗೋಪಾಲಯ್ಯ ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಆದರೂ ಪಕ್ಷ ತೊರೆದು ಹೋಗಿರುವುದರಿಂದ ಈ ಉಪ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಪ್ರಾದೇಶಿಕ ಪಕ್ಷಗಳು ಜೀವಂತ ಇವೆ ಎನ್ನುವುದನ್ನು ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದಿಂದಲೇ ಆರಂಭಿಸುವುದಾಗಿ ಘೋಷಿಸಿದರು. ನಾನು ವ್ಯಕ್ತಿ ನಿಂದನೆ ಮಾಡುವುದಿಲ್ಲ. ದುಡ್ಡು ತೆಗೆದುಕೊಂಡು ಹೋದರೂ ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ಗೋಪಾಲಯ್ಯನಿಗೆ ಈ ಪಕ್ಷ ಎಲ್ಲವನ್ನೂ ಕೊಟ್ಟಿದೆ.

ಈ ಹಿಂದೆ ಅವರ ಮನೆ ಮುಂದೆ ಪೋಲಿಸರು ಬಂದು ನಿಂತಾಗ ಏನಾಯಿತು ಆ ವಿಚಾರದ ಬಗ್ಗೆ ಈಗ ಚರ್ಚೆ ಬೇಡ, ಅವರ ಪತ್ನಿಯನ್ನು ಉಪಮೇಯರ್‌ ಮಾಡಬೇಕೆಂದು ಪಟ್ಟು ಹಿಡಿದಿದ್ದರು. ಅದಕ್ಕೆ ಎರಡು ಮಾತನಾಡದೆ ಉಪಮೇಯರ್‌ ಮಾಡಿದೆ. ಅಲ್ಲದೆ ಪ್ರತಿವರ್ಷ ಒಂದಲ್ಲ ಒಂದು ಕಮಿಟಿ ಸದಸ್ಯರನ್ನಾಗಿ ಮಾಡುತ್ತಿದ್ದೆ. ಆರ್ಥಿಕ ಸ್ಥಾಯಿ ಸಮಿತಿ ಜವಾಬ್ದಾರಿ ನೀಡಿದೆ. ಆದರೆ ಅವರು ನಮ್ಮನ್ನು ಬಿಟ್ಟು ಹೊದರು. ಇದನ್ನು ನಾನು ಸವಾಲಾಗಿ ಸ್ವೀಕರಿಸಿದ್ದೇನೆ, ಈ ಕ್ಷೇತ್ರದ ಜನತೆ ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳಿದರು.

Advertisement

ಗೋಪಾಲಯ್ಯನವರ ಹಿಂದೆ ಬೇರೊಂದು ಶಕ್ತಿ ಇದೆ. ಅದನ್ನು ನಾನು ಈಗ ಹೇಳುವುದಿಲ್ಲ. ಈ ಪಕ್ಷವನ್ನು ಉಳಿಸಿಕೊಳ್ಳುವ ಶಕ್ತಿ ನಮಗಿದೆ. ಅವರಿಗೆ ಹಣದ ಶಕ್ತಿ ಇದೆ, ನಮಗಿಲ್ಲ. ಅವರ ಮುಂದೆ ನೀವು ಪ್ರಾಮಾಣಿಕವಾಗಿ ಹೋರಾಡಬೇಕು, ಯಾವುದೇ ಆಮಿಷಕ್ಕೆ ಒಳಗಾಗಬೇಡಿ, ಪ್ರತಿವಾರ ಕಾರ್ಯಕರ್ತರ ಬಳಿ ಬರುತ್ತೇನೆ. ಪ್ರತಿ ವಾರ್ಡ್‌ಗೂ ಬಂದು ಪಕ್ಷ ಕಟ್ಟುತ್ತೇನೆ. ಅವರು ನಿಮ್ಮ ಮನೆಗೆ ಬಂದು ನಮ್ಮನ್ನು ಉಳಿಸಿಕೊಳ್ಳಿ ಎಂದು ಕೇಳುತ್ತಿದ್ದಾರೆ. ಆದರೆ, ಈಗ ಹತ್ತು ಮಂದಿ ಅವರ ಜೊತೆ ಹೋಗುವುದು ಕಷ್ಟವಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next